ಕಲಬುರಗಿ: ರಾಜ್ಯದ ಹಲವು ಭಾಗಗಳಲ್ಲಿ ಚಿರತೆ ದಾಳಿ ಸಾಮಾನ್ಯವಾಗಿದೆ, ಕೆಲವೆಡೆ ಕರಡಿ ದಾಳಿಯೂ ಆಗಿದೆ. ಆದರೆ, ಚಿತ್ತಾಪುರ ತಾಲೂಕಿನ ಕದ್ದರಗಿ ಗ್ರಾಮದಲ್ಲಿ ನರಿಗಳೂ ಮನೆಗೇ ದಾಳಿ ಮಾಡಲು ಶುರು ಮಾಡಿವೆ!
ಕದ್ದರಗಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಈ ಸಮಸ್ಯೆ ಇದೆ. ಜಮೀನಿನಲ್ಲಿ ಕೆಲಸ ಮಾಡುವಾಗ, ರಸ್ತೆಯಲ್ಲಿ ನಡೆದು ಹೋಗುವಾಗ ದಾಳಿ ಮಾಡಿದೆ. ಮನುಷ್ಯರು ಮಾತ್ರವಲ್ಲ ದನ ಕರುಗಳ ಮೇಲೂ ದಾಳಿ ಮಾಡಿವೆ. ನರಿಗಳು ತುಂಬ ಬಲಶಾಲಿಯಾಗಿದ್ದು, ಕಚ್ಚಿದ್ದನ್ನು ಸಾಮಾನ್ಯ ಪಟ್ಟಿಗೆ ಬಿಟ್ಟುಕೊಡುವುದಿಲ್ಲ. ಹೀಗಾಗಿ ದಾಳಿಗೊಳಗಾದವರು ಜೀವಾಪಾಯದ ಆತಂಕಕ್ಕೂ ಸಿಲುಕಿದ್ದಾರೆ.
ನರಿಗಳ ದಾಳಿ ಹಗಲು ಮಾತ್ರವಲ್ಲ, ರಾತ್ರಿಯೂ ನಡೆಯುತ್ತಿದೆ. ಸೋಮವಾರ ರಾತ್ರಿ ಗ್ರಾಮದ ವೃದ್ಧ ಮಹಿಳೆಯೊಬ್ಬರು ಮನೆಯ ಹೊರಗೆ ಜಗಲಿಯಲ್ಲಿ ಮಲಗಿದ್ದರು. ಆಗ ನರಿ ಬಂದು ಅವರ ಕೈಗೇ ಬಾಯಿ ಹಾಕಿದೆ. ಅವರು ಒಮ್ಮೆಗೇ ಕಿರುಚಿಕೊಂಡರೂ ಯಾರಿಗೂ ಎಚ್ಚರವಾಗಲಿಲ್ಲ. ಯಾಕೆಂದರೆ ಆಗ ರಾತ್ರಿ ಸುಮಾರು ಮೂರು ಗಂಟೆಯ ಹೊತ್ತು. ಜೋರಾಗಿ ಬೊಬ್ಬೆ ಹೊಡೆದ ಅವರ ಅಳುವನ್ನು ಕೇಳಿಸಿಕೊಂಡಿದ್ದು ಒಂದು ನಾಯಿ. ಅದು ಕೂಡಲೇ ಓಡಿ ಬಂದು ಮಹಿಳೆಯನ್ನು ಬಚಾವು ಮಾಡಿದ್ದಲ್ಲದೆ, ನರಿಯ ಮೇಲೆ ದಾಳಿ ಮಾಡಿ ಕೊಂದೇ ಹಾಕಿದೆ.
ಇದೇ ನಾಯಿ ಅದಕ್ಕಿಂತ ಮೊದಲು ಒಬ್ಬ ಯುವಕನ ಮೇಲೆ ದಾಳಿ ಮಾಡಿದೆ. ಆ ಯುವಕ ಸಾಕಷ್ಟು ಬಡಿದಾಡಿದರೂ ಅದರ ಮುಂದೆ ಕೈ ಸಾಗಲಿಲ್ಲ. ಕಚ್ಚಿದ ಕೈಯನ್ನು ಹೇಗೋ ಬಿಡಿಸಿಕೊಂಡರೂ ಅದು ಮತ್ತೆ ಮತ್ತೆ ದಾಳಿ ಮಾಡಿದೆ. ಎಗರಿ ಎಗರಿ ದಾಳಿ ಮಾಡುತ್ತಿದ್ದ ನರಿಯನ್ನು ತಡೆಯಲು ದೊಡ್ಡ ದೊಡ್ಡ ಕಲ್ಲು ಎಸೆದರೂ ಸಾಧ್ಯವಾಗಲಿಲ್ಲ ಎಂದು ಆ ಯುವಕ ಹೇಳಿಕೊಂಡಿದ್ದಾರೆ. ಕೊನೆಗೆ ಒಂದು ದೊಡ್ಡ ದಪ್ಪನೆಯ ಕೋಲನ್ನು ತಂದು, ಕಚ್ಚಲು ಮುಂದಾದ ನರಿಯ ಬಾಯಿಗೆ ತಳ್ಳಿದರು. ಆಗ ಅದು ಓಡಿದೆ.
ಈ ನಡುವೆ, ಇಲ್ಲಿನ ಮನೆಯೊಂದಕ್ಕೆ ಹೋಗಿ ಅಲ್ಲಿದ್ದ ದನದ ಕರುವಿನ ಮುಖಕ್ಕೆ ಕಚ್ಚಿದೆ. ಒಟ್ಟು ಒಂದೇ ದಿನ ನಾಲ್ಕು ಮಂದಿಗೆ ಕಚ್ಚಿ ಗಾಯಗೊಳಿಸಿದೆ. ಅಂತಿಮವಾಗಿ ವೃದ್ಧೆಯೊಬ್ಬರಿಗೆ ಕಚ್ಚಿದ ಬಳಿಕ ನಾಯಿ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಅರಣ್ಯಾಧಿಕಾರಿಗಳ ಆಗಮನವೂ ಆಗಿದೆ. ನರಿ ದಾಳಿಯಿಂದ ನಮಗೆ ರಕ್ಷಣೆ ಕೊಡಿ ಎಂದು ಕೇಳುವ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.
ಇದನ್ನೂ ಓದಿ |Operation Cheetah | ಇನ್ನೇನು ಕೈಗೆ ಸಿಕ್ತು ಎನ್ನುವಾಗಲೇ ಕಣ್ಣೆದುರಿಗೇ ಚಿರತೆ ಜಸ್ಟ್ ಪಾಸ್!