Site icon Vistara News

Fraud Case: ವಿದೇಶದಲ್ಲಿದ್ದು ಬೆಂಗಳೂರಿನಲ್ಲಿ ಸೈಟ್‌ ಖರೀದಿಗೆ ಮುಂದಾದ ಟೆಕ್ಕಿ; ಸೈಟೂ ಇಲ್ಲ, ಹಣವೂ ಇಲ್ಲ!

techie fraud by real estate

ಬೆಂಗಳೂರು: ವಿದೇಶದಲ್ಲಿದ್ದು ಬೆಂಗಳೂರಿನಲ್ಲಿ ಸೈಟ್‌ ಖರೀದಿಸಲು ಹಣ ಹೂಡುತ್ತಿರುವವರಾದರೆ ಡಬಲ್‌ ಎಚ್ಚರ ವಹಿಸಿ. ಅಮೆರಿಕದಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ಸೈಟ್‌ ಖರೀದಿಗೆ ಹಣ ನೀಡಿ, ಸೈಟೂ ಇಲ್ಲದೆ, ಹಣವನ್ನೂ ಕಳೆದುಕೊಂಡ (Fraud Case) ಕನ್ನಡಿಗ ಟೆಕ್ಕಿಯೊಬ್ಬರು ಇದೀಗ ದೂರು ನೀಡಿದ್ದಾರೆ.

ಬೆಂಗಳೂರು ಮೂಲದ, ಅಮೆರಿಕದಲ್ಲಿ ಟೆಕ್ಕಿಯಾಗಿರುವ ರಾಘವೇಂದ್ರ ಪ್ರಸಾದ್ ಮೋಸ ಹೋದ ವ್ಯಕ್ತಿ. ಇವರು ರಿಯಲ್ ಎಸ್ಟೇಟ್ (Real Estate) ಕಂಪನಿಯಿಂದ 30 ಲಕ್ಷ ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಕಮೀಷನರ್‌ಗೇ ವಿದೇಶದಿಂದ ಟ್ವೀಟ್ ಮಾಡಿ ದೂರು ನೀಡಿದ್ದಾರೆ.

ಜೆಪಿ ನಗರದಲ್ಲಿರುವ ವರ್ಚ್ಯೂ ಇನ್ಫ್ರಾ ಬಿಲ್ಡರ್ಸ್ ಪ್ರೈ. ಲಿ ಎಂಬ ಕಂಪನಿಯಿಂದ ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ. ವರ್ಚ್ಯೂ ಇನ್ಫ್ರಾ ಬಿಲ್ಡರ್ಸ್ ಪ್ರೈ. ಲಿ ಮಾಲೀಕರಾದ ಅರವಿಂದ್, ಹರಿಕೃಷ್ಣ ಮೇಲೆ ದೂರು ನೀಡಿದ್ದಾರೆ. 2022ರ ಡಿಸೆಂಬರ್‌ನಲ್ಲಿ ರಾಘವೇಂದ್ರ ಪ್ರಸಾದ್ ಕೆಂಗೇರಿಯ ರಾಯಲ್ ನಿಸರ್ಗ ಲೇಔಟ್‌ನಲ್ಲಿ ಸೈಟ್ ಖರೀದಿಸಿದ್ದರು. ಕಂಪನಿ ಇವರಿಂದ ಹಂತ ಹಂತವಾಗಿ 30 ಲಕ್ಷ ಹಣ ಪಡೆದಿತ್ತು.

ಆದರೆ ಕಂಪನಿ ಸೈಟ್ ರಿಜಿಸ್ಟರ್ ಮಾಡಿಸದೆ ತಿಂಗಳುಗಟ್ಟಲೆ ಅಲೆದಾಡಿಸಿತ್ತು. ಕೊನೆಗೆ ʼಸೈಟ್ ಬೇಡ ನನ್ನ ಹಣ ವಾಪಸ್ ಕೊಡಿʼ ಎಂದು ರಾಘವೇಂದ್ರ ತಿಳಿಸಿದ್ದರು. ಹಣ ರೀಫಂಡ್‌ಗಾಗಿ ಲೆಟರ್ ಬರೆದು ಮನವಿ ಮಾಡಿದ್ದರು. ಹಲವು ತಿಂಗಳಿಂದ ಇವತ್ತು, ನಾಳೆ ಎಂದು ಹಣ ವಾಪಸ್ ಕೊಡದೆ ಕಂಪನಿ ಯಾಮಾರಿಸುತ್ತಿದೆ. ಕಳೆದ 6 ತಿಂಗಳಿಂದ ಕಂಪನಿಯ ಮಾಲೀಕರಾದ ಅರವಿಂದ್, ಹರಿಕೃಷ್ಣ ಹಣ ಕೊಡದೆ ಅಲೆದಾಡಿಸಿದ್ದಾರೆ. ಅತ್ತ ಹಣವೂ ಇಲ್ಲ, ಇತ್ತ ಸೈಟೂ ಇಲ್ಲ ಎಂದು ರಾಘವೇಂದ್ರ ಕಣ್ಣೀರು ಹಾಕಿದ್ದಾರೆ.

ಈ ಹಿಂದೆ ರಾಘವೇಂದ್ರ ಅವರ ಪೋಷಕರು ದೂರು ನೀಡಲು ಪೊಲೀಸರ ಮುಂದೆ ಹೋಗಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೆಕ್ಕಿ ಬೇಸರ ಪ್ಯಕ್ತಪಡಿಸಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಟ್ವೀಟ್ ಮಾಡಿ ರಾಘವೇಂದ್ರ ಪ್ರಸಾದ್ ದೂರು ನೀಡಿದ್ದಾರೆ.

ಈ ಕಂಪನಿ ಇದೇ ತರಹ ಇನ್ನೂ ಹಲವು ಗ್ರಾಹಕರಿಗೆ ವಂಚಿಸಿರುವ ಆರೋಪ ಇದೆ. ಈ ಹಿಂದೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಕಂಪನಿಯ ಮಾಲಿಕ ಅರವಿಂದ್ ಹಾಗು ಹರಿಕೃಷ್ಣ ಮೇಲೆ ದೂರುಗಳು ದಾಖಲಾಗಿದ್ದವು.

ಇದನ್ನೂ ಓದಿ: Master Anand: ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್‌ಗೆ ರಿಯಲ್‌ ಎಸ್ಟೇಟ್‌ ವಂಚನೆ

Exit mobile version