ಬೆಂಗಳೂರು: ಜನರು ಕಷ್ಟ ಎಂದಾಗ ತಮ್ಮ ಬಳಿ ಇರುವ ಜಾಮೀನು, ಬಂಗಾರ, ವಾಹನವನ್ನು ಅಡಮಾನ ಇಡುವುದು ಸಾಮಾನ್ಯ. ಹೀಗೆ ಅಡಮಾನವಿಟ್ಟು ಸಾಲ ತೆಗೆದುಕೊಳ್ಳುವ ಮುನ್ನ ಎಚ್ಚರವಾಗಿ ಇರಿ. ಯಾಕೆಂದರೆ ಸಾಲ ಪಡೆದ ಕೆಲವೇ ತಿಂಗಳಲ್ಲಿ ನಿಮ್ಮ ಕಾರು ಬೇರೊಬ್ಬರ ಪಾಲಾಗಿರುತ್ತದೆ. ನಗರದಲ್ಲಿ ಇಂತಹ ಖತರ್ನಾಕ್ ಗ್ಯಾಂಗ್ (Fraud Gang) ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದೆ.
ಈ ಹಿಂದೆ ಎಲ್ಲ ಮನೆಯಲ್ಲಿರುವ ಒಡವೆ, ಆಸ್ತಿ ಪಾಸ್ತಿಯನ್ನು ಅಡಮಾನವಿಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ವಾಹನಗಳನ್ನು ಅಡಮಾನವಿಡುವುದನ್ನು ಜನ ರೂಢಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನಗರದ ಗಲ್ಲಿ ಗಲ್ಲಿಗಳಲ್ಲಿ ಫೈನಾನ್ಶಿಯರ್‌ಗಳಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್‌ವೊಂದು ಹೈ ಎಂಡ್ ಕಾರುಗಳನ್ನು ಅಡವಿಟ್ಟುಕೊಂಡು, ಫೈನಾನ್ಸ್ ಮಾಡುವುದು, ಬಳಿಕ ಮಾಲೀಕರಿಗೆ ತಿಳಿಯದಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಇಂತಹದೊಂದು ಜಾಲವನ್ನು ಪುಲಿಕೇಶಿನಗರ ಪೊಲೀಸರು ಭೇದಿಸಿದ್ದು ಮನೀಷ್, ಸೈಯದ್ ಹಾಗೂ ಜಾಬೀರ್ ಶರೀಫ್ ಎಂಬುವವರನ್ನು ಬಂಧಿಸಿದ್ದಾರೆ. ಮನೀಷ್ ಗಜೇಂದ್ರ ಹಾಗೂ ಸೈಯದ್ ವೃತ್ತಿಯಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ಗಳಾಗಿದ್ದು, ಫೈನಾನ್ಸ್ ವ್ಯವಹಾರವೂ ಮಾಡುತ್ತಿದ್ದರು. ಆ ರೀತಿ ಅಡವಿಡುವ ಶ್ರೀಮಂತರ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಹೈ ಎಂಡ್ ಕಾರುಗಳನ್ನು ಕೆಲಕಾಲ ಶೆಡ್ ನಲ್ಲಿ ನಿಲ್ಲಿಸಿ, ಬಳಿಕ ಮಾಲೀಕರಿಗೆ ತಿಳಿಯದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾ ಶಂಕರ್ ಗುಳೇದ್ ತಿಳಿಸಿದ್ದಾರೆ.
ಕಷ್ಟ ಎಂದು ಕಾರು ಅಡವಿಟ್ಟಿದ್ದ ಉದ್ಯಮಿ ಮೊಮ್ಮಗ
ಬೆಂಗಳೂರಿನ ಕಾರನ್ನು ಹೈದರಾಬಾದ್, ದೆಹಲಿ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು, ಆಂಧ್ರ ಪ್ರದೇಶ ಖ್ಯಾತ ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತಾವಿಷ್ಟು ಸಹ ಕಷ್ಟ ಎಂದು 20 ಲಕ್ಷಕ್ಕೆ ಅಡವಿಟ್ಟಿದ್ದ ಮಾರಾಟ ಮಾಡಿದ್ದಾರೆ. ಅವರು ಸಾಲ ತೀರಿಸಿ ಬಿಡಿಸಿಕೊಳ್ಳಲು ಹೋದಾಗ ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ವಿಷಯ ತಿಳಿದ ಕೂಡಲೇ ಗೀತಾವಿಷ್ಣು ಕಾರಿನ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುಲಿಕೇಶಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 14 ಹೈ ಎಂಡ್ ಕಾರುಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನಾಗಿರುವ ಜಾಬಿರ್ ಶರೀಫ್ ವೃತ್ತಿಯಲ್ಲಿ ಕಳ್ಳನಾಗಿದ್ದು, ಕದ್ದ ಕಾರುಗಳನ್ನೂ ಸಹ ಹೀಗೆ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದ್ದಾರೆ.
ಇದನ್ನೂ ಓದಿ | Bigg Boss Kannada | ಗೋಲ್ಡ್ ಮೈನ್ ಟಾಸ್ಕ್ ಕುರಿತು ಮನೆಯಲ್ಲಿ ಚರ್ಚೆ: ಇದು ಗ್ಯಾಂಗ್ ಗೇಮ್ ಅಂದ್ರು ಆರ್ಯವರ್ಧನ್!