Site icon Vistara News

Free Bus service : ನಮ್‌ ಹೆಂಡ್ರಿಗೆ ನಾವಿಲ್ವಾ? ಸಿದ್ದರಾಮಯ್ಯ ಏನ್‌ ಫ್ರೀ ಕೊಡೋದು? ನೋಡಲೇಬೇಕಾದ ವಿಡಿಯೊಗಳಿವು!

Free bus Effect

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯ ಮೊದಲ ಭಾಗವಾದ “ಶಕ್ತಿ” ಯೋಜನೆಗೆ (Shakti scheme) ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಭಾನುವಾರ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಮಹಿಳೆಯರು ಇದರ ಸಂಪೂರ್ಣ ಲಾಭ ಪಡೆಯಲು ಪುಣ್ಯಕ್ಷೇತ್ರಗಳು ಸೇರಿ ಪ್ರವಾಸಿತಾಣಗಳಿಗೆ ತಂಡೋಪ ತಂಡವಾಗಿ (Free Bus service) ಭೇಟಿ ನೀಡಿದರು. ಆದರೆ ಈ ಯೋಜನೆಗೆ ಕೆಲ ಪುರುಷ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ನಾವು ವೋಟ್‌ ಹಾಕಿಲ್ವಾ? ನಾವೇನು ಅನ್ಯಾಯ ಮಾಡಿದ್ದೀವಿ. ಮನೆಯಲ್ಲಿ ಹೆಂಗಸರು ಬಸ್ ಫ್ರೀ ಇದೆ ಎಂದು ಹೊರಗೆ ಹೋಗುತ್ತಿದ್ದಾರೆ. ಮಕ್ಕಳಿಗೆ, ನಮಗೆ ಸರಿಯಾಗಿ ಅಡುಗೆ ಮಾಡುತ್ತಿಲ್ಲ. ಬಟ್ಟೆನೂ ಒಗೆಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಮುಂದುವರಿದು, ಮಹಿಳೆಯರಿಗೆ ಉಚಿತ ಬಸ್‌ನಿಂದಾಗಿ ನಮಗೆ ಸೀಟು ಸಿಗುತ್ತಿಲ್ಲ. ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ನೀಡಬೇಕಿತ್ತು. ಸಿದ್ದರಾಮಯ್ಯಗೆ ಗಂಡಸರು ಏನು ಅನ್ಯಾಯ ಮಾಡಿದ್ದಾರೆ. ನಮ್ಮ ಹೆಂಡತಿ ಮಕ್ಕಳಿಗೆ ನಾವು ಇಲ್ವಾ? ಸಿದ್ದರಾಮಯ್ಯ ಏನು ಎಲ್ಲಾ ಫ್ರೀ ಕೊಡುವುದು ಎಂದು ಸರ್ಕಾರದ ಗ್ಯಾರಂಟಿಗಳ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ಗೆ ನಾವು ವೋಟ್‌ ಹಾಕಿದ್ದೀವಿ; ಬಸ್ ತಡೆದು ಮಂಗಳಮುಖಿಯರ ರಂಪಾಟ

ಬೆಳಗಾವಿಯ ರಾಯಭಾಗ ತಾಲೂಕಿನ‌ ಹಾರೂಗೇರಿಯಲ್ಲಿ ಮಂಗಳಮುಖಿಯರು ಕೆಎಸ್‌ಆರ್‌ಟಿಸಿ ಬಸ್ ತಡೆದು ಬೀದಿ ರಂಪಾಟ ಮಾಡಿದ್ದಾರೆ. ಕೈ ತೋರಿಸಿದರೂ ಬಸ್ ನಿಲ್ಲಿಸದ ಕೆಎಸ್ಆರ್‌ಟಿಸಿ ಡ್ರೈವರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಾವೂ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ. ಮಹಿಳೆಯರಿಗೆ ಬಸ್‌ ನಿಲ್ಲಿಸುತ್ತೀರಿ, ನಮಗೆ ಯಾಕೆ ಬಸ್ ನಿಲ್ಲಿಸಲ್ಲ ಎಂದು ಮಂಗಳಮುಖಿಯರು ಕಿಡಿಕಾರಿದ್ದಾರೆ.

ರಶ್‌ ಎಫೆಕ್ಟ್‌- ಡ್ರೈವರ್‌ ಸೀಟ್‌ನಿಂದಲೇ ಬಸ್‌ ಹತ್ತಿದ ಮಹಿಳೆ

ಶಕ್ತಿ ಯೋಜನೆಯಿಂದಾಗಿ ಬಸ್‌ಗಳೆಲ್ಲವೂ ರಶ್‌ ಆಗಿದ್ದು, ಶೃಂಗೇರಿಯಲ್ಲಿ ಮಹಿಳೆಯೊಬ್ಬರು ಡ್ರೈವರ್‌ ಸೀಟ್‌ನಿಂದಲೇ ಬಸ್‌ ಹತ್ತಿ ಒಳಗೆ ಹೋಗಿದ್ದಾರೆ. ಬಸ್ ಬಂದ ಕೂಡಲೇ ಮಹಿಳಾಮಣಿಗಳು ಜೇನುಹುಳಗಳಂತೆ ಮುತ್ತಿಕೊಳ್ಳುತ್ತಿದ್ದರು. ಇದನ್ನು ಕಂಡು ದಂಗಾದ ಮಹಿಳೆ, ಚಾಲಕನನ್ನು ಸೀಟ್‌ನಿಂದ ಎಬ್ಬಿಸಿದ್ದಾರೆ. ಬಳಿಕ ಇಬ್ಬರು ಮಕ್ಕಳನ್ನು ಹತ್ತಿಸಿ, ತಾನು ಡ್ರೈವರ್ ಸೀಟಿನಿಂದಲೇ ಹತ್ತಿದ್ದಾರೆ.

ಕೂರಲು ಸೀಟಿಲ್ಲ, ನಿಲ್ಲಲು ಜಾಗವಿಲ್ಲ; ಡೋರ್‌ನಲ್ಲೇ ನಿಂತರು

ಫ್ರೀ ಬಸ್‌ ಎಫೆಕ್ಟ್‌ ಯಾದಗಿರಿಯ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಮಹಿಳೆಯರು ದಂಡು ದಂಡಾಗಿ ಆಗಮಿಸುತ್ತಿದ್ದಾರೆ. ಯಾದಗಿರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಸೀಟ್ ಪಡೆಯಲು ಮಹಿಳೆಯರು ಮುಗಿಬಿದ್ದರು. ಸಣ್ಣ ಮಕ್ಕಳನ್ನು ಕಂಕುಳಲ್ಲಿ ಇಟ್ಟಕೊಂಡು ಬಸ್ ಏರಲು ಮುಂದಾದರು.

ಕಿಟಿಕಿಯಿಂದಲೇ ಮಕ್ಕಳನ್ನು ಹತ್ತಿಸಿ ಸೀಟು ಗಿಟ್ಟಿಸಿಕೊಂಡ ಪ್ರಯಾಣಿಕರು

ನಿಲ್ಲಲು ಬಸ್ ಒಳಗಡೆ ಜಾಗ ಇಲ್ಲದ ಕಾರಣ ಬಾಗಿಲಿನ ತುದಿಯಲ್ಲಿ ನಿಂತು ಪ್ರಯಾಣಿಸಿದರು. ಮೈಲಾಪುರಕ್ಕೆ ಹೋಗುವ ಬಸ್ ಬರುತ್ತಿದ್ದಂತೆ ಪೈಪೋಟಿಗಿಳಿದಂತೆ ಮಹಿಳೆಯರು ಓಡಿ ಹೋಗುತ್ತಿದ್ದರು. ಮಕ್ಕಳನ್ನು ತಲೆ ಮೇಲೆ ಹೊತ್ತು, ವಯಸ್ಸಾದ ಮಹಿಳೆಯರೂ ಸೀಟ್ ಪಡೆಯಲು ಹರಸಾಹಸ ಪಟ್ಟರು.

ಮೈಲಾರಲಿಂಗೇಶ್ವರ ದರ್ಶನಕ್ಕಾಗಿ ಓಡಿ ಹೋಗಿ ಬಸ್‌ ಹತ್ತಿದ ಕ್ಷಣ

ಬಸ್‌ ಕಿಟಕಿಯಿಂದಲೇ ಹಾರಿ ಸೀಟು ಹಿಡಿದ ಮಹಿಳೆಯರು

ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆ ದಾವಣಗೆರೆಯ ಹರಿಹರದ ಉಕ್ಕಡಗಾತ್ರಿ ಶ್ರೀ ಕ್ಷೇತ್ರಕ್ಕೆ ಮಹಿಳೆಯರ ದಂಡು ಹರಿದುಬರುತ್ತಿದೆ. ಅಜ್ಜಯ್ಯನ ದರ್ಶನ ಮಾಡಲು ಉಚಿತ ಬಸ್‌ನ ಮೊರೆ ಹೋಗುತ್ತಿರುವ ಮಹಿಳೆಯರು ಕಿಟಿಕಿಯಿಂದಲೇ ಹಾರಿ ಸೀಟು ಹಿಡಿದುಕೊಳ್ಳುತ್ತಿದ್ದಾರೆ. ಸ್ತ್ರೀ ಶಕ್ರಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಪುರುಷರೆಲ್ಲ ಸೇರಿ ಪ್ರತಿಭಟನೆ ಮಾಡ್ತಿವಿ ಸಿಎಂಗೆ ಹೇಳ್ಬಿಡಿ!

ಬಾಗಲಕೋಟೆಯ ಇಳಕಲ್ಲ ನಗರದಲ್ಲೂ ಬಸ್‌ನಲ್ಲಿ ಸೀಟ್ ಇಲ್ಲದೇ ನೂಕುನುಗ್ಗಲು ಉಂಟಾಯಿತು. ಬಸ್‌ನಲ್ಲಿ ಮಹಿಳೆಯರಿಗೆ 50%, ಉಳಿದಂತೆ ಪುರುಷರಿಗೆ ಆಸನಗಳನ್ನು ಮೀಸಲಿಡಬೇಕು. ಆದರೆ ಎಲ್ಲ ಬಸ್‌ನಲ್ಲೂ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಈ ರೀತಿ ಆದರೆ ಪುರುಷರೆಲ್ಲಾ ಸೇರಿ ಪ್ರತಿಭಟನೆ ಮಾಡುತ್ತೇವೆ. ಸಿದ್ದರಾಮಯ್ಯಗೆ ಹೇಳಿ ಎಂದು ಹೊಸಪೇಟೆಯ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಅಮರೇಶ್‌ ಎಂಬ ಪ್ರಯಾಣಿಕ ಕಿಡಿಕಾರಿದ್ದಾರೆ. ಕಂಡಕ್ಟರ್‌ಗೆ ಟಿಕೆಟ್ ಕೊಡಬೇಕು ಎಂದರೂ ಜಾಗವಿಲ್ಲದಷ್ಡು ಗದ್ದಲ ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮಾದಪ್ಪನ ನೋಡಲು ಊಘೆ ಎಂದ ಮಹಿಳೆಯರು

ಅಮಾವಾಸ್ಯೆ ಹಿನ್ನೆಲೆ ಮಲೆ ಮಾದೇಶ್ವರ ಬೆಟ್ಟಕ್ಕೆ ಭಕ್ತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಚಾಮರಾಜನಗರ ಕೆಎಸ್ಆರ್ಟಿಸಿ ವಿಭಾಗದಿಂದ 150 ಹೆಚ್ಚಿನ ಬಸ್‌ಗಳ ನಿಯೋಜನೆ ಮಾಡಲಾಗಿದೆ. ಶನಿವಾರ ಒಂದು ದಿನಕ್ಕೆ ಕೊಳ್ಳೇಗಾಲ ಬಸ್ ನಿಲ್ದಾಣದಿಂದ 250 ಟ್ರಿಪ್ ಬಸ್ ಸಂಚಾರವಾಗಿದ್ದು, ಭಾನುವಾರ ಸಹ ಎಲ್ಲಾ ತಾಲೂಕು ಕೇಂದ್ರದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಗುಂಡ್ಲುಪೇಟೆ , ಚಾಮರಾಜನಗರ ,ನಂಜನಗೂಡು , ತಿ.ನರಸೀಪುರ, ಕೊಳ್ಳೇಗಾಲ ಘಟಕದಿಂದ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ. ಸಾಮಾನ್ಯವಾಗಿ ಪ್ರತಿದಿನ 70-80 ಟ್ರಿಪ್ ಬಸ್ ಹೋಗುತ್ತಿದ್ದವು ,ಆದರೆ ಈಗ ಅದರ ನಾಲ್ಕು ಪಟ್ಟು ಜಾಸ್ತಿ ಆಗಿದೆ ಎಂದು ಚಾಮರಾಜನಗರ ಕೆ.ಎಸ್.ಆರ್. ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಬಿದ್ದ ಬಾಲಕಿ!

ವೀಕೆಂಡ್‌ ಜತೆಗೆ ಆಷಾಡ ಅಮಾವಾಸ್ಯೆ ಹಿನ್ನೆಲೆ ಶಕ್ತಿ ಯೋಜನೆಯಡಿ ಮಹಿಳೆಯರು ಟೆಂಪಲ್‌ ರನ್‌ ಮುಂದುವರಿಸಿದ್ದಾರೆ. ಇದರ ಎಫೆಕ್ಟ್‌ ಬಸ್‌ ರಶ್‌ ಆಗಿದ್ದು, ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡುತ್ತಿದ್ದ ಬಾಲಕಿಯೊಬ್ಬಳು ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಬೆಳಗಾವಿಯ ರಾಮದುರ್ಗ ಬಸ್ ನಿಲ್ದಾಣದಲ್ಲಿ ಬಸ್‌ ಫುಲ್‌ ಆಗಿದ್ದರೂ ಜನರು ಹತ್ತಲು ಮುಂದಾಗಿದ್ದರೆ ಈ ವೇಳೆ ಚಾಲಕ ಬಸ್‌ ಚಲಾಯಿಸಿದ್ದು, ಫುಟ್‌ ಬೋರ್ಡ್‌ ತುದಿಯಲ್ಲಿ ನಿಂತಿದ್ದ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಕೂಡಲೆ ಬಸ್‌ ನಿಲ್ಲಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇತ್ತ ಪೋಷಕರು ಚಾಲಕನ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಜುನಾಥ್‌ ದರ್ಶನಕ್ಕೆ ಹರಿದು ಬಂದ ಜನಸಾಗರ

ಮಂಗಳೂರಿನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜನಸಾಗರವೇ ಹರಿದು ಬಂದಿದೆ. ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವ ಹಿನ್ನೆಲೆ ಮಹಿಳೆಯರು ಬಸ್ಸಿಗೆ ಮುಗಿಬಿದ್ದಿದ್ದಾರೆ. ಇತ್ತ ಮಹಿಳೆಯರಿಂದ ಬಸ್‌ ತುಂಬಿ ಹೋದ ಹಿನ್ನೆಲೆ ಪುರುಷರು ಕಿಟಕಿಯಲ್ಲಿ ಸೀಟು ಹಿಡಿದು ನಿಂತಿದ್ದ ದೃಶ್ಯವೂ ಕಂಡು ಬಂತು.

ಅರ್ಧ ಚಾರ್ಜ್ ಕೊಟ್ಟಿದ್ದರೆ ಸಾಕಾಗಿತ್ತು, ಫುಲ್ ಫ್ರೀ ಬೇಕಿರಲಿಲ್ಲ

ಚನ್ನಪಟ್ಟಣ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ಕುಳಿತ ಮಹಿಳಾ ಪ್ರಯಾಣಿಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು. ಎರಡು ಸಾವಿರ ಹಣ ಬೇರೆ ಕೊಡುವುದಾಗಿ ಹೇಳಿದ್ದಾರೆ, ಆ ಹಣಕ್ಕೆ ಕೂಲಿ ಮಾಡಲು ಜನ ಬರಲ್ಲ.

ಈಗ ಫ್ರೀ ಬಸ್ ಕೊಟ್ಟಿರುವುದೇ ನೋಡುತ್ತಿದ್ದೇವೆ. ಅರ್ಧ ಚಾರ್ಜ್ ಕೊಟ್ಟಿದ್ದರೆ ಸಾಕಾಗುತ್ತಿತ್ತು, ಫುಲ್ ಫ್ರೀ ಬೇಡವಾಗಿತ್ತು. ಬಸ್‌ಗಾಗಿ ಕಾದು ಕಾದು ಸಾಕಾಗಿದೆ ಎಂದು ಮಹಿಳಾ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ರಾಯಚೂರಿನಲ್ಲಿ ಲೇಡಿಸ್‌ ದರ್ಬಾರ್

ರಾಯಚೂರಿನ ಲಿಂಗಸುಗೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆಯರು ಡ್ರೈವರ್ ಇಳಿಯುವ ಡೋರ್‌ ಅನ್ನೇ ಆಕ್ರಮಣ ಮಾಡಿಕೊಂಡಿದ್ದರು. ಬಸ್‌ನಿಂದ ಇಳಿಯಲು ಆಗದಷ್ಟು ಪ್ರಯಾಣಿಕರು ಏಕಾಏಕ ಕಾಲಕ್ಕೆ ಮುಗಿಬಿದ್ದಿದ್ದು, ವಿಧಿಯಿಲ್ಲದೇ ಡ್ರೈವರ್ ಡೋರ್ ಮೂಲಕ ಹೊರಬಂದರು.

ಹೊರಟಿದ್ದ ಬಸ್‌ನ ಬೆನ್ನತ್ತಿ ಮಗಳನ್ನು ಇಳಿಸಿಕೊಂಡ ತಾಯಿ

ವಿಜಯಪುರದ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಬಸ್‌ವೊಂದರ ಬೆನ್ನತ್ತಿದ್ದರು. ಮುದ್ದೇಬಿಹಾಳದಿಂದ ಬಾಗಲಕೋಟೆಗೆ ಹೊರಟಿದ್ದ ಬಸ್‌ನಲ್ಲಿ ಮಗಳು ಹೇಗೊ ನುಗ್ಗಿ ಸೀಟು ಹಿಡಿದು ಕುಳಿತಿದ್ದಳು. ಆದರೆ ಬಸ್ ಭರ್ತಿ ಹಿನ್ನೆಲೆ ತಾಯಿಗೆ ಸೀಟು ಸಿಗುವುದು ಇರಲಿ, ಬಸ್‌ ಹತ್ತಲು ಸಾಧ್ಯವಾಗಿರಲಿಲ್ಲ. ಇತ್ತ ಚಾಲಕ ಬಸ್ ಚಲಾಯಿಸಿಕೊಂಡು ಹೊರಟಿದ್ದ. ಮಹಿಳೆ ಹೊರಗೆ ಉಳಿದಿದ್ದರೂ, ಅಕ್ಕಪಕ್ಕ ನೋಡಿದಾಗ ಮಗಳು ಬಸ್ಸಿಲ್ಲಿ ಉಳಿದುಕೊಂಡಿದ್ದು ಗೊತ್ತಾಗಿದೆ. ಬಳಿಕ ಮಗಳನ್ನು ಕಿಟಕಿಯಿಂದ ಇಳಿಸಿಕೊಂಡು ಸಿಟ್ಟಿನಿಂದ ಬಸ್‌ಗೆ ಗುದ್ದಿ ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಂದು ಕಡೆ ಮುದ್ದೇಬಿಹಾಳದಿಂದ ನಾರಾಯಣಪುರ ಬಸ್‌ಗಳಲ್ಲಿಯೂ ಮಹಿಳೆಯರಿಂದ ಫುಲ್ ರಶ್ ಆಗಿತ್ತು. ಹೀಗಾಗಿ ಯುವಕನೊಬ್ಬ ಬಸ್ ಕಿಟಕಿಯೊಳಗಿಂದ ನುಸುಳಿ ಸೀಟು ಹಿಡಿದುಕೊಂಡ. ಇನ್ನೊಂದೆಡೆ ಮಹಿಳೆಯರ ಗುಂಪಿನಲ್ಲಿ ಸಿಕ್ಕು ವೃದ್ಧ ಒದ್ದಾಡಿಬಿಟ್ಟರು.

ಸಂಘ ಕಟ್ಟಿಕೊಂಡು ಬಂದ ಮಹಿಳಾಮಣಿಯರು

ಕರ್ನಾಟಕದ ನಾನಾ ಭಾಗಗಳಿಂದ ದತ್ತಾತ್ರೆಯ ಸನ್ನಿಧಿಗೆ ಭಕ್ತ ಸಾಗರವೇ ಹರಿದು ಬಂದಿದೆ. ಭಾನುವಾರ ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆ ಭಕ್ತರ ಸಂಖ್ಯೆ ದುಪ್ಪಟ್ಟಾಗಿತ್ತು. ಮಹಿಳೆಯರಿಗೆ ಉಚಿತ ಬಸ್‌ ಹಿನ್ನೆಲೆ ಸಂಘ ಕಟ್ಟಿಕೊಂಡು ದೇವಸ್ಥಾನಕ್ಕೆ ಬರುತ್ತಿರುವುದು ಕಂಡು ಬಂತು. ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಮಹಿಳೆಯರೇ ಕಾಣಿಸುತ್ತಿದ್ದರು. ಸರ್ಕಾರಿ ಬಸ್ ಹತ್ತಲು ನೂಕು ನುಗ್ಗಲು ಉಂಟಾಗಿತ್ತು. ಸೀಟು ಭರ್ತಿಯಾಗುತ್ತಿದ್ದಂತೆ ಇನ್ನೊಂದು ಬಸ್‌ಗೆ ಹುಡುಕಾಟ ನಡೆಸುತ್ತಿದ್ದ ದೃಶ್ಯ ಕಂಡು ಬಂತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version