ಬೆಂಗಳೂರು: ಅವಕಾಶ ವಂಚಿತ ಮಹಿಳೆಯರಿಗೆ ಶಕ್ತಿ ತುಂಬಲು ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಇದೇ ರೀತಿ ಉಳಿದೆಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಎಷ್ಟೇ ಕಷ್ಟವಾದರೂ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಕ್ತಿ ಯೋಜನೆ ಜಾರಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಯೋಜನೆಯ ವಿವರಗಳನ್ನು ನೀಡಿದರು.
ಎಲ್ಲರಿಗೂ ಗೊತ್ತಿರುವ ಹಾಗೆ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ಐದು ಗ್ಯಾರೆಂಟಿಗಳ ವಾಗ್ದಾನ ಕೊಟ್ಟಿದ್ದೆವು.
ಈ ಹಿಂದೆ ಕೂಡ ಕಾಂಗ್ರೆಸ್ ಸರ್ಕಾರವಿದ್ದಾಗ ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೇವೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಬಸವಾದಿ ಶರಣರು,ಹಿರಿಯರು,ದಾರ್ಶನಿಕರು ನುಡಿದಂತೆ ಜನರಿಗೆ ಕೊಟ್ಡ ಮಾತನ್ನು ಈಡೇರಿಸಬೇಕು ಅನ್ನೋದು ನಮ್ಮ ಉದ್ದೇಶ. ಎಲ್ಲ ಭರವಸೆಗಳನ್ನು 5 ವರ್ಷದಲ್ಲಿ ಈಡೇರಿಸುತ್ತೇವೆ. ಆದರೆ ಪ್ರತಿಪಕ್ಷಗಳಿಗೆ ಮಾತ್ರ ಗ್ಯಾರಂಟಿ ಯೋಜನೆಯ ಅನುಷ್ಠಾನ ಕಂಡು ನಡುಕ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿದ್ಯುತ್ ದರ ಏರಿಕೆ ಬಗ್ಗೆ ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಏನು? ವಿದ್ಯುತ್ ದರ ಏರಿಕೆ ಮೊದಲೇ ನಿರ್ಧಾರ ಆಗಿತ್ತು. ಅದರ ಮೇಲೆ ಗುಲ್ಲೆಬ್ಬಿಸಲಾಗುತ್ತದೆ. ಆದರೆ ಪ್ರತಿ ವರ್ಷ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಪರಿಷ್ಕರಣೆ ಮಾಡುತ್ತದೆ. ಹೀಗಾಗಿ ಇತ್ತೀಚಿನ ವಿದ್ಯುತ್ ದರ ಏರಿಕೆಯಲ್ಲಿ ಹೊಸ ಸರ್ಕಾರದ ಪಾತ್ರ ಇಲ್ಲ. ಇದು ಕಳೆದ ಏಪ್ರಿಲ್ 1ರಂದು ನಿರ್ಧಾರವಾಗಿತ್ತು. ಚುನಾವಣೆ ನೀತಿ ಸಂಹಿತೆಯಿಂದಾಗಿ ಜಾರಿಯಾಗಿದ್ದಿರಲಿಲ್ಲ. ನಾವು ಬಂದಮೇಲೆ ಜಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಜನರ ಆಶೀರ್ವಾದಿಂದ ನಮಗೆ ಸ್ಪಷ್ಟ ಬಹುಮತ ಸಿಕ್ಕಿತ್ತು. ಸರ್ಕಾರ ರಚನೆಯಾಗಿ 20 ದಿನಗಳಾಯಿತು. ಮೇ 20 ರಂದು ನಾವು ಸರ್ಕಾರ ರಚನೆ ಮಾಡಿದ್ದೆವು. ಈಗ ಮೊದಲ ಗ್ಯಾರಂಟಿ ಜಾರಿಯಾಗಿದೆ. ಉಳಿದದ್ದೂ ಅನುಷ್ಠಾನವಾಗಲಿದೆ. ರಾಜ್ಯದ ಎಲ್ಲಾ ಕಡೆ ಜಾರಿಯಾಗುತ್ತಿದೆ. 41 ಲಕ್ಷದ 85 ಸಾವಿರ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಾರೆ. ಜಾತಿ, ಧರ್ಮ ಮೀರಿ ಮಹಿಳೆಯರು, ಮಂಗಳಮುಖಿಯರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದರು.
ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಬೇಕಾದಾಗ ಇನ್ನೊಂದು ರಾಜ್ಯ ಅಡ್ಡ ಬಂದರೆ 20 ಕಿಮಿ ವ್ಯಾಪ್ಯಿಗೆ ಟಿಕೆಟ್ ವಸೂಲಿ ಮಾಡಲ್ಲ. ರಾಜ್ಯ ಬಿಟ್ಟು ಹೊರಗಡೆ ಹೋದ್ರೆ ಟಿಕೆಟ್ ಪಡೆಯುತ್ತೇವೆ. ಬೆಂಗಳೂರಿನಿಂದ ಬಳ್ಳಾರಿಗೆ ಪ್ರಯಾಣಿಸುವಾಗ ಆಂಧ್ರಪ್ರದೇಶದ 6 ಕಿಮಿ ಒಳಪಡುತ್ತದೆ ಅಲ್ಲಿ ಟಿಕೆಟ್ ಪಡೆಯಲ್ಲ. ಜುಲೈ 1 ರಿಂದ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುವುದು. ಆಗಸ್ಟ್ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಲಿದೆ ಎಂದು ವಿವರಿಸಿದರು.
ನಿರುದ್ಯೋಗಿ ಯುವ ಜನತೆಗೆ ತಾತ್ಕಾಲಿಕವಾಗಿ ಸ್ಪೂರ್ತಿ ನೀಡಲು, ಸಂತೈಸಲು ಹಣ ನೀಡಲಾಗುತ್ತದೆ. 24 ತಿಂಗಳುಗಳಲ್ಲಿ ನಿರುದ್ಯೋಗಿಗಳು ಉದ್ಯೋಗ ಕಂಡುಕೊಳ್ಳಬೇಕು. ಕೌಶಲ ವೃದ್ಧಿಸಿಕೊಳ್ಳಬೇಕು. ಕೌಶಲಾಭಿವೃದ್ಧಿ ಯೋಜನೆಯಲ್ಲಿ ಈ ಹಿಂದೆ ಅವ್ಯವಹಾರ ಆಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: Free Bus Service : ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 59,000 ಕೋಟಿ ರೂ. ವೆಚ್ಚ: ಸಿಎಂ ಸಿದ್ದರಾಮಯ್ಯ