ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ (Government bus) ಮಹಿಳೆಯರ ಉಚಿತ ಪ್ರಯಾಣಕ್ಕೆ (Free bus service) ಅವಕಾಶವಿರುವ ಶಕ್ತಿ ಯೋಜನೆ (Shakti scheme) ಜಾರಿಗೆ ಬಂದ ಬಳಿಕ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ಸಂಬಂಧವೇ ಹದಗೆಟ್ಟು ಹೋಗಿದೆ. ಜನದಟ್ಟಣೆ, ಒತ್ತಡಗಳಿಂದ ಕಂಗೆಟ್ಟು ಹೋಗಿರುವ ಬಸ್ ಸಿಬ್ಬಂದಿ (KSRTC bus staff) ತಾಳ್ಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ಪ್ರಯಾಣಿಕರ ಜತೆ ಅಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಪ್ರಯಾಣಿಕರು ಕೂಡಾ ತಮ್ಮ ಹಕ್ಕು ಸಾಧಿಸುವುದಕ್ಕಾಗಿ ಬಸ್ ಸಿಬ್ಬಂದಿ ಮೇಲೆ ಏರಿ ಹೋಗುತ್ತಿದ್ದಾರೆ.
ಎರಡು ದಿನದ ಹಿಂದಷ್ಟೇ ತನಗೆ ಬಸ್ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತಮ್ಮ ಗಂಡ ಮತ್ತು ಇತರರನ್ನು ಕರೆಸಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಹಲ್ಲೆಕೋರರ ಮೇಲೆ ಕೇಸು ದಾಖಲಾಗಿತ್ತು.
ಇದರ ಬೆನ್ನಿಗೇ ಇದೀಗ ಮಹಿಳಾ ಕಂಡಕ್ಟರ್ ಒಬ್ಬರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಗೆ ಕಪಾಳಮೋಕ್ಷ ಮಾಡಿದ್ದಾರೆ.
ಕುಂದಗೋಳದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಬಸ್‌ನಲ್ಲಿ ಘಟನೆ ನಡೆದಿದ್ದು, ಮಾತಿಗೆ ಮಾತು ಬೆಳೆದು ಮಹಿಳಾ ಕಂಡಕ್ಟರ್ ವೃದ್ಧೆಗೆ ಹಲ್ಲೆ ನಡೆಸಿದ್ದಾರೆ.
ಮಹಿಳಾ ಕಂಡಕ್ಟರ್ ವೃದ್ಧೆಗೆ ಕಪಾಳ ಮೋಕ್ಷ ಮಾಡಿದ್ದನ್ನು ಇತರ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವೃದ್ಧೆ ಮತ್ತು ಮಹಿಳಾ ಕಂಡಕ್ಟರ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ವೃದ್ಧೆ ಬಸ್ ನಿರ್ವಾಹಕಿಯನ್ನು ನಿಂದಿಸಿದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಬಸ್ ನಿರ್ವಾಹಕಿ ಮಹಿಳೆಯ ಕೆನ್ನೆಗೆ ಬಾರಿಸಿದ್ದಾರೆ.
ಆರಂಭದಲ್ಲಿ ಮಹಿಳಾ ಕಂಡಕ್ಟರ್ ಜಗಳವಾಡುವ ಅಜ್ಜಿಗೆ ʻಅಜ್ಜಿ ಮಾತಿಗೆ ಮಾತು ಬೆಳೆಸಿ ಜಗಳ ಮಾಡ್ಬೇಡʼ ಎಂದು ಎಚ್ಚರಿಕೆ ಕೊಡುತ್ತಾರೆ. ಬಳಿಕ ಅಜ್ಜಿ ಬೋಸುಡಿ ಎಂದು ಹೇಳಿದರೆಂದು ಕಂಡಕ್ಟರ್ ಹೇಳಿದ್ದಾರೆ.
ಆದರೆ, ಬಸ್ಸಿನಲ್ಲಿ ಅಷ್ಟೇನೂ ಪ್ರಯಾಣಿಕರಿರಲಿಲ್ಲ. ಒತ್ತಡದ ಸನ್ನಿವೇಶಗಳೂ ಇರಲಿಲ್ಲ. ಹಾಗಿದ್ದರೂ ಮಹಿಳಾ ಕಂಡಕ್ಟರ್ ನಿಯಂತ್ರಣ ಕಳೆದುಕೊಂಡಿದ್ದು ಸರಿಯಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಅಂತೂ ಮಹಿಳೆಯರ ಉಚಿತ ಪ್ರಯಾಣದ ಭರಾಟೆ ಒತ್ತಡವನ್ನು ಸೃಷ್ಟಿಸಿದ್ದಂತೂ ಸುಳ್ಳಲ್ಲ.
ಈ ನಡುವೆ ರಸ್ತೆ ಸಾರಿಗೆ ನಿಗಮ ಏನೇ ಆದರೆ, ಪ್ರಯಾಣಿಕರ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿ ಕೆಲವೊಂದು ಸಲಹೆಗಳನ್ನೂ ಕೊಟ್ಟಿದೆ.
ಇದನ್ನೂ ಓದಿ: Free Bus service: ಮಹಿಳಾ ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸಲು KSRTC ಸೂಚನೆ