Site icon Vistara News

ಕಾಮೆಡ್-ಕೆ ರದ್ದು; ಮುಂದಿನ ವರ್ಷದಿಂದ ಒಂದೇ ಸಿಇಟಿ?

comed-k

ಬೆಂಗಳೂರು: ಇಂಜಿನಿಯರಿಂಗ್‌ ಪ್ರವೇಶಕ್ಕೆ ಈಗ ಪ್ರತ್ಯೇಕವಾಗಿ ನಡೆಸುತ್ತಿರುವ ಕಾಮೆಡ್-ಕೆ ಪ್ರವೇಶ ಪರೀಕ್ಷೆ ರದ್ದಾಗಲಿದೆ. ಕಾಮೆಡ್‌-ಕೆ ರದ್ದುಪಡಿಸಿ, ಸರ್ಕಾರದ ಸಿಇಟಿ ವ್ಯವಸ್ಥೆಯಡಿಗೆ ವಾಪಸ್ ಬರಲು ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ (ಕ್ಯುಪೇಕಾ) ಆಸಕ್ತಿ ತೋರಿದೆ. ಈ ಸಂಬಂಧ ಸಾಧಕ ಬಾಧಕ ಪರಿಶೀಲಿಸಿ ಒಪ್ಪಂದ ಆದ ಮೇಲೆ ಮುಂದಿನ ವರ್ಷದಿಂದ ಒಂದೇ ಸಿಇಟಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಇದನ್ನೂ ಓದಿ | ಸಿಇಟಿ ಪರೀಕ್ಷೆಯಲ್ಲೂ ಅಕ್ರಮದ ವಾಸನೆ: ಮೈಸೂರು ಮೂಲದ ವಿದ್ಯಾರ್ಥಿ ಪೊಲೀಸ್‌ ವಶಕ್ಕೆ

ಕಾಮೆಡ್-ಕೆ ಸ್ಥಗಿತಗೊಂಡರೆ, ಸರ್ಕಾರವು ಸಿಇಟಿಯನ್ನು ಅಖಿಲ ಭಾರತ ವ್ಯಾಪ್ತಿಯಲ್ಲಿ ನಡೆಸಲಿದೆ. ಇದರಲ್ಲಿ ವಿದ್ಯಾರ್ಥಿಗಳು ಪಡೆಯುವ ರ‍್ಯಾಂಕಿಂಗ್‌ ಆಧರಿಸಿ, ಈಗಿನಂತೆಯೇ ಸೀಟು ಹಂಚಲಾಗುವುದು. ಇದರಿಂದ ಈಗ ಆಗುತ್ತಿರುವ ಗೊಂದಲ ಮತ್ತು ಅಪವ್ಯಯ ಎರಡೂ ನಿವಾರಣೆ ಆಗಲಿವೆ ಎಂದು ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

ಖಾಸಗಿ ಕಾಲೇಜುಗಳು ದುಬಾರಿ ಶುಲ್ಕದ ಮ್ಯಾನೇಜ್ಮೆಂಟ್ ಸೀಟುಗಳಿಗಾಗಿ ತಾವೇ ನಡೆಸುತ್ತಿರುವ ಪರೀಕ್ಷೆಯನ್ನು ನಿಲ್ಲಿಸುವ ಸುಳಿವು‌ ನೀಡಿವೆ. ಇದರ ಸಾಧ್ಯತೆಗಳನ್ನು ಪರಿಶೀಲಿಸಲು ಉನ್ನತ ಸಮಿತಿ ರಚಿಸಲಾಗುವುದು. ಇದನ್ನು ಆಧರಿಸಿ ಕ್ಯುಪೇಕಾ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಶ್ವತ್ಥನಾರಾಯಣ ವಿವರಿಸಿದರು.

10% ಶುಲ್ಕ ಏರಿಕೆ

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಯಥಾಸ್ಥಿತಿಯಲ್ಲಿದ್ದ ಎಂಜಿನಿಯರಿಂಗ್ ಶಿಕ್ಷಣ ಶುಲ್ಕವನ್ನು 10% ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. 25% ಶುಲ್ಕ ಏರಿಕೆ ಮಾಡಬೇಕೆಂಬ ಕ್ಯುಪೇಕಾ ಬೇಡಿಕೆ ಕಾರ್ಯಸಾಧುವಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ಕ್ಯುಪೇಕಾ ಪ್ರತಿನಿಧಿಗಳ ಜತೆ ಇಂದು ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಶುಲ್ಕ ಹೆಚ್ಚಳವು ಖಾಸಗಿ ಕಾಲೇಜುಗಳಲ್ಲಿ ಇರುವ ಸರಕಾರಿ ಎಂಜಿನಿಯರಿಂಗ್ ಸೀಟುಗಳಿಗೆ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದನ್ನು ಮೀರಿ ಹೆಚ್ಚಿನ ಶುಲ್ಕ ವಸೂಲು ಮಾಡಿದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಕ್ಯುಪೇಕಾ ಪ್ರತಿನಿಧಿಗಳು ಕೂಡ ಒಪ್ಪಿಕೊಂಡಿದ್ದಾರೆ ಎಂದರು.

ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕ್ಯುಪೇಕಾ ಅಧ್ಯಕ್ಷರೂ ಆದ ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ ಭಂಡಾರಿ ಸೇರಿದಂತೆ ಇತರ ಪದಾಧಿಕಾರಿಗಳು ಇದ್ದರು.

ಇದನ್ನೂ ಓದಿ | ಮೂರನೇ ಬಾರಿಯೂ ಪಿಯು ಪರೀಕ್ಷೆಯಲ್ಲಿ ಫೇಲ್‌; ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Exit mobile version