ಮೈಸೂರು: ಕಳೆದ ಒಂದೂವರೆ ವರ್ಷದಿಂದಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಹಿರಿಯ ರಾಜಕಾರಣಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರ ಮನೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭೇಟಿ ನೀಡಿದ್ದಾರೆ. ಈ ಮೂಲಕ ವರ್ಷಗಳ ಮುನಿಸಿಗೆ ತೆರೆ ಬಿದ್ದಿದೆ.
ಮೂರು ವರ್ಷಗಳ ಮುನಿಸು ಅಂತ್ಯ
ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ನಿಂದ ಬಹುಪಾಲು ದೂರವಾಗಿ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಈ ಮಧ್ಯೆ ದಳಪತಿಗಳ ಜತೆ ಮಾತುಕತೆಗಳೂ ನಡೆದಿರಲಿಲ್ಲ. ಆದರೆ, ಮುಂದಿನ ಚುನಾವಣೆ ವೇಳೆ ಶತಾಯಗತಾಯ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವುದಾಗಿ ಪಣ ತೊಟ್ಟಿರುವ ಎಚ್.ಡಿ. ದೇವೇಗೌಡ ಅವರು ಒಂದೊಂದೇ ತೊಡಕುಗಳನ್ನು ಸರಿಪಡಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಗುರುವಾರ (ಅ.೨೦) ದೇವೇಗೌಡ ಅವರು ಜಿ.ಟಿ. ದೇವೇಗೌಡ ಅವರ ಮನೆಗೆ ಭೇಟಿ ನೀಡಿ ವೈಷಮ್ಯಕ್ಕೆ ತೆರೆ ಎಳೆದಿದ್ದಾರೆ.
ಮನೆ ಬಾಗಿಲಿಗೆ ಬಂದ ಮಾಜಿ ಪ್ರಧಾನಿ, ಗಳಗಳನೆ ಅತ್ತ ಜಿಟಿಡಿ
ಮಾಜಿ ಪ್ರಧಾನಿ ದೇವೇಗೌಡ ಅವರು ಜಿಟಿಡಿ ಮನೆಗೆ ಬಂದಾಗ ಪುತ್ರಿ ಪುತ್ರಿ ಪೂರ್ಣಿಮಾ ಅವರು ದೇವೇಗೌಡ ಅವರಿಗೆ ಆರತಿ ಬೆಳಗಿ ಸ್ವಾಗತ ಕೋರಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ನಾಡಗೌಡ ಸೇರಿದಂತೆ ಬಹುತೇಕ ಎಲ್ಲ ಶಾಸಕರು, ಮಾಜಿ ಸಚಿವರು ಜತೆಗಿದ್ದರು. ಒಳಗೆ ಬಂದು ಕೂತಿದ್ದ ದೇವೇಗೌಡ ಅವರು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಈ ವೇಳೆ ದೇವೇಗೌಡರಿಗೆ ನಮಸ್ಕರಿಸಿದ ಜಿ.ಟಿ. ದೇವೇಗೌಡ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆ ಮೂಲಕ ವರ್ಷಗಳ ವೈಷಮ್ಯ ಕೊನೆಗೊಂಡಿದೆ.
ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವೆ
ಎಚ್.ಡಿ.ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ. ಮರಿ ದೇವೇಗೌಡ ಎಂದು ಕರೆಯುತ್ತಿದ್ದರು. ಜಿಟಿಡಿ ಬಿಟ್ಟು ಹೋಗಲ್ಲ ಜೆಡಿಎಸ್ ಪಕ್ಷದಲ್ಲೇ ಇರುತ್ತಾನೆ ಎಂದು ಹೆಚ್.ಡಿ.ದೇವೇಗೌಡರು ಹೇಳಿದ್ದರು.ಹಿಂದೆ ಹಲವು ಸ್ಥಾನ ಕೊಟ್ಟಿದ್ದರು. ಮೂರು ವರ್ಷ ದೂರ ಇದ್ದರೂ ನನ್ನ ಬಗ್ಗೆ ಪ್ರೀತಿ ಕಡಿಮೆ ಆಗಿರಲಿಲ್ಲ. ಎಚ್.ಡಿ.ದೇವೇಗೌಡರು ಪ್ರಾದೇಶಿಕ ಪಕ್ಷ ಉಳಿಸಿದ್ರು. ಎಚ್.ಡಿ.ದೇವೇಗೌಡರು ಕಂಡ ಕನಸು ನನಸು ಮಾಡುತ್ತೇವೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಜಿ.ಟಿ.ದೇವೇಗೌಡ ಅವರು ಗಳಗಳನೆ ಅತ್ತಿದ್ದಾರೆ.
ದೇವೇಗೌಡ ಅವರು ಪ್ರೀತಿಯ ಹಗ್ಗ ಕಟ್ಟಿಹಾಕಿದ್ದಾರೆ. ಜೆಡಿಎಸ್‌ನಲ್ಲಿ ಉಳಿಯುತ್ತೇನೆ. ತ್ಯಾಗ ಮಾಡಲು ಸಿದ್ಧನಿದ್ದೇನೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ. ಯಾವುದೇ ಮುನಿಸು ಇಲ್ಲ, ಒಂದೇ ಒಂದು ದಿನ ಪಕ್ಷಕ್ಕೆ ಕಳಂಕ ಬರುವಂತೆ ನಡೆದುಕೊಂಡಿಲ್ಲ. ವರ್ಚಸ್ಸಿಗೆ ಧಕ್ಕೆ ತಂದಿಲ್ಲ. ನನ್ನನ್ನು ಸಿದ್ದರಾಮಯ್ಯ ಕರೆದಿದ್ದರು, ಬಿಜೆಪಿಯವರು ಕರೆದಿದ್ದರು. ಆದರೆ ನಾನು ಜೆಡಿಎಸ್ ಬಿಟ್ಟು ಹೋಗಲ್ಲ ಎಂದು ಜಿಟಿಡಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ | Election 2023 | ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶೇ.30 ಯುವಕರಿಗೆ ಜೆಡಿಎಸ್ ಟಿಕೆಟ್ ಬೇಕೆಂದಿದ್ದೇನೆ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್‌ನಲ್ಲೇ ಉಳಿಯುವ ಜಿಟಿಡಿ, ಹುಣಸೂರಲ್ಲಿ ಪುತ್ರನಿಗೆ ಟಿಕೆಟ್
ದೇವೇಗೌಡರ ಭೇಟಿ ಮೂಲಕ ಮೈಸೂರು ರಾಜಕಾರಣಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ತೊರೆಯುವ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಇದಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಸ್ಪರ್ಧೆ ಮಾಡಲಿದ್ದು, ಹುಣಸೂರಿನಲ್ಲಿ ಪುತ್ರ ಹರೀಶ್ ಗೌಡ ಸ್ಪರ್ಧೆ ನಡೆಸಲಿದ್ದಾರೆ ಎಂಬ ಬಗ್ಗೆಯೂ ಮಾತುಕತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪಂಚರತ್ನ ಸಮಾವೇಶಕ್ಕೆ ಜಿಟಿಡಿ ಹಾಜರ್
ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು ನೀಡಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ಒಂದೊಂದೇ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ. ಜಿ.ಟಿ. ದೇವೇಗೌಡ ಅವರ ಭೇಟಿ ಸಂದರ್ಭದಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದು, ಮೈಸೂರಿನಿಂದ ಆರಂಭವಾಗಲಿರುವ ಎರಡನೇ ಹಂತದ ಪಂಚರತ್ನ ರಥಯಾತ್ರೆಯಲ್ಲಿ ಭಾಗಿಯಾಗುವ ಬಗ್ಗೆಯೂ ಮಾತುಕತೆಗಳು ನಡೆದಿವೆ. ಈಗ ಜಿ.ಟಿ. ದೇವೇಗೌಡ ಅವರು ಜೆಡಿಎಸ್‌ನಲ್ಲಿಯೇ ಉಳಿಯುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಸಿದ್ದರಾಮಯ್ಯ ಬಗ್ಗೆ ಎಚ್‌ಡಿಡಿ ಪರೋಕ್ಷ ಟೀಕೆ
ಶಾಸಕ ಜಿ.ಟಿ. ದೇವೇಗೌಡ ಅವರನ್ನು ಮರಿ ದೇವೇಗೌಡ ಎಂದು ಕರೆಯುತ್ತೇನೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಾ.ರಾ.ಮಹೇಶ್ ಬರುವ ಮೊದಲು ಜಿ.ಟಿ.ದೇವೇಗೌಡರು ನಮ್ಮ ಜತೆಯಲ್ಲಿಯೇ ಇದ್ದರು. ಜಿಟಿಡಿ ಅವರನ್ನು ಬೆಳೆಯಲು ಬಿಡಬಾರದು ಎಂದು ನಮ್ಮ ಪಕ್ಷದಲ್ಲಿದ್ದ ಒಬ್ಬರು ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರು. ಈಗ ಅವರು ನಮ್ಮ ಜತೆಯಲ್ಲಿ ಇಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಎಚ್.ಡಿ. ದೇವೇಗೌಡ ಕಿಡಿಕಾರಿದರು.
ಜಿಟಿಡಿ ಬೆಳೆಯಲು ಬಿಟ್ಟರೆ ಆಕ್ರಮಣ ಮಾಡಿಕೊಳ್ಳುತ್ತಾರೆ ಎಂದು ಅವರ ಬೆಳವಣಿಗೆಯನ್ನು ತಡೆಗಟ್ಟಿದರು. ಜಿಟಿಡಿ ಮನೆಗೆ ಬಂದಿದ್ದೇನೆ. ಇಂದು ನನಗೆ ಸಂತೋಷವಾಗಿದೆ. ಒಗ್ಗಟ್ಟಾಗಿ ಇರಬೇಕು. ಈಗ ಸಮಯ ಬಂದಿದೆ. ಎಲ್ಲ ಒಗ್ಗಟ್ಟಾಗಿ ಸೇರಿದ್ದೇವೆ. ತುಂಬಾ ಸಂತೋಷವಾಗಿದೆ. ಪಾರ್ಲಿಮೆಂಟ್ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎದುರಾಳಿಗಳನ್ನು ಎದುರಿಸುವ ಶಕ್ತಿ ನಮಗೆ ಇದೆ. ಆ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಜಿಟಿಡಿ ನಿವಾಸದಲ್ಲಿ ಎಚ್.ಡಿ.ದೇವೇಗೌಡ ಹೇಳಿದರು.
ಇದನ್ನೂ ಓದಿ | Election 2023 | ಮುಂದಿನ ವಿಧಾನಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ; ಸುಳಿವು ನೀಡಿದ ಎಚ್‌ಡಿಕೆ