Site icon Vistara News

Assault Case : ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾಂತಿಲಾಲ್ ಬನ್ಸಾಲಿ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಅಪರಿಚಿತರು ಪರಾರಿ

Kantilal Bhansali a close aide of former CM BS Yediyurappa attacked assaulted in gadag

ಗದಗ: ಗದಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾಂತಿಲಾಲ್ ಬನ್ಸಾಲಿ ಮೇಲೆ ಅಪರಿಚಿತರು ಹಲ್ಲೆ (Assault Case ) ನಡೆಸಿದ್ದಾರೆ. ಮಾಜಿ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ, ಬಿಜೆಪಿ ಮುಖಂಡ, ಉದ್ಯಮಿ ಕಾಂತಿಲಾಲ್ ಬನ್ಸಾಲಿ ಎಪಿಎಂಸಿಯಿಂದ ನಿನ್ನೆ ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಭೂಮರೆಡ್ಡಿ ಸರ್ಕಲ್ ಬಳಿ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ.

ಬಳಿಕ ಕಾಂತಿಲಾಲ್ ಬನ್ಸಾಲಿ ಮೇಲೆ ಹಲ್ಲೆ ಮಾಡಿ ಹಣ ದೋಚಿ ಪರಾರಿ ಆಗಿದ್ದಾರೆ. ಮನೆಗೆ ಹೋಗುವಾಗ ಕಾಂತಿಲಾಲ್ ಬೈಕ್‌ಗೆ ಡಿಕ್ಕಿ ಹೊಡೆದು, ಹಲ್ಲೆ ಮಾಡಿ ಶರ್ಟ್ ಹರಿದು 50 ಸಾವಿರ ಹಣ ದೋಚಿದ್ದಾರೆ. ಮಾತ್ರವಲ್ಲ ನಿಂದು ಬಹಳ ಆಗಿದೆ ಅಂತ ಅವಾಜ್ ಹಾಕಿದ್ದಾರೆ. ಸಾರ್ವಜನಿಕರು ಸ್ಥಳಕ್ಕೆ ಬರುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ರಾಜಕೀಯ ವಿರೋಧಿಗಳು ಮಾಡಿಸಿದ ಹಲ್ಲೆ ಇದು ಎಂಬ ಚರ್ಚೆ ಶುರುವಾಗಿದೆ. ಇತ್ತೀಚೆಗೆ ಗದಗ ಕ್ಷೇತ್ರದ ಬಿಜೆಪಿ ಬೆಳವಣಿಗೆ ಬಗ್ಗೆ ಬಹಿರಂಗವಾಗಿ ಕಾಂತಿಲಾಲ್ ಮಾತನಾಡಿದ್ದರು. ಹೀಗಾಗಿ ಯಾರಾದರೂ ಹೆದರಿಸಲು ಹಲ್ಲೆ ಮಾಡಿಸಿದ್ದಾರಾ ಅಂತ ಬಿಜೆಪಿ ವಲಯದಲ್ಲಿ ಚರ್ಚೆ ಆಗಿದೆ. ಹಣಕ್ಕಾಗಿ ದುಷ್ಕರ್ಮಿಗಳಿಂದ ಹಲ್ಲೆ ನಡೆದೆದಿಯಾ ಎಂಬ ಅನುಮಾನವಿದೆ.

ಬಿಜೆಪಿ ಮುಖಂಡನ ಮೇಲಿನ ಹಲ್ಲೆ ತೀವ್ರವಾಗಿ ಖಂಡಿಸಿದ್ದಾರೆ ಮಾಜಿ ನಿಗಮ ಮಂಡಳಿ ಅಧ್ಯಕ್ಷರಿಗೆ ರಕ್ಷಣೆ ಇಲ್ಲದಿದ್ದರೆ, ಸಾಮಾನ್ಯ ಜನರಿಗೆ ರಕ್ಷಣೆ ಎಲ್ಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಗದಗನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ಹೊರಹಾಕಿದರು. ಬಿಜೆಪಿ ಮುಖಂಡರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ ಕಾಂತಿಲಾಲ್ ದೂರು ದಾಖಲಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲೂ ಬಿಜೆಪಿ ಮುಖಂಡನ ಮನೆಗೆ ನುಗ್ಗಿ ದಾಂಧಲೆ

ಮಂಗಳೂರಿನ ಪ್ರತಿಷ್ಠಿತ ಬಿಲ್ಡರ್, ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಯುವಕರು ದಾಂಧಲೆ ನಡೆಸಿದ್ದಾರೆ. ನಗರದ ಕೊಡಿಯಾಲ್ ಬೈಲ್‌ನ ಮನೆಗೆ ನುಗ್ಗಿ ಗಲಾಟೆ ಮಾಡಿ ದಾಂಧಲೆ ನಡೆಸಿದ ಇಬ್ಬರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಎನ್ ಎಸ್ ಯುಐ ಕಾರ್ಯಕರ್ತ ಅನುಷ್ ಶೆಟ್ಟಿ ಹಾಗೂ ಅಂಕಿತ್ ಶೆಟ್ಟಿ ಬಂಧಿತರು.

ಬೆಂಗಳೂರಿನಿಂದ ಆಗಮಿಸಿದ್ದ ಮಗಳನ್ನು ಕರೆ ತರಲು ರಾತ್ರಿ ಮಂಗಳೂರು ಏರ್‌ಪೋರ್ಟ್‌ಗೆ ಜಿತೇಂದ್ರ ಕೊಟ್ಟಾರಿ ಆಗಮಿಸಿದ್ದರು. ಬಳಿಕ ಕಾರಿನಲ್ಲಿ ಮಗಳ ಜತೆ ಮಂಗಳೂರಿನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಅನುಷ್ ಶೆಟ್ಟಿ ಹಾಗೂ ಅಂಕಿತ್ ಇದ್ದ ಕಾರನ್ನು ಜಿತೇಂದ್ರ ಕೊಟ್ಟಾರಿ ಓವರ್ ಟೇಕ್ ಮಾಡಿದ್ದರು. ಇದೇ ಕೋಪದಲ್ಲಿ ಕಾರನ್ನು ಹಿಂಬಾಲಿಕೊಂಡು ಜಿತೇಂದ್ರ ಕೊಟ್ಟಾರಿ ಮನೆಯ ಬಳಿಗೆ ಬಂದಿದ್ದ ಯುವಕರು, ಕುಡಿತದ ಮತ್ತಿನಲ್ಲಿ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಜಿತೇಂದ್ರ ಕೊಟ್ಟಾರಿ ಮೇಲೆ ಹಲ್ಲೆ ನಡೆಸಿ ತಡೆಯಲು ಬಂದ ಪತ್ನಿ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ.

ಘಟನೆ ಸಂಬಂಧಿಸಿದಂತೆ ಜಿತೇಂದ್ರ ಕೊಟ್ಟಾರಿ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ. ದೂರು ಪಡೆದು ಎಫ್ಐಆರ್ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಇನ್ನು ಬಂಧಿತರಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅಣ್ಣನ ಮಗ ಅನುಷ್ ಶೆಟ್ಟಿ ಎಂದು ತಿಳಿದಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ನೋಟಾ ಅಭಿಯಾನ ನಡೆಸಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version