Site icon Vistara News

Gadaga Brihanmata : ಗದಗ ಬೃಹನ್ಮಠ ಜಾತ್ರೆಯನ್ನೇ ನುಂಗಿ ಹಾಕಿದ ಸ್ವಾಮೀಜಿಗಳ ಗುದ್ದಾಟ

Gadaga Brihanmata (1)

ಗದಗ: ಇಬ್ಬರು ಸ್ವಾಮೀಜಿಗಳ ನಡುವಿನ ಗುದ್ದಾಟ (Fight Between Swameejis), ಭಕ್ತರ ನಡುವಿನ ಪೈಪೋಟಿಯಿಂದಾಗಿ ಗದಗ ಶಿವಾನಂದ ಬೃಹನ್ಮಠದ (Gadaga Brihanmata) ಐತಿಹಾಸಿಕ ಜಾತ್ರಾ ಮಹೋತ್ಸವವೇ (Jatra Mahotsava) ರದ್ದಾಗಿದೆ. ಅತ್ಯಂತ ವೈಭವ ಮತ್ತು ಭಕ್ತಿ ಭಾವಗಳಿಂದ ನಡೆಯುವ ಈ ಉತ್ಸವ ಸ್ವಾಮೀಜಿಗಳ (Gadaga News) ಒಣಪ್ರತಿಷ್ಠೆಗೆ ಬಲಿಯಾಗಿದೆ.

ಹಿರಿಯ ಅಭಿನವ ಶಿವಾನಂದ ಶ್ರೀ, ಕಿರಿಯ ಸದಾಶಿವಾನಂದ ಶ್ರೀಗಳ ಮಧ್ಯದ ಮುನಿಸಿನಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಬ್ಬರು ತಾವೇ ಜಾತ್ರೆಯನ್ನು ನಿರ್ವಹಿಸಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ, ಎರಡೂ ಗುಂಪುಗಳು ನೀನಾ ನಾನಾ ಎಂಬ ರೀತಿಯಲ್ಲಿ ಕದನಕ್ಕೆ ಇಳಿದ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯ, ರಥೋತ್ಸವವನ್ನೇ ರದ್ದುಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರ್ಚ್ 8ರ ರಾತ್ರಿ ಮತ್ತು 9ರಂದು ಧಾರ್ಮಿಕ ಕಾರ್ಯಕ್ರಮ ನಡೆಯಬೇಕಾಗಿತ್ತು. ರಥೋತ್ಸವ,‌ ಪಲ್ಲಕ್ಕಿ ಉತ್ಸವಕ್ಕೆ ಸಂಬಂಧಿಸಿ ಇಬ್ಬರು ಶ್ರೀಗಳ ನಡುವೆ ದೊಡ್ಡ ಮಟ್ಟದ ಗುದ್ದಾಟ ಇತ್ತು. ಇದನ್ನು ಸರಿಪಡಿಸಲು ಗದಗ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ಮಾರ್ಚ್‌ 8ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಸಭೆ ನಡೆಸಿ ಇಬ್ಬರೂ ಸ್ವಾಮೀಜಿಗಳ ಜತೆ ಮಾತುಕತೆ ನಡೆಸಿದರು. ಆದರೆ, ಇದಕ್ಕೆ ಇಬ್ಬರೂ ಸಹಮತ ಸೂಚಿಸಲಿಲ್ಲ. ಒಬ್ಬರು ಒಂದು ಹೇಳಿದರೆ, ಇನ್ನೊಬ್ಬರು ಅದನ್ನು ವಿರೋಧಿಸುವುದು ಹೀಗೆ ಎಲ್ಲದರಲ್ಲೂ ತಕರಾರು ಕಂಡುಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಸರ್ಕಾರಕ್ಕೆ ಪತ್ರ ಬರೆದು ಜಾತ್ರೆಯನ್ನೇ ನಿಲ್ಲಿಸಿದ್ದಾರೆ. ಜತೆಗೆ ಜಾತ್ರೆಯ ಹೆಸರಿನಲ್ಲಿ ಜನ ಸೇರದಂತೆ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಹಿರಿಯ ಅಭಿನವ ಶಿವಾನಂದ ಶ್ರೀ, ಕಿರಿಯ ಸದಾಶಿವಾನಂದ ಶ್ರೀಗಳ ನಡುವೆ ಜಾತ್ರೆಯ ವಿಚಾರದಲ್ಲಿ ವೈಮಸ್ಸು ಹುಟ್ಟಿಕೊಂಡಿದೆ. ಕಿರಿಯ ಶ್ರೀಗಳನ್ನು ಹೊರಗಿಟ್ಟು ಜಾತ್ರೆ ತಯಾರಿ ಮಾಡಿದ್ದಕ್ಕೆ ವಿವಾದ ತೀವ್ರಗೊಂಡಿದೆ. ಕೋರ್ಟ್ ಆದೇಶದ ಹೊರತಾಗಿಯೂ ಕಿರಿಯ ಶ್ರೀಗಳನ್ನು ಕಡೆಗಣನೆ ಮಾಡಲಾಗಿದೆ ಎಂಬ ಆರೋಪವಿದೆ.

ಕಿರಿಯ ಶ್ರೀಗಳ ಬೆಂಬಲಿಗರು ಮಠದಲ್ಲಿ ಸರಣಿ ಸಭೆ ನಡೆಸಿ ಹಿರಿಯ ಶ್ರೀಗಳಿಗೆ ಒತ್ತಡ ಹೇರಿದ್ದರು. ಒಂದು ಹಂತದಲ್ಲಿ ಹಿರಿಯ ಶ್ರೀಗಳು ಒಪ್ಪಂದಕ್ಕೆ ಒಪ್ಪಿ, ಕಿರಿಯ ಶ್ರೀಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾತ್ರೆ ನಡೆಸುವುದಾಗಿ ಹೇಳಿದ್ದರು. ಆದರೆ, ಶಿವರಾತ್ರಿ ದಿನ ನಡೆಯುವ ಶಿವಯೋಗ ಕಾರ್ಯಕ್ರಮ ವಿಚಾರವಾಗಿ ಒಮ್ಮತ ಮೂಡಲಿಲ್ಲ.

ಶಿವಯೋಗ ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳಿಗೂ ಸಿಂಹಾಸನ ಇಡಬೇಕು, ಬ್ಯಾನರ್ ನಲ್ಲಿ ಕಿರಿಯ ಶ್ರೀಗಳ ಫೋಟೋ ಅಳವಡಿಸಬೇಕು ಎಂದು ಕಿರಿಯ ಶ್ರೀಗಳ ಭಕ್ತರು ಪಟ್ಟು ಹಿಡಿದಿದ್ದರು. ಕಿರಿಯ, ಹಿರಿಯ ಶ್ರೀಗಳ ಭಕ್ತರ ಮಧ್ಯೆ ಇದೇ ವಿಚಾರವಾಗಿ ವಾಗ್ವಾದಗಳು ನಡೆದಿದ್ದವು. ಸಿಟ್ಟಿಗೆದ್ದ ಕಿರಿಯ ಶ್ರೀಗಳ ಭಕ್ತರು ಹಿರಿಯ ಶ್ರೀಗಳ ಎದುರು ಧರಣಿ ಕೂರಲು ಮುಂದಾಗಿದ್ದರು.

ಇದನ್ನೂ ಓದಿ : Raja Marga Column : ಬಹುಮುಖಿ ಸ್ತ್ರೀ; ನೀವು ಕಂಡು ಕೇಳರಿಯದ ಹೆಣ್ಣಿನ ಮುಖಗಳು

ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಗಮನಿಸಿದ ತಾಲೂಕು ತಹಸೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ಇಬ್ಬರೂ ಸ್ವಾಮೀಜಿಗಳನ್ನು ಕೂರಿಸಿ ಮಾತುಕತೆ ನಡೆಸಿದರು. ಆದರೆ, ಇಲ್ಲಿ ಪ್ರತಿಷ್ಠೆಯೇ ಮೇಲುಗೈ ಸಾಧಿಸಿತು. ಹೀಗೇ ಮುಂದುವರಿದರೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎದುರಾಗಬಹುದು ಎಂದು ಭಾವಿಸಿದ ತಹಸೀಲ್ದಾರ್‌ ಅವರು ಜಾತ್ರೆಯನ್ನೇ ರದ್ದು ಮಾಡಿದರು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಸೆಕ್ಷನ್ 144 ಜಾರಿ ಮಾಡಿದರು. ಸ್ವಾಮಿಜಿಗಳಿಬ್ಬರ ಜಗಳದಿಂದ ಮಠದ ಸಾವಿರಾರು ಭಕ್ತರ ಮನಸ್ಸಿಗೆ ಘಾಸಿಯಾಗಿದೆ.

Exit mobile version