Site icon Vistara News

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

Gosavi samaj lathicharged Sri Ram Sene calls for bandh in Lakshmeshwara town on October 19

ಗದಗ: ಲಕ್ಷ್ಮೇಶ್ವರ ಪಟ್ಟಣವನ್ನು (Lakshmeshwara Town) ಬಂದ್‌ ಮಾಡುವುದು ಖಚಿತ ಎಂದು ಶ್ರೀರಾಮ ಸೇನೆ ಪಣ ತೊಟ್ಟಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್ ಪ್ರಕರಣ ಖಂಡಿಸಿ, ಶ್ರೀರಾಮಸೇನೆ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿದ್ದು, ಅಕ್ಟೋಬರ್ 19 ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಮತ್ತಷ್ಟು ಬಿಸಿ‌ ಮುಟ್ಟಿಸಲು ಸಜ್ಜಾಗಿದೆ.

ಗುರುವಾರ ಗದಗನ ಪತ್ರಿಕಾ ಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಶ್ರೀರಾಮಸೇನೆ ರಾಜ್ಯ‌ ಕಾರ್ಯದರ್ಶಿ ರಾಜು ಖಾನಪ್ಪನವರ, ದಸರಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆಯಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್ ಆಗಿದೆ. ಇದೆಲ್ಲದಕ್ಕೂ‌ ಕಾರಣ, ಠಾಣೆಯ ಪಿಎಸ್ಐ ಈರಣ್ಣ ರಿತ್ತಿ ಆಗಿದ್ದು, ಅವರನ್ನು ಕೂಡಲೇ‌ ಅಮಾನತು ಮಾಡುವಂತೆ ಒತ್ತಾಯಿಸಿದರು.

ಇನ್ನು ಈ ಬಂದ್ ಕರೆ ವಿರೋಧಿಸಿ ಮುಸ್ಲಿಂ ಹಾಗೂ ಹಿಂದೂ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿ ವಿರೋಧ ಮಾಡಿದ್ದಾರೆ. ಆದರೆ ಅ.19 ರಂದು ಲಕ್ಷ್ಮೇಶ್ವರ ಬಂದ್ ಮಾಡೋದಕ್ಕೆ ಸ್ಥಳಿಯರೇ ನಮಗೆಲ್ಲ ಬೆಂಬಲ ನೀಡುತ್ತಿದ್ದಾರೆ. ಬಂದ್‌ಗೆ ವಿರೋಧಿಸುತ್ತಿರುವವರು ಯಾರೂ ಸಹ ಸ್ಥಳೀಯ ನಾಯಕರಲ್ಲ. ಅವರೆಲ್ಲ ಗ್ಯಾಂಬ್ಲರ್ ಗಳು. ಇವರು ಮಾಡುವ ದಂಧೆಗೆಲ್ಲ ಪಿಎಸ್ಐ ಈರಣ್ಣ ರಿತ್ತಿ ಬೆಂಬಲ ಇದೆ.‌ ಹೀಗಾಗಿ ಪಿಎಸ್‌ಐ ಪರವಾಗಿ ಇವರೆಲ್ಲ ನಿಂತಿದ್ದಾರೆ.‌ ಅದೇನೆ ಇರಲಿ,‌ ನಾವು ಮಾತ್ರ ಬಂದ್ ಮಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದ್ದರು.

ಏನಿದು ಘಟನೆ?

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಸರಾ ಅಂಗವಾಗಿ ದುರ್ಗಾದೇವಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಗೋಸಾವಿ ಸಮುದಾಯ ಸಂಭ್ರಮ ಸಡಗರದಿಂದ ಭಾಗಿಯಾಗಿದ್ದರು. ಈ ವೇಳೆ ಲಕ್ಷ್ಮೇಶ್ವರ ಪಟ್ಟಣದ ಮಾರ್ಕೆಟ್ ಪ್ರದೇಶದಲ್ಲಿ ಮೆರವಣಿಗೆ ಸಾಗುವ ವೇಳೆ,‌ ಅನ್ಯಕೋಮಿನ ಯುವಕರು ಬಂದು ಮೆರವಣಿಗೆಯಲ್ಲಿ ಭಾಗಿಯಾದ ಗೋಸಾವಿ ಯುವಕರ ನಡುವೆ ಗಲಾಟೆಯಾಗಿದೆ. ಆಗ ಗೋಸಾವಿ ಯುವಕರು ಕೇಸರಿ ಶಾಲನ್ನು ಹಿಡಿದು ಹಲ್ಲೆ ಮಾಡಿದ್ದಾರಂತೆ.

ಹೀಗಾಗಿ ಶನಿವಾರ ತಡವಾಗಿದ್ದಕ್ಕೆ ಮರುದಿನ ರವಿವಾರ, ಹಲ್ಲೆಗೊಳಗಾದ ಯುವಕರು ಹಾಗೂ ಗೋಸಾವಿ ಸಮುದಾಯದ ಜನರು ಲಕ್ಷ್ಮೇಶ್ವರ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆಗ ಲಕ್ಷ್ಮೇಶ್ವರ ಪೊಲೀಸರು ದೂರು ದಾಖಲು ಮಾಡಿಕೊಳ್ಳದೆ,‌ ಗೋಸಾವಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿದ್ದರಂತೆ. ಹೀಗಾಗಿ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ, ಗೋಸಾವಿ ಸಮುದಾಯದವರು ಲಕ್ಷ್ಮೇಶ್ವರ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಲಕ್ಷ್ಮೇಶ್ವರ ಪೊಲೀಸರಿಂದ ನಮಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡಿದ್ದರು. ಇನ್ನು ನ್ಯಾಯ ಕೇಳಲು ಹೋದ ಗೋಸಾವಿ ಸಮುದಾಯದ ಜನರಿಗೆ ಲಕ್ಷ್ಮೇಶ್ವರ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಲಕ್ಷ್ಮೇಶ್ವರ ಪಿಎಸ್ಐ ಈರಣ್ಣ ರಿತ್ತಿ ಅವರು ಏಕಪಕ್ಷಿಯಗಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಲಕ್ಷ್ಮೇಶ್ವರ ಪೊಲೀಸರಿಂದ ನಮಗೆ ಅನ್ಯಾಯವಾಗಿದೆ ಎಂದು ಗದಗ ಎಸ್ಪಿ ಕಚೇರಿಗೆ ಗೋಸಾವಿ ಸಮುದಾಯದ, ಯುವಕರು, ಮಹಿಳೆಯರು, ಹಿರಿಯರು ಆಗಮಿಸಿದ್ದರು.

ನಾವು ಬಡ ಜನರು, ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತೇವೆ. ನಾವು ಹಿಂದೂಗಳು ಹೀಗಾಗಿ ಎಲ್ಲ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಆದರೆ, ಅನ್ಯಕೋಮಿನ ಯುವಕರು ನಮ್ಮ ಯುವಕರು ಹಾಕಿದ ಕೇಸರಿ ಶಾಲ್ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ‌ಗೊಳಗಾದವರು ನ್ಯಾಯ ಕೇಳಲು ಹೋದರೆ ಅವರ ಮೇಲೆಯೇ ಲಾಠಿ ಚಾರ್ಜ್ ಮಾಡಿದ್ದಾರೆ. ಯುವಕರು, ಮಹಿಳೆಯರಿಗೆ ಏಟು ಬಿದ್ದಿವೆ. ನಮಗೆ ನ್ಯಾಯ ಕೊಡಿಸಿ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯ ಮಾಡಿದ್ದರು.

ಆದರೆ ಪೊಲೀಸರ ಹೇಳಿಕೆ‌ ಪ್ರಕಾರ, ಠಾಣೆ ಎದುರು ಗುಂಪು ಚದುರಿಸುವ ಸಲುವಾಗಿ, ಲಾಠಿ ಚಾರ್ಜ್ ಮಾಡಲಾಗಿದೆ ಎಂದು ವಾದಿಸಿದ್ದಾರೆ. ಸದ್ಯ ಎರಡು ಕಡೆ ದೂರು- ಪ್ರತಿದೂರು ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಮುಂದುವರೆದ ಭಾಗವಾಗಿ, ಅ.19 ರಂದು ಶ್ರೀರಾಮಸೇನೆ ಸಂಘಟನೆ, ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಕರೆ ನೀಡಿದೆ.

Exit mobile version