ಮೈಸೂರು: ಮೈಸೂರಿನ ಕೆಎಸ್‌ಒಯು ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಇದೇ ವೇಳೆ ಮೂವರು ಮಹನೀಯರು ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ರಾಜ್ಯಪಾಲರ ಹಸ್ತದಿಂದ ಸ್ವೀಕರಿಸಿದ್ದಾರೆ.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ, ಆರ್‌ವಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎ.ವಿ.ಎಸ್. ಮೂರ್ತಿ ಹಾಗೂ ಬೆಂಗಳೂರಿನ ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆಯ ಉಪಾಧ್ಯಕ್ಷ ಇ.ಎಸ್. ಚಕ್ರವರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನದ ಬಳಿಕ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್ ʼಏಕಾಗ್ರತೆಯಿಂದ ಅಧ್ಯನ ಮಾಡಿದ ಪರಿಣಾಮ ಚಿನ್ನದ ಪದಕ ದೊರಕಿದೆ. ಕಠಿಣ ಪರಿಶ್ರಮದಿಂದ ಈ ರೀತಿಯ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಈ ಸಾಧನೆಗೆ ಕಾರಣರಾದ, ನಿಮಗೆ ಬೆನ್ನೆಲುಬಾಗಿ ನಿಂತ ನಿಮ್ಮ ತಂದೆ ತಾಯಿ ಹಾಗೂ ಗುರುಗಳನ್ನು ಸ್ಮರಿಸಿಕೊಳ್ಳಿ. ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಆಗಲಿ.ʼ ಎಂದು ಆಶಿಸಿದರು. ಹಾಗೂ ಪ್ರಶಸ್ತಿ ವಿಜೇತರನ್ನು ಉದ್ದೇಶಿಸಿ ʼ ಈ ಪ್ರಶಸ್ತಿ ನಿಮ್ಮ ಜವಾಬ್ಧಾರಿಯನ್ನು ಹೆಚ್ಚಿಸಿದೆ. ಇನ್ನೂ ಹೆಚ್ಚಿನ ದೇಶ ಸೇವೆ ನಿಮ್ಮಿಂದ ಆಗಲಿʼ ಎಂದು ಹೇಳಿದರು.
ಮುಕ್ತ ವಿವಿ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಸಭೆಗೆ ಆಗಮಿಸಿದ ಜನರನ್ನು ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ʼದೇಶವನ್ನು ಶ್ರೇಷ್ಠ, ಆತ್ಮನಿರ್ಭರ ಭಾರತವಾಗಿಸಲು ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಈ ಮಹತ್ವದ ಕಾರ್ಯದಲ್ಲಿ ಜನರೂ ಸಹಭಾಗಿತ್ವ ನೀಡಬೇಕಿದೆ,ʼ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಮೈಸೂರಿನ ದೇವರಾಜ ಮಾರುಕಟ್ಟೆ ಉಳಿಸಲು ಬೀದಿಗಿಳಿದ ಯದುವೀರ ಒಡೆಯರ್