Site icon Vistara News

Gali Janardhana Reddy: ಮತ್ತೆ ಬಿಜೆಪಿ ಸೇರ್ತಾರಾ ಗಾಲಿ ಜನಾರ್ದನ ರೆಡ್ಡಿ? ಅನುಮಾನಕ್ಕೆ ಪುಷ್ಟಿ ನೀಡಿದ ನಡೆ

Gali Janardhana Reddy

ಕೊಪ್ಪಳ: ಮಾಜಿ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ (Gali Janardhana Reddy) ಅವರು ಮತ್ತೆ ಬಿಜೆಪಿಗೆ ಸೇರುತ್ತಾರಾ ಅನ್ನುವ ಅನುಮಾನ ಮೂಡಿದೆ. ಅವರ ಇತ್ತೀಚಿನ ಕೆಲವು ನಡೆಗಳು ಹಾಗೂ ನಿನ್ನೆ ಅವರು ಬಿಜೆಪಿ ಮುಖಂಡರೊಬ್ಬರನ್ನು ಭೇಟಿಯಾಗಿ ಚರ್ಚಿಸಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿವೆ.

ಸದ್ಯ ಗಾಲಿ ಜನಾರ್ದನ ರೆಡ್ಡಿಯವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ತಾವೇ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ. ನಿನ್ನೆ ಸಂಜೆ ದೇವದುರ್ಗದ ಮಾಜಿ ಶಾಸಕ ಶಿವನಗೌಡ ನಾಯಕ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೆಡ್ಡಿ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ. ಹೀಗಾಗಿ ಅವರು ಬಿಜೆಪಿಗೆ ಮತ್ತೆ ಸೇರಲಿದ್ದಾರೆ ಎಂಬ ಅನುಮಾನ ಮೂಡಿದೆ.

ಇತ್ತೀಚೆಗೆ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯಕ್ರಮದ ಮಂತ್ರಾಕ್ಷತೆಯನ್ನು ಸಹ ಮನೆ ಮನೆಗೆ ತೆರಳಿ ಹಂಚುತ್ತಿದ್ದಾರೆ. ಬಿಜೆಪಿಗೆ ಸೇರುವ ಅನುಮಾನ ಹೆಚ್ಚಾಗಿರುವ ಸಮಯದಲ್ಲೇ ಅವರು ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ ಹಂಚುತ್ತಿರುವುದು ಬಿಜೆಪಿ ಸೇರುವ ವದಂತಿಗೆ ಪುಷ್ಟಿ ನೀಡಿದೆ.

ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಪಕ್ಷದಿಂದ ಹೊರಗೆ ಇರುವ ಹಳೇ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಬಗ್ಗೆ ಪಕ್ಷದ ಆಂತರಿಕ ಸಭೆಗಳಲ್ಲಿ ಚರ್ಚೆಯಾಗಿತ್ತು. ಪಕ್ಷ ಸಂಘಟನೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಪಕ್ಷ ತೊರೆದಿರುವ ನಾಯಕರನ್ನು ಮರಳಿ ಮಾತೃಪಕ್ಷಕ್ಕೆ ಕರೆತಂದು ಸಂಘಟನೆ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.

ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಘಟನೆಯಲ್ಲಿ ಜನಾರ್ದನ ರೆಡ್ಡಿ ಅವರ ಪಾತ್ರ ಪ್ರಮುಖವಾಗಿತ್ತು. ಆಪರೇಷನ್ ಕಮಲ ನಡೆಸಿದ ಅವಧಿಯಲ್ಲಿ ಶಿವನಗೌಡ ನಾಯಕ್ ಬಿಜೆಪಿ ಪಕ್ಷಕ್ಕೆ ಸೇರಿ ಸಚಿವರಾಗಿದ್ದರು. ಇದೀಗ ರೆಡ್ಡಿ-ನಾಯಕ್ ಭೇಟಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

ಆದರೆ ಇದುವರೆಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಯಾವುದೇ ಸಭೆ ಸಮಾರಂಭಗಳಲ್ಲಿಯೂ ಈ ಬಗ್ಗೆ ಹೇಳಿಕೆ ನೀಡಿಲ್ಲ. ಬಿಜೆಪಿ ಹೈಕಮಾಂಡ್‌ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು ತಮ್ಮದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದರು. ಬಿಜೆಪಿ ಸೇರಿದರೆ ಈ ಪಕ್ಷದ ಕತೆಯೇನಾಗಲಿದೆ ಎಂಬುದು ಕೂಡ ಗೊತ್ತಾಗಬೇಕಿದೆ.

ಇದನ್ನೂ ಓದಿ: Koppala News: ಅಂಜನಾದ್ರಿಯಿಂದ ಅಯೋಧ್ಯೆವರೆಗೆ ಗೋಡೆಗಳಲ್ಲಿ ಶ್ರೀರಾಮನ ಭಾವಚಿತ್ರ ಬಿಡಿಸುವ ಕಾರ್ಯಕ್ಕೆ ಚಾಲನೆ

Exit mobile version