ಚಿಕ್ಕೋಡಿ: ಗಣೇಶ ಹಬ್ಬ ಬಂತೆಂದರೆ ಸಾಮಾನ್ಯವಾಗಿ ಪೊಲೀಸರಿಗೆ ಸಿಕ್ಕಾಪಟ್ಟೆ ತಲೆನೋವು. ಅದರಲ್ಲೂ ಈಗೀಗ ವಿವಾದಗಳೇ ಜಾಸ್ತಿಯಾಗಿರುವುದರಿಂದ ಬಂದೋಬಸ್ತ್‌ನಿಂದ ಹಗಲು ರಾತ್ರಿ ಡ್ಯೂಟಿ ಮಾಡಿ ಸುಸ್ತಾಗಿ ಹೋಗಿರುತ್ತಾರೆ. ಆದರೆ, ಅಥಣಿ ಪೊಲೀಸರು ಮಾತ್ರ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣವೂ ಗಣೇಶೋತ್ಸವವವೆ!
ನಿಜವೆಂದರೆ, ಕೆಲವೊಂದು ಕಡೆಗಳಲ್ಲಿ ಹಿಂದೆ ಸಾರ್ವಜನಿಕ ಗಣೇಶೋತ್ಸವ ಇತ್ತೋ ಇಲ್ಲವೋ ಗೊತ್ತಿಲ್ಲ. ಪೊಲೀಸರು ಗಣಪತಿ ತಂದು ಕೂರಿಸಿ ಪೂಜೆ ಮಾಡುವ ಪರಿಪಾಠವಿತ್ತು. ಅದಕ್ಕಾಗಿ ಠಾಣೆಗಳನ್ನು ಅಲಂಕರಿಸುತ್ತಲೂ ಇದ್ದರು. ಈಗಲೂ ಅಂಥ ವಿದ್ಯಮಾನಗಳು ಕೆಲವು ಕಡೆ ನಡೆಯುತ್ತಿವೆ.
ಅಥಣಿ ಪೊಲೀಸ್ ಠಾಣೆಗೂ ಅಂಥ ಪ್ರತೀತಿ ಇದೆ. ಎಂದಿನಂತೆ ಈ ಬಾರಿಯೂ ಠಾಣೆಯಲ್ಲಿ ಗಣೇಶೋತ್ಸವದ ಸಂಭ್ರಮ ನೆಲೆ ಮಾಡಿದೆ. ಪೊಲೀಸರು ಕೋಲು ಬಿಟ್ಟು ಡೋಲು ಹಿಡಿದು ಕುಣಿದು ಗಣೇಶನ ಬರಮಾಡಿಕೊಂಡಿದ್ದಾರೆ. ಖುಷಿ ಖುಷಿಯಾಗಿ ಅವರು ಕುಣಿಯುತ್ತಾ ಡೋಲು ಬಡಿಯುತ್ತಾ ಸಾಗುವ ದೃಶ್ಯಗಳಿಂದ ಊರಿನ ಜನರು ಪುಳಕಿತರಾಗಿದ್ದಾರೆ. ಮಕ್ಕಳೆಲ್ಲ ಅವರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.
ಪೊಲೀಸ್ ಇಲಾಖೆ ವತಿಯಿಂದಲೇ ಇಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಪೊಲೀಸರು ತಮ್ಮ ವೃತ್ತಿಯ ಒತ್ತಡಗಳನ್ನು ಮರೆತು ಖುಷಿಯಾಗಿದ್ದಾರೆ. ಅದ್ದೂರಿ ಡಿಜೆಯನ್ನು ಹಾಕಿ ಸಂಭ್ರಮಿಸಿದ್ದಾರೆ. ಇಡೀ ದಿನ ಗಣಪತಿ ಪೂಜೆ ನಡೆಯಲಿದ್ದು, ಸಂಜೆ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಹಾಗಂತ ಅವರೇನೂ ಗಣೇಶಹಬ್ಬದ ಸಂಭ್ರಮದಲ್ಲಿ ಮೈಮರೆತಿಲ್ಲ. ಒಮ್ಮೆ ಗಣೇಶನನ್ನು ತಂದು ಕೂರಿಸಿದ ಬಳಿಕ ತಮ್ಮ ಕೆಲಸ ಮುಂದುವರಿಸಲಿದ್ದಾರೆ. ಜತೆಗೆ ಊರಿನ ಜನರು ಕೂಡಾ ಠಾಣೆಗೆ ಬಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ, ಪ್ರಸಾದ ಸ್ವೀಕರಿಸುವ ಪ್ರಕ್ರಿಯೆಗಳು ನಡೆಯಲಿವೆ.