ಬೆಂಗಳೂರು: ಕೇರಳ ಮೂಲದ ಬೆಂಗಳೂರು ನಿವಾಸಿ ಸತೀಶನ್ ಎಂಬುವರಿಗೆ ಲೋನ್ ಡಿಸ್ಕೌಂಟ್ ನೀಡುವುದಾಗಿ ನಂಬಿಸಿ ಸುಮಾರು 82 ಲಕ್ಷ ರೂಪಾಯಿಯನ್ನು ವಂಚಿಸಲಾಗಿದೆ. ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಸತೀಶನ್ ಎಂಬುವವರು ಬೆಂಗಳೂರಿನಲ್ಲಿ ಸಿವಿಲ್ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ 2 ಕೋಟಿ ರೂಪಾಯಿ ಸಾಲ ಮಾಡಿದ್ದರು. ಈ ಸಾಲಕ್ಕೆ ಬಡ್ಡಿ ಬೆಳೆದು 10 ಕೋಟಿ ರೂಪಾಯಿಯಷ್ಟು ಹಣ ಬ್ಯಾಂಕ್‌ಗೆ ಸಂದಾಯ ಮಾಡಬೇಕಿತ್ತು. ಇದರಿಂದ ಸತೀಶನ್ ಸಾಲದ ಸುಳಿಯಲ್ಲಿ ಸಿಲುಕಿ ಪರಿತಪಿಸುವಂತಾಗಿತ್ತು.
ಈ ವೇಳೆ ರಾಘವ್ ಲಾಲ್ ಹಾಗೂ ಪಿಳ್ಳೆ ಎಂಬುವರು ಸತೀಶನ್ ಅವರನ್ನು ಹುಡುಕಿಕೊಂಡು ಬಂದಿದ್ದರು. ಆಡಿಟರ್ ಹಾಗೂ ಕಾನೂನು ಸಲಹೆಗಾರರು ಎಂದು ಸುಳ್ಳು ಹೇಳಿಕೊಂಡು ಸತೀಶನ್ ಅವರನ್ನು ಭೆಟಿ ಮಾಡಿದ್ದಾರೆ. ನಂತರ, ಸತೀಶನ್ ಅವರ ಸಾಲವನ್ನು ಡಿಸ್ಕೌಂಟ್ ಮಾಡಿಸಿ ಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡಿದ್ದಾರೆ. ಸತೀಶನ್ ಅವರಿಂದ ಸುಮಾರು 82 ಲಕ್ಷ ರೂಪಾಯಿಗಳಷ್ಟು ಹಣವನ್ನು ವಂಚನೆ ಮಾಡಿದ್ದಾರೆ.
ಅಂತಿಮವಾಗಿ ತಾವು ವಂಚನೆಗೆ ಒಳಗಾಗಿರುವ ವಿಷಯ ತಿಳಿದ ಸತೀಶನ್ ಅವರು, ಜಯನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಅವರು ತನಿಖೆ ಚುರುಕುಗೊಳಿಸಿ ವಂಚಕರಾದ ಪಿಳ್ಳೆ ಮತ್ತು ರಾಘವ್ ಲಾಲ್ ಇಬ್ಬರನ್ನೂ ಬಂಧಿಸಿದ್ದಾರೆ. ಈ ಆರೋಪಿಗಳು ಬ್ಯಾಂಕ್‌ಗಳಿಂದ ಸಾಲ ಪಡೆದವರ ಡಾಟಾವನ್ನು ಪಡೆಯುತ್ತಿದ್ದು, ಬಳಿಕ ವಂಚನೆ ಮಾಡಲು ಜಾಲ ಬೀಸುತ್ತಿರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ: ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳು ಇದ್ದರೆ ಹುಷಾರ್! ತಕ್ಷಣ ಡಿಲೀಟ್ ಮಾಡಿ