ಕೊಪ್ಪಳ: ಕಳೆದ 13 ವರ್ಷಗಳಿಂದ ಗಣಪನ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತ ಬಂದಿರುವ ಮುಸ್ಲಿಂ ಬಾಂಧವರು ಈ ವರ್ಷವೂ ವಿನಾಯಕನನ್ನು ಕೂರಿಸಿ ಸಂಭ್ರಮಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಭಾವೈಕ್ಯ ಸಾರುವ ಈ ವಿಶಿಷ್ಟ ಗಣೇಶೋತ್ಸವ ನಡೆದಿದೆ. ಈ ಗಣೇಶನಿಗೆ ʼಗ್ಯಾರೇಜ್ ಗಣೇಶʼ ಎಂದೂ ಇವರು ಕರೆಯುತ್ತಾರೆ.
ಸೂಫಿ ಶರಣರ ನಾಡಿನಲ್ಲಿ ಸೌಹಾರ್ದತೆಗೆ ಇನ್ನೊಂದು ಸಾಕ್ಷಿಯಾಗಿದೆ ಈ ಗಣೇಶ ಹಬ್ಬ. ಇಲ್ಲಿನ ಗ್ಯಾರೇಜ್, ಪಂಚರ್ ಶಾಪ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕ್ ಅಂಗಡಿಯಲ್ಲಿರುವ ಮುಸ್ಲಿಮರು ಸೇರಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದು, ಈ ವರ್ಷವೂ ಶ್ರದ್ಧೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಗಣೇಶ ಪ್ರತಿಷ್ಠಾಪನೆಯಿಂದ ನಮ್ಮ ಮನೆಗಳಲ್ಲಿ ಒಳ್ಳೆಯದಾಗುತ್ತಿದೆ. ಡೊಳ್ಳು ಹೊಟ್ಟೆ ಗಣಪನೆಂದರೆ ನಮಗೂ ಇಷ್ಟ. ಗಣೇಶ ಚತುರ್ಥಿಗೆ ನಾವು ತೋರುವ ಪ್ರೀತಿಯನ್ನು ಹಿಂದೂಗಳು ಮೋಹರಂ, ರಂಜಾನ್‌ಗೆ ತೋರುತ್ತಾರೆ ಎನ್ನುತ್ತಾರೆ ಇಲ್ಲಿ ಗಣಪನನ್ನು ಕೂರಿಸುವ ಮುಸ್ಲಿಂ ಶ್ರದ್ಧಾಳುಗಳು.
ಎಲ್ಲ ಧರ್ಮದವರಿಗೆ ಇರುವ ದೇವರು ಒಬ್ಬನೇ. ದೇವರನ್ನು ಕರೆಯುವ ಹೆಸರುಗಳು ಮಾತ್ರ ಬೇರೆ ಬೇರೆ. ಹಿಂದೂ-ಮುಸ್ಲಿಂ ಬೇರೆ ಬೇರೆಯಲ್ಲ, ಭಾರತೀಯರು ನಾವೆಲ್ಲರೂ ಒಂದೇ ಎನ್ನುವ ಭಾವುಕ ಸಂದೇಶ ಇವರ ಮಾತಿನಲ್ಲಿ ವ್ಯಕ್ತವಾಗುತ್ತದೆ.
ಇದನ್ನೂ ಓದಿ | Ganesh Chaturthi 2022 | ಮಂಡ್ಯದಲ್ಲಿ ಮುಸ್ಲಿಂರಿಂದ ಭಾವೈಕ್ಯತೆಯ ಗಣೇಶ ಹಬ್ಬ ಆಚರಣೆ