ಕಲಬುರಗಿ: ಕಲಬುರಗಿ ಜಿಲ್ಲೆಯ ಶಹಬಾದ್ ನಗರ ಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬನೂರ್ (42) ಎಂಬುವರ ಮೇಲೆ ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಗರ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಅಧ್ಯಕ್ಷೆಯ ಪತಿ ಗಿರೀಶ್ ಕಂಬನೂರ್ ಅನೇಕ ಜನಪರ ಕೆಲಸಗಳನ್ನು ಮಾಡಿದ್ದರು ಎನ್ನಲಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಾಯಕ ಗಿರೀಶ್ ಕಂಬನೂರ್ ಅವರನ್ನು ಸೋಮವಾರದಂದು (ಜುಲೈ 10) ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಶಹಬಾದ್ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಬುಕ್ ಮಾಡಲು ಆಗಮಿಸಿದಾಗ ಗಿರೀಶ್ ಅವರ ಮೇಲೆ ನಾಲ್ವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸುಮಾರು 15 ರಿಂದ 20 ಬಾರಿ ಮಾರಕಾಸ್ತ್ರಗಳಿಂದ ಇರಿದು ಹತ್ಯೆ ಮಾಡಿದ್ದಾರೆ. ಆ ಬಳಿಕ ಕತ್ತಿಯನ್ನು ಚುಚ್ಚಿದ ಸ್ಥಿತಿಯಲ್ಲಿಯೇ ಗಿರೀಶ್ ದೇಹದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಗಿರೀಶ್ ಕಂಬನೂರ್ ಅವರನ್ನು ಕೂಡಲೇ ಕಲಬುರಗಿಯ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಮೃತಪಟ್ಟಿದ್ದಾರೆ.
2 ವರ್ಷಗಳ ಹಿಂದೆ ಗಿರೀಶ್ ಸಹೋದರ ಸತೀಶ್ ಎಂಬುವರನ್ನು ಹತ್ಯೆ ಮಾಡಲಾಗಿತ್ತು. ಈಗ ಗಿರೀಶ್ ಅವರನ್ನು ಹತ್ಯೆ ಮಾಡಲು ಹಳೆಯ ವೈಷಮ್ಯ ಕಾರಣವಿರಬಹುದು ಎನ್ನಲಾಗಿದೆ. ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Supari Killing | ಫೇಸ್‌ಬುಕ್ ಫ್ರೆಂಡ್ ಸುಪಾರಿ ಪಡೆದು ಫೇಸ್‌ಬುಕ್ ಫ್ರೆಂಡನ್ನೆ ಕೊಂದು ವಿಡಿಯೋ ಮಾಡಿದಳು