ರಾಮನಗರ: ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕನಕಪುರ ಬೈಪಾಸ್ ರಸ್ತೆಯ ನಾರಾಯಣಪ್ಪ ಕೆರೆ ಬಳಿ ನಡೆದಿದೆ. ಆ್ಯಸಿಡ್ ದಾಳಿಯಿಂದ (Acid Attack on Girl) ಬಾಲಕಿಯ ಎಡ ಭಾಗದ ಕಣ್ಣಿಗೆ ಗಂಭೀರ ಗಾಯವಾಗಿ, ದೃಷ್ಟಿ ಸಾಮರ್ಥ್ಯ ಕಡಿತವಾಗಿದೆ.
ಸುಮಂತ್ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ. ಮಾತನಾಡಬೇಕು ಬಾ ಎಂದು ಬಾಲಕಿಯನ್ನು ಆರೋಪಿ ಕರೆಸಿಕೊಂಡಿದ್ದಾನೆ. ಹೀಗಾಗಿ ತಮ್ಮನ ಜತೆ ಬೈಪಾಸ್ ರಸ್ತೆಗೆ ಪಿಯುಸಿ ವಿದ್ಯಾರ್ಥಿನಿ ಬಂದಿದ್ದಾಳೆ. ಈ ವೇಳೆ ತನ್ನ ಪ್ರೀತಿ ಒಪ್ಪಿಕೊಳ್ಳುವಂತೆ ಯುವಕ ಸುಮಂತ್ ಒತ್ತಾಯಿಸಿದ್ದಾನೆ. ಆದರೆ, ಪ್ರೀತಿ ಒಪ್ಪಲು ಬಾಲಕಿ ನಿರಾಕರಿಸಿದ್ದರಿಂದ ಆ್ಯಸಿಡ್ ದಾಳಿ ಮಾಡಿದ್ದಾನೆ. ಇದರಿಂದ ಬಾಲಕಿ ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Suicide Case: ಮದುವೆಯಾಗಿ 5 ವರ್ಷವಾದರೂ ಮಕ್ಕಳಾಗಿಲ್ಲ ಎಂಬ ಕೊರಗಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ
ಈ ಹಿಂದೆಯೂ ಹಲವು ಬಾರಿ ಬಾಲಕಿಗೆ ಪ್ರೀತಿಸುವಂತೆ ಸುಮಂತ್ ಒತ್ತಾಯಿಸಿದ್ದ ಎನ್ನಲಾಗಿದೆ. ಕನಕಪುರ ಟೌನ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆ್ಯಸಿಡ್ ದಾಳಿಕೋರನಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯ ಮಹಿಳಾ ಆಯೋಗದಿಂದ ರಾಮನಗರ ಎಸ್‌ಪಿ ಗೆ ಕರೆ
ಬಾಲಕಿ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್‌ಪಿಯಿಂದ ರಾಜ್ಯ ಮಹಿಳಾ ಆಯೋಗ ಮಾಹಿತಿ ಪಡೆದಿದ್ದು, ದಾಳಿ ಮಾಡಿರುವ ಯುವಕನ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಶನಿವಾರ ಯುವತಿಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಭೇಟಿಯಾಗಲಿದ್ದಾರೆ.
ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ಮುಂದುವರಿದಿದೆ. ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಿಂಟೋ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ಎಡಗಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎಡಗಣ್ಣಿನ ದೃಷ್ಟಿ ಸಾಮರ್ಥ್ಯ ಕಡಿತ
ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ಪ್ರತಿಕ್ರಿಯಿಸಿ, ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಎಡಗಣ್ಣು ಮತ್ತು ಮುಖದ ಎಡ ಭಾಗದಲ್ಲೇ ಸುಟ್ಟು ಹೋಗಿದೆ. ಬಲಗಣ್ಣಿಗೆ ಯಾವುದೇ ಸಮಸ್ಯೆ ಆಗಿಲ್ಲ. ಎಡಗಣ್ಣಿನ ದೃಷ್ಟಿ ಸಾಮರ್ಥ್ಯ ಕಡಿತಗೊಂಡಿದೆ. ಕಣ್ಣಿನ ಮೂರು ಲೈನ್‌ವರೆಗೆ ಆ್ಯಸಿಡ್ ಬಿದ್ದಿದೆ. ಇಂತಹ ಪ್ರಕರಣಗಳಲ್ಲಿ ಕಣ್ಣಿನ ದೃಷ್ಟಿ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.