Site icon Vistara News

ನೇಕಾರ ಸಮುದಾಯಕ್ಕೆ 10 ಕ್ಷೇತ್ರದಲ್ಲಿ ಟಿಕೆಟ್‌ ಕೊಡಿ, ಇಲ್ಲದಿದ್ದರೆ ಪರಿಣಾಮ ಎದುರಿಸಿ; ಮೂರೂ ಪಕ್ಷಗಳಿಗೆ ಸ್ವಾಮೀಜಿಗಳ ಖಡಕ್‌ ಎಚ್ಚರಿಕೆ

give a ticket to the nekara community in 10 constituencies swamijis warning to all political parties Karnataka Election 2023 updates

ಹುಬ್ಬಳ್ಳಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ರಾಜಕೀಯ ಪಕ್ಷಗಳಿಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಒಂದು ಕಡೆ ಪಕ್ಷದೊಳಗಿನ ಭಿನ್ನಮತಗಳು ಎದುರಾದರೆ, ಮತ್ತೊಂದು ಕಡೆ ಸಮುದಾಯಗಳ ವಿರೋಧದ ಬಿಸಿ ತಟ್ಟುತ್ತಿದೆ. ಈಗ ನೇಕಾರ ಸಮುದಾಯದವರು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಧ್ವನಿ ಎತ್ತಿದ್ದು, ಈ ಎಲೆಕ್ಷನ್‌ನಲ್ಲಿ ಸಮುದಾಯದ ಹತ್ತು ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ. ಈ ಸಂಬಂಧ ನೇಕಾರ ಸಮುದಾಯದ ಸ್ವಾಮೀಜಿಗಳು ಸುದ್ದಿಗೋಷ್ಠಿ ನಡೆಸಿ ಎಲ್ಲ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯನ್ನು ನೀಡಿದ್ದಾರೆ. ಇಲ್ಲದಿದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕು ಎಂಬ ಎಚ್ಚರಿಕೆ ಸಂದೇಶವನ್ನೂ ರವಾನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನೇಕಾರ ಸಮುದಾಯದ ಸ್ವಾಮೀಜಿಗಳು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ನಮ್ಮ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಬೇಕು. ಒಂದು ವೇಳೆ ಟಿಕೆಟ್ ಕೊಡದೇ ಹೋದರೆ ಮುಂದಿನ ದಾರಿಯನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಎಲ್ಲ ರಾಜಕೀಯ ಪಕ್ಷಗಳಿಗೆ ಒಳ ಹೊಡೆತ ಕೊಡಲು ನೇಕಾರರು ಮುಂದಾಗಿದ್ದಾರೆನ್ನಲಾಗಿದೆ.

ನೇಕಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ನೇಕಾರ ಸಮುದಾಯದಲ್ಲಿ ಸುಮಾರು 25 ಒಳಪಂಗಡಗಳಿವೆ. ಅಲ್ಲದೆ, ಸಮುದಾಯವು 60 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ನೇಕಾರ ಸಮುದಾಯಕ್ಕೆ ಎಲ್ಲ ರಾಜಕೀಯ ಪಕ್ಷಗಳು ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಹೀಗಾಗಿ ಕನಿಷ್ಠ 10 ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ನಾಯಕರಿಗೆ ಟಿಕೆಟ್‌ ನೀಡದೇ ಹೋದರೆ ಮುಂದಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: Karnataka Election: ಬಿಜೆಪಿಗೆ ಗುಡ್‌ಬೈ ಹೇಳಿದ ಬಿಎಸ್‌ವೈ ಆಪ್ತ: ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರ್ಪಡೆ

ಸ್ವಾಮೀಜಿಗಳ ಎಚ್ಚರಿಕೆ

ಸುಮಾರು 54 ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಜನರ ಮತಗಳು ನಿರ್ಣಾಯಕವಾಗಿವೆ. ಆದರೆ, ನಮ್ಮನ್ನು ಕಡೆಗಣಿಸಲಾಗಿದೆ. ರಾಜಕೀಯ ಪ್ರಾತಿನಿಧ್ಯ ನೀಡದೇ ಇರುವುದು ಖೇದಕರ. ಈಗಲೂ ಪಕ್ಷಗಳು ನಮಗೆ ಸೂಕ್ತ ಅವಕಾಶವನ್ನು ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಇದರ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಎಂದು ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.

Exit mobile version