Site icon Vistara News

Go Back Ashok: ಮಂಡ್ಯದಲ್ಲಿ ಹೆಚ್ಚಾದ ಅಶೋಕ್‌ ಗೋ ಬ್ಯಾಕ್‌ ಅಭಿಯಾನ; ಬೇಡ ಹೊಂದಾಣಿಕೆ ರಾಜಕಾರಣವೆಂದ ಬಿಜೆಪಿ ಕಾರ್ಯಕರ್ತರು

Ashok Go Back campaign intensified in Mandya No compromise politics says BJP workers

ಮಂಡ್ಯ: ಕಂದಾಯ ಸಚಿವ ಆರ್.‌ ಅಶೋಕ್‌ ಅವರನ್ನು ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ (District in-charge minister) ನೇಮಕ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಗೋ ಬ್ಯಾಕ್‌ (Go Back Ashok) ಚಳವಳಿ ತೀವ್ರಗೊಂಡಿದೆ. ಅಲ್ಲದೆ, ಬಾಯ್‌ಕಾಟ್‌ ಅಭಿಯಾನವೂ ಪ್ರಾರಂಭವಾಗಿದೆ. ಈಗ ಅಶೋಕ್‌ ಮೇಲೆ “ಹೊಂದಾಣಿಕೆ ರಾಜಕಾರಣ”ದ ಗಂಭೀರ ಆರೋಪ ಕೇಳಿಬಂದಿದ್ದು, ಜಿಲ್ಲೆಯಲ್ಲಿ ಪಕ್ಷವನ್ನು ಬೆಳೆಯಲು ಬಿಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಮಂಡ್ಯ ಬಿಜೆಪಿಯಲ್ಲಿ ಈಗಾಗಲೇ ಅಸಮಾಧಾನ ತೀವ್ರಗೊಂಡಿದೆ. ಕಳೆದ ಮೂರ್ನಾಲ್ಕು ದಿನದಿಂದ ಗೋ ಬ್ಯಾಕ್ ಅಭಿಯಾನ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಮೊದಲು ಅಸಮಾಧಾನವನ್ನು ವ್ಯಕ್ತಪಡಿಸಲಾಗಿತ್ತು. ಈಗ ಗೋಡೆಗಳ ಮೇಲೆಯೂ ಪೋಸ್ಟರ್ ಅಂಟಿಸಿ ಆಕ್ರೋಶವನ್ನು ಹೊರಹಾಕಲಾಗಿದೆ. ಅಲ್ಲದೆ, ಕೈ ಬರಹದಲ್ಲಿ ಗೋ ಬ್ಯಾಕ್ ಅಶೋಕ್ ಎಂಬ ಸಾಲನ್ನೂ ಬರೆಯಲಾಗಿದೆ. ಅಶೋಕ್‌ ಅವರೇ ಮಂಡ್ಯ ಉಸ್ತುವಾರಿಯಿಂದ ಹೊರ ಹೋಗಿ ಎಂದು ಒತ್ತಾಯಿಸುತ್ತಿದ್ದಾರೆ.

ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಬಳಿ ಬರುವ ಬೆಂಗಳೂರು-ಮೈಸೂರು‌ ದಶಪಥ ಹೆದ್ದಾರಿಯ ಅಂಡರ್ ಪಾಸ್ ರಸ್ತೆಯಲ್ಲಿ ಗೋಡೆ ಬರಹವನ್ನು ಕಾಣಬಹುದಾಗಿದೆ. ಅಶೋಕ್ ಮಂಡ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡುತ್ತಾರೆ. ಇವರೇ ಉಸ್ತುವಾರಿ ಸಚಿವರಾಗಿದ್ದರೆ ಬಿಜೆಪಿಯನ್ನು ಬೆಳೆಯಲು ಬಿಡುವುದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Ratha Saptami 2023 : ಸರ್ವರಿಗೂ ಪ್ರಿಯ ಸೂರ್ಯದೇವನನ್ನು ಪೂಜಿಸುವ ಹಬ್ಬ ರಥ ಸಪ್ತಮಿ

ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಸಹಿಸುವುದಿಲ್ಲ. ನಾವು ಬಿಜೆಪಿ ಕಾರ್ಯಕರ್ತರಾಗಿದ್ದು, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಮಂಡ್ಯದ ಸ್ವಾಭಿಮಾನಿ ಕಾರ್ಯಕರ್ತರೇ ಸಾಕು. ದಯವಿಟ್ಟು ನೀವು ವಾಪಸ್ ಹೋಗಿ ಎಂದು ಅಭಿಯಾನ ನಡೆಸಲಾಗುತ್ತಿದೆ. ಗಣರಾಜ್ಯೋತ್ಸವಕ್ಕಾಗಿ ಜಿಲ್ಲೆಗೆ ಆಗಮಿಸಿದ್ದ ಆರ್. ಅಶೋಕ್ ಅವರನ್ನು ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾಗ, ಆ ರೀತಿಯಾದಂತಹ ಯಾವುದೇ ವಿರೋಧ ಇಲ್ಲ. ನಮ್ಮ ಪಕ್ಷದವರಿಂದ ಯಾವುದೇ ರೀತಿಯ ಅಸಮಾಧಾನವೂ ಕಂಡುಬಂದಿಲ್ಲ. ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಉತ್ತರ ನೀಡಿದ್ದರು.

ಮಂಡ್ಯದಲ್ಲಿ ಯಾವುದೇ ವಿರೋಧ ಇಲ್ಲ- ಸಿಎಂ

ಮಂಡ್ಯದಲ್ಲಿ‌ ಉಸ್ತುವಾರಿ ಸಚಿವ ಆರ್.ಅಶೋಕ್‌ಗೆ ಗೋಬ್ಯಾಕ್ ಪೋಸ್ಟರ್ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ನೇಮಕಕ್ಕೆ ಮಂಡ್ಯದಲ್ಲಿ ಸ್ವಪಕ್ಷದಿಂದ ಯಾವುದೇ ವಿರೋಧ ಇಲ್ಲ. ಆರ್.ಅಶೋಕ್‌ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಖುಷಿಯಿಂದ ಇದ್ದಾರೆ‌. ಯಾರೋ ಹತ್ತು ಜನ ಪೋಸ್ಟರ್ ಹಾಕುವುದರಿಂದ ಏನೂ ಆಗಲ್ಲ. ಇದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ.
ಅದಕ್ಕಾಗಿ ನಾನು ಈ ಬಗ್ಗೆ ಗಮನಹರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಳೇ ಮೈಸೂರು ಟಾರ್ಗೆಟ್‌ ಮಾಡಿರುವ ಬಿಜೆಪಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆದಿರುವ ಬಿಜೆಪಿ ಈ ಭಾಗದಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಏತನ್ಮಧ್ಯೆ ಈಚೆಗೆ ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟನೆಗೆ ಕೇಂದ್ರ ಗೃಹ ಮಂತ್ರಿ ಹಾಗೂ ಸಹಕಾರಿ ಸಚಿವ ಅಮಿತ್‌ ಶಾ ಆಗಮಿಸಿದ್ದರು. ಅಲ್ಲದೆ, ಈ ವೇಳೆ ಮೈಶುಗರ್‌ ಸಕ್ಕರೆ ಕಾರ್ಖಾನೆಗೆ ಪುನರುಜ್ಜೀವನ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಅಲ್ಲದೆ, ಈ ಭಾಗದ ಪುನರುಜ್ಜೀವನಕ್ಕೆ ಶ್ರಮವಹಿಸುವುದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ವಿಸ್ತಾರ Money Plus : ತಿಂಗಳಿಗೆ 9250 ರೂ. ಗಳಿಕೆ, ರಿಸ್ಕ್‌ ಇಲ್ವೇ ಇಲ್ಲ! ಕೇಂದ್ರ ಸರ್ಕಾರವೇ ಗ್ಯಾರಂಟಿ

ಮಂಡ್ಯ ಜಿಲ್ಲೆ ಇತಿಹಾಸದಲ್ಲೇ ಕಳೆದ ಬಾರಿ ನಡೆದ ಉಪ ಚುನಾವಣೆಯಲ್ಲಿ ಕೆ.ಆರ್.‌ ಪೇಟೆ ಕ್ಷೇತ್ರದಿಂದ ಬಿಜೆಪಿ ಸ್ಥಾನವನ್ನು ಪಡೆದುಕೊಂಡಿತ್ತು. ಹಾಲಿ ಸಚಿವರಾಗಿರುವ ನಾರಾಯಣ ಗೌಡ ಅವರು ಜೆಡಿಎಸ್‌ ತೊರೆದು ಬಿಜೆಪಿಗೆ ಬಂದು ಸ್ಪರ್ಧಿಸಿ ಜಯಗಳಿಸಿದ್ದರು. ಬಳಿಕ ಅವರೇ ಕೆಲವು ಕಾಲ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಬಳಿಕ ಆಯಾ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗುವುದು ಬೇಡ ಎಂಬ ನಿರ್ಣಯಕ್ಕೆ ಬಂದ ಹಿನ್ನೆಲೆಯಲ್ಲಿ ಅವರನ್ನು ಬದಲಾಯಿಸಿ ಗೋಪಾಲಯ್ಯ ಅವರಿಗೆ ಉಸ್ತುವಾರಿ ಹೊಣೆಯನ್ನು ವಹಿಸಲಾಗಿತ್ತು. ಅವರು ಹಾಸನ ಜತೆಗೆ ಮಂಡ್ಯವನ್ನೂ ನೋಡಿಕೊಳ್ಳುತ್ತಿದ್ದರು. ಜತೆಗೆ ನಾರಾಯಣ ಗೌಡ ಅವರ ಸ್ನೇಹಿತರೂ ಆಗಿದ್ದರಿಂದ ಇಬ್ಬರೂ ಸೇರಿ ಮಂಡ್ಯದಲ್ಲಿ ಸಂಚಲನ ಮೂಡಿಸಲು ಬಿಜೆಪಿಯನ್ನು ಕಟ್ಟಲು ಮುಂದಾಗಿದ್ದರು. ಈಗ ಏಕಾಏಕಿ ಅಶೋಕ್‌ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

Exit mobile version