Site icon Vistara News

Karnataka Election: ಧಾರವಾಡದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 44 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Gold ornaments worth Rs 44 lakh seized in Dharwad

Gold ornaments worth Rs 44 lakh seized in Dharwad

ಧಾರವಾಡ: ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಎಲ್ಲೆಡೆ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಈ ನಡುವೆ ತಾಲೂಕಿನ ತೆಗೂರು ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 44 ಲಕ್ಷ ರೂಪಾಯಿ ಮೌಲ್ಯದ 710 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ರಮೇಶ್ ನಾಯಕ್ ಎಂಬಾತ ಚಿನ್ನಾಭರಣದೊಂದಿಗೆ ತೆರಳುತ್ತಿದ್ದರು. ಈ ವೇಳೆ ಪೊಲೀಸರು ತಪಾಸಣೆ ನಡೆಸಿದಾಗ ಚಿನ್ನಾಭರಣ ಕಂಡುಬಂದಿದೆ. ಹೀಗಾಗಿ ಚಿನ್ನಾಭರಣ ಹಾಗೂ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹುಕ್ಕೇರಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 11. 49 ಲಕ್ಷ ರೂಪಾಯಿ ಜಪ್ತಿ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 11.49 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಶಾಲ್ ಔಜಾ ಎಂಬುವವರು ಕಾರಿನಲ್ಲಿ ನಗದು ತೆಗೆದುಕೊಂಡು ಹೋಗುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸಾವಂತವಾಡಿಯಿಂದ ಕೊಲ್ಲಾಪುರಕ್ಕೆ ಕುಶಾಲ್ ಹಣ ಸಾಗಿಸುತ್ತಿದ್ದ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಟಿ ಅಧಿಕಾರಿಗಳಿಗೆ ಕೇಸ್ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ | Cow slaughter : ಜಾನುವಾರು ಸಾಗಾಟಗಾರನ ಸಾವು; ಪುನೀತ್‌ ಕೆರೆಹಳ್ಳಿ ಸೇರಿ ಐವರು ರಾಜಸ್ಥಾನದಲ್ಲಿ ಸೆರೆ

ಅದೇ ರೀತಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ‌ ಹಳ್ಳೂರು ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸಿತ್ತಿದ್ದ 1.25 ಕೆ.ಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಲಿಂಗಪುರದಿಂದ ಬೆಳಗಾವಿಯತ್ತ ಸಾಗುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಬಂಗಾರ ಪತ್ತೆಯಾಗಿದೆ. ಚಿನ್ನ ಹಾಗೂ ಕಾರು ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಆರ್‌.ಟಿ.ನಗರದಲ್ಲಿ 231 ಕುಕ್ಕರ್‌ ವಶ

ಬೆಂಗಳೂರು: ಆರ್‌.ಟಿ.ನಗರದ ಮನೆಯೊಂದರಲ್ಲಿ ಮತದಾರರಿಗೆ ಹಂಚಿಕೆ ಮಾಡಲು ದಾಸ್ತಾನು ಮಾಡಿದ್ದ 231 ಕುಕ್ಕರ್‌ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಭಾವಚಿತ್ರವಿರುವ 60 ಕುಕ್ಕರ್‌ ಇದ್ದು, ಉಳಿದ ಕುಕ್ಕರ್‌ಗಳೆಲ್ಲವೂ ಬಾಕ್ಸ್‌ಗಳಲ್ಲಿ ಪ್ಯಾಕ್ ಆಗಿವೆ. ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್‌ನೊಂದಿಗೆ ಆರ್.ಟಿ.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Karnataka Elections : ಕಾಂಗ್ರೆಸ್‌ ಆರೋಪದ ಬೆನ್ನಲ್ಲೇ ಐಟಿ ರೇಡ್‌ ಶುರು; ರಾಜ್ಯಾದ್ಯಂತ ಒಂದೇ ದಿನ 2.6 ಕೋಟಿ ಸೀಜ್

ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟು ಸಾಗಿಸುತ್ತಿದ್ದ 1.5 ಲಕ್ಷ ರೂ. ವಶ

ಕೋಲಾರ: ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕೆಂಪಾಪುರ ಚೆಕ್‌ಪೋಸ್ಟ್‌ನಲ್ಲಿ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟು ಸಾಗಿಸುತ್ತಿದ್ದ 1.55 ಲಕ್ಷ ರೂ.ಗಳನ್ನು ಎಸ್‌ಎಸ್‌ಟಿ ತಂಡ ವಶಕ್ಕೆ ಪಡೆದಿದೆ. ಸೂಕ್ತ ದಾಖಲೆ ಇಲ್ಲದ ಹಿನ್ನೆಲೆ ಆಂಧ್ರ ಪ್ರದೇಶದ ಪೊಗರಪಲ್ಲಿಯ ಮಧುಸೂದನ್‌ರೆಡ್ಡಿ ಎಂಬುವವರಿಂದ ಹಣ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಗದಗ ತಾಲೂಕಿನ ದುಂದೂರು ಚೆಕ್‌ಪೋಸ್ಟ್‌ನಲ್ಲಿ 50 ಲಕ್ಷ ರೂ. ಜಪ್ತಿ

ಗದಗ: ತಾಲೂಕಿನ ದುಂದೂರು ಚೆಕ್‌ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುವ ವೇಳೆ ಟ್ರಂಕ್‌ನಲ್ಲಿ ತುಂಬಿ ಸಾಗಿಸುತ್ತಿದ್ದ ದಾಖಲೆ‌ ಇಲ್ಲದ 50 ಲಕ್ಷ ನಗದು ಹಣ ಜಪ್ತಿಯಾಗಿದೆ. ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಬರುತ್ತಿದ್ದ ಅಕ್ರಮ ಹಣ ಇದಾಗಿದೆ. ಗದಗ ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

Exit mobile version