ಬೆಂಗಳೂರು: ಮನೆಗೆಲಸಕ್ಕೆ ನೇಮಿಸಿಕೊಳ್ಳಬಹುದು ಎಂದು ಫೇಸ್‌ಬುಕ್ ಮೂಲಕ ಸುಳ್ಳು ವಿವರಗಳನ್ನು ನೀಡಿ, ಕೆಲಸಕ್ಕೆ ಸೇರಿದ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮುಂಬೈಯಿಂದ ಬೆಂಗಳೂರಿಗೆ ಬಂದು ಕಳ್ಳತನ ಮಾಡಿ ಓಡಿ ಹೋಗಿದ್ದ ಆರೋಪಿಯನ್ನು ಎರಡು ತಿಂಗಳು ಹುಡುಕಾಟದ ನಂತರ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ಬಲಕ್ಷ್ಮೀ ಎಂದು ಸುಳ್ಳು ವಿವರಗಳನ್ನು ನೀಡಿ ಅರವಿಂದ್ ಎಂಬವರ ಮನೆಗೆಲಸಕ್ಕೆ ಸೇರಿಕೊಂಡು ಕನ್ನ ಹಾಕಿ ಪರಾರಿಯಾಗಿದ್ದಳು. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.
ಫೇಸ್‌ಬುಕ್ ಮೂಲಕ ಮನೆ ಸೇರಿಕೊಳ್ಳುತ್ತಿದ್ದ ಕಳ್ಳಿಯರು
ಈ ಪ್ರಕರಣವನ್ನು ಭೇದಿಸಿದ ಬಳಿಕ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್ ಮಾಧ್ಯಮಗಳಿಗೆ ಮಾತನಾಡಿ ಪ್ರಕರಣದ ವಿವರ ನೀಡಿದ್ದಾರೆ. ಅರವಿಂದ್ ಅವರ ಮನೆಯಲ್ಲಿ 250 ಗ್ರಾಂ ಚಿನ್ನ ಹಾಗೂ 100 ಗ್ರಾಂ ಬೆಳ್ಳಿಯ ನಾಣ್ಯಗಳು ಕಳುವಾಗಿರುವುದಾಗಿ ದೂರು ನೀಡಿದ್ದರು. ಮನೆಕೆಲಸಕ್ಕೆ ಬಂದ ಮಹಿಳೆಯ ಮೇಲೆ ಸಂದೇಹ ಇರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಣ್ಣೂರು ಪೊಲೀಸರು ತನಿಖೆ ಶುರು ಮಾಡಿದ್ದರು.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಪ್ರಿಯಾಂಕ(29), ಮಹಾದೇವಿ(26), ವನಿತಾ(37) ಎಂಬವರು ಮುಂಬೈ ಮೂಲದವರು. ಇವರು ಮನೆಕೆಲಸದವರಂತೆ ಮನೆಗೆ ಸೇರಿಕೊಳ್ಳುತ್ತಿದ್ದರು. ನಂತರ ಅದೇ ಮನೆಯಿಂದ ಹಣವನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು. ಈವರೆಗೆ ಸುಮಾರು 36 ಕಳ್ಳತನದ ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ. ಈಗ ಈ ಗುಂಪು ಬೆಂಗಳೂರಿಗೆ ಬಂದಿದ್ದು, ಇಲ್ಲಿನ ಮನೆಗಳಲ್ಲಿ ತಮ್ಮ ಕೈಚಳಕವನ್ನು ತೋರಿದ್ದಾರೆ ಎಂದು ಹೇಳಲಾಗಿದೆ.
ಈ ಆರೋಪಿಗಳು ಫೇಸ್‌ಬುಕ್‌ನಲ್ಲಿ ʻರೆಫರ್ ಹೌಸ್ ಮೇಡ್ಸ್ʼ ಎಂಬ ಪಬ್ಲಿಕ್ ಗ್ರೂಪ್‌ನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದರು. ಅಲ್ಲಿ ನಕಲಿ ವಿವರಗಳನ್ನು ನೀಡುವ ಮೂಲಕ ಮನೆ ಕೆಲಸಗಾರರು ಲಭ್ಯವಿದ್ದಾರೆಂದು ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಈ ಆಧಾರದ ಮೇಲೆ ಯಾರಾದರೂ ಇವರನ್ನು ಸಂಪರ್ಕಿಸಿದಾಗ ಇವರು ಹೋಗಿ ಮನೆಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಹೀಗೆ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಇವರು ತಮ್ಮ ಕೈಚಳಕವನ್ನು ತೋರುತ್ತಿದ್ದರು. ಮನೆಯಲ್ಲಿ ಮಾಲೀಕರು ಇಲ್ಲದ ಸಮಯ ನೋಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.
ಇದೇ ರೀತಿ ಇವರು ಅರವಿಂದ್ ಎಂಬವರ ಮನೆಯಲ್ಲೂ ಕಳ್ಳತನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರವಿಂದ್ ಬಿ.ಎನ್ ಅವರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ತನಿಖೆ ಆರಂಭಿಸಿದಾಗ ಪೊಲೀಸರಿಗೆ ಇವರು ಮುಂಬೈನಲ್ಲಿ ತಲೆಮರೆಸಿಕೊಂಡಿರುವುದು ತಿಳಿದುಬಂದಿದೆ. ಎರಡು ತಿಂಗಳ ಕಾಲ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಖತರ್ನಾಕ್ ಕಳ್ಳಿಯರನ್ನು ಹೆಣ್ಣೂರು ಪೊಲೀಸರು ಮುಂಬೈಗೆ ತೆರಳಿ ಬಂಧಿಸಿದ್ದಾರೆ. ಅಲ್ಲದೆ, ಬಂಧಿತರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Supari Killing | ಫೇಸ್‌ಬುಕ್ ಫ್ರೆಂಡ್ ಸುಪಾರಿ ಪಡೆದು ಫೇಸ್‌ಬುಕ್ ಫ್ರೆಂಡನ್ನೆ ಕೊಂದು ವಿಡಿಯೋ ಮಾಡಿದಳು