Site icon Vistara News

ಈಗ ಹಿಂದು; ಮತ್ತೆ ಹುಟ್ಟಿದ ಮೇಲೆ ಆ ಧರ್ಮ ಆಚರಿಸೋಣ: ದೇವನೂರು ಪುಸ್ತಕಕ್ಕೆ ಗೂಳಿಹಟ್ಟಿ ಆಕ್ರೋಶ

devanuru mahadeva gulihatti shekhar

ಬೆಂಗಳೂರು: ಈಗ ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ, ಇದನ್ನು ಆಚರಿಸುತ್ತೇನೆ. ಸತ್ತು ಮತ್ತೆ ಹುಟ್ಟಿದ ನಂತರ ಬೇಕಾದರೆ ಆ ಧರ್ಮ ಆಚರಿಸೋಣ ಎಂದು ಮಾಜಿ ಸಚಿವ ಹಾಗೂ ಶಾಸಕ ಗೂಳಿಹಟ್ಟಿ ಶೇಖರ್‌ ಹೇಳಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿರುವ, ಸಾಹಿತಿ‌ ದೇವನೂರು ಮಹಾದೇವ ಅವರ ʻಆರ್‌ಎಸ್‌ಎಸ್‌ – ಆಳ ಮತ್ತು ಅಗಲʼ ಪುಸ್ತಕದಲ್ಲಿ ತಮ್ಮ ಹಾಗೂ ಕುಟುಂಬದ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಗೂಳಿಹಟ್ಟಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿರುವ ʻಆರ್‌ಎಸ್‌ಎಸ್‌- ಆಳ ಮತ್ತು ಅಗಲʼ ಎಂಬ ಪುಸ್ತಕದಲ್ಲಿ, ಮತಾಂತರ ನಿಷೇಧ ಕಾಯ್ದೆಯ ಮರ್ಮ ಎಂಬ ಶೀರ್ಷಿಕೆಯ ಲೇಖನವಿದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ಮಸೂದೆ 2021 ಅನ್ನು ವಿಮರ್ಶೆಗೆ ಒಳಪಡಿಸಲಾಗಿದೆ.

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಕ್ರೈಸ್ತರಾಗಿ ಮತಾಂತರ ಆಗಿರುವುದನ್ನು ಪುಸ್ತಕದಲ್ಲಿ ಬಣ್ಣಿಸಲಾಗಿದೆ. ʻತಾಯಿ ಏಕೆ ಕ್ರೈಸ್ತರಾದರು ಎಂದು ಯಾರ ಮನಸ್ಸಿಗೂ ಬಂದಿಲ್ಲ. ಮಗನ ಅವಾಂತರಗಳಿಂದ ಬೇಸತ್ತು ನೊಂದು ಸ್ವಾತಂತ್ರ್ಯಕ್ಕಾಗಿ ಹೋಗಿರಬಹುದಲ್ಲವೇ? ಜತೆಗೆ ಧಾರ್ಮಿಕ ಸ್ವಾತಂತ್ರ್ಯ ಹಕ್ಕನ್ನೂ ಪರಿಗಣಿಸಿಲ್ಲʼ ಎಂದು ಪ್ರಸ್ತಾಪ ಮಾಡಲಾಗಿದೆ. ಈ ವಿಚಾರವಾಗಿ ವಿಸ್ತಾರ ನ್ಯೂಸ್ ಜತೆ ಗೂಳಿಹಟ್ಟಿ ಶೇಖರ್‌ ಮಾತನಾಡಿದ್ದಾರೆ.

ಸಾಹಿತಿ ದೇವನೂರು ಮಾಹದೇವ ವಿರುದ್ಧ ಅಸಮಾಧಾನ ಹೊರ ಹಾಕಿರುವ ಶೇಖರ್‌, ನಾನು ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ. ಹಾಗಾಗಿ ಇದು ನನ್ನ ಧರ್ಮ, ನನ್ನ ಹಕ್ಕು. ಬೇಕಾದರೆ, ಸತ್ತು ಮತ್ತೆ ಹುಟ್ಟಿ ಆ ಧರ್ಮ ಆಚರಣೆ ಮಾಡೋಣ. ಸ್ವ ಇಚ್ಛೆಯಿಂದ ಬೇರೆ ಧರ್ಮಕ್ಕೆ ಹೋಗುವವರಿಗೆ ಯಾರೂ ತಡೆದಿಲ್ಲ. ಆದರೆ ಮತಾಂತರ ಆಗುತ್ತಿದ್ದಾರೆ ಎಂದು ಜನರಿಗೆ ಗೊತ್ತೆ ಆಗುವುದಿಲ್ಲ. ಸಾಮಾನ್ಯ ಜನರಿಗೆ ಕಾನೂನಿನ ಅರಿವು ಇಲ್ಲ. ಮತಾಂತರ ಎಂಬುದು ಒಂದು ಪಿಡುಗು. ಆ ಪಿಡುಗಿನೊಳಗೆ ಜನರನ್ನು ಸಿಲುಕಿಸುತ್ತಿದ್ದಾರೆಂಬ ಭಾವನೆಯಲ್ಲಿ ನನ್ನ ತಾಯಿ ಉದಾಹರಣೆ ಕೊಟ್ಟಿದ್ದೇನೆಯೇ ಹೊರತು ಬೇರೆ ಧರ್ಮಗಳಿಗೆ ಅಗೌರವ ತೋರಲಿಲ್ಲ. ಅಲ್ಲದೆ ನನ್ನ‌ ತಾಯಿ ಈಗಲೂ ನಮ್ಮ ಜತೆಯಲ್ಲಿ ಇದ್ದಾರೆ. ನನ್ನ ತಾಯಿ ಬೇರೆಯವರ ಮಾತಿಗೆ ಮರುಳಾಗಿ ಆ ಧರ್ಮ ಸೇರಿದ್ದಾರೆ. ಕಾನೂನಿನ ಅರಿವು ಅವರಿಗಿಲ್ಲ. ಅದನ್ನು ಸದನದಲ್ಲಿ ಪ್ರತಿಪಾದನೆ ಮಾಡುವುದು ನನ್ನ ಹಕ್ಕು. ಸದನದಲ್ಲಿ ಪ್ರತಿಪಾದನೆ ಮಾಡಲೆಂದೆ ಕ್ಷೇತ್ರ ಜನ ನನ್ನ ಆಯ್ಕೆ ಮಾಡಿದ್ದಾರೆ ಎಂದು ದೇವನೂರು ಮಹಾದೇವ ಅವರಿಗೆ ತಿರುಗೇಟು ನೀಡಿದ್ದಾರೆ‌.

ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಬಟ್ಟೆ ಬಿಚ್ಚಿ ಪ್ರದರ್ಶನ ‌ಮಾಡಿದ್ದರು ಎಂದು ಪುಸ್ತಕದಲ್ಲಿ ಹೇಳಿರುವ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಗೂಳಿಹಟ್ಟಿ ಶೇಖರ್‌, ʻರೀ ಸ್ವಾಮಿ ನಾನು ಬಟ್ಟೆ ಬಿಚ್ಚಿಲ್ಲ. ಮಾರ್ಷಲ್‌ಗಳು ಬಟ್ಟೆ ಹರಿದಿದ್ದರು. ಅದನ್ನು ಸದನದಲ್ಲಿ ತೋರಿಸಿದ್ದೇನೆ. ಈ ವಿಷಯವನ್ನು ಈಗಾಗಲೇ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದೇನೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಸಂವಿಧಾನ ಧ್ವಂಸವೇ ಸಂಘದ ಉದ್ದೇಶ: ʻಆರ್‌ಎಸ್‌ಎಸ್‌ ಆಳ ಮತ್ತು ಅಗಲʼ ಕೃತಿಯಲ್ಲಿ ದೇವನೂರು ಮಹಾದೇವ

Exit mobile version