ಬೆಂಗಳೂರು: ಆ್ಯಪ್ ಮೂಲಕ ನೀಡಲಾಗುತ್ತಿರುವ ಓಲಾ ಮತ್ತು ಉಬರ್ (Aggregator app) ಆಟೋರಿಕ್ಷಾ ಸೇವೆ ದರ ಹೆಚ್ಚಳ ಬೇಡಿಕೆಗೆ ಸಂಬಂಧಿಸಿ ಬುಧವಾರ ತನ್ನ ನಿಲುವು ತಿಳಿಸಬೇಕಾಗಿದ್ದ ಸರಕಾರ ಇನ್ನಷ್ಟು ಕಾಲಾವಕಾಶ ಕೋರಿದೆ. ಇದಕ್ಕೆ ಅನುಮತಿ ನೀಡಿದ ಕೋರ್ಟ್ ವಿಚಾರಣೆಯನ್ನು ನವೆಂಬರ್ ೨೧ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ.
ಓಲಾ ಮತ್ತು ಉಬರ್ ಮುಂತಾದ ಅಗ್ರಿಗೇಟರ್ ಸಂಸ್ಥೆಗಳು (Aggregator app) ಸರಕಾರ ನಿಗದಿಪಡಿಸಿದ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರಿ ಆಕ್ಷೇಪಣೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆ್ಯಪ್ ಆಧರಿತ ಸೇವೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.
ರಾಜ್ಯ ಸರಕಾರದ ಈ ಆದೇಶವನ್ನು ವಜಾ ಮಾಡುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್ ಟ್ರಾನ್ಸ್‌ಪೊರ್ಟೇಷನ್ ಸರ್ವೀಸಸ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತ್ತು. ಕಂಪನಿಗಳ ಕೋರಿಕೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೋರ್ಟ್ ಸರಕಾರಕ್ಕೆ ಸೂಚಿಸಿತ್ತು.
ಈ ನಡುವೆ ಸರಕಾರ, ಅಗ್ರಿಗೇಟರ್ ಸಂಸ್ಥೆಗಳು ಹಾಗೂ ರಿಕ್ಷಾ ಚಾಲಕರ ಸಭೆಯನ್ನು ಕರೆದು ಇಬ್ಬರ ಅಭಿಪ್ರಾಯಗಳನ್ನೂ ಸಂಗ್ರಹಿಸಿತ್ತು. ಬಳಿಕ ಈ ವಿಚಾರಗಳನ್ನು ಹೈಕೋರ್ಟ್‌ಗೆ ತಿಳಿಸುವುದಾಗಿ ಸಾರಿಗೆ ಅಧಿಕಾರಿಗಳು ತಿಳಿಸಿದ್ದರು. ಆದರೆ, ಬುಧವಾರ ವಿಚಾರಣೆಯ ಸಂದರ್ಭದಲ್ಲಿ ಯಾವುದೇ ಆಕ್ಷೇಪಣೆ ಸಲ್ಲಿಸದೆ ಹೆಚ್ಚುವರಿ ಕಾಲಾವಕಾಶ ಕೋರಲಾಗಿದೆ.
“ದರ ಹೆಚ್ಚಳ ಕೋರಿ ಓಲಾ ಮತ್ತು ಉಬರ್ ಸಲ್ಲಿಸಿರುವ ಮಧ್ಯಪ್ರವೇಶ ಮನವಿಯಲ್ಲಿ ಕಚೇರಿ ಆಕ್ಷೇಪಣೆಗಳನ್ನು ಅರ್ಜಿದಾರರು ಸರಿಪಡಿಸಬೇಕು. ಸರ್ಕಾರದ ವಕೀಲರು ಸದರಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿಸಲಾಗಿದೆ” ಎಂದಿರುವ ಪೀಠವು ವಿಚಾರಣೆಯನ್ನು ನವೆಂಬರ್ 21ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಹಾಗೂ ಸರ್ಕಾರದ ವಕೀಲರ ವಾದಗಳನ್ನು ಪೀಠವು ಅಲ್ಪಕಾಲ ಆಲಿಸಿತು. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಸರ್ಕಾರದ ಪರ ವಕೀಲರು ಕೋರಿದರು. ಆಗ ಪೀಠವು “ನೀವು ಆಕ್ಷೇಪಣೆ ಸಲ್ಲಿಸಿ, ಅರ್ಜಿದಾರರ ಪರ ವಕೀಲರು ಸೋಮವಾರ ವಾದ ಮಂಡಿಸಲಿ. ಮಂಗಳವಾರ ನೀವು ವಾದ ಮಂಡಿಸಬಹುದು” ಎಂದು ಹೇಳಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ | Aggregator App | ಓಲಾ, ಉಬರ್ ದರ, ಇನ್ನೂ ಆಗದ ನಿರ್ಧಾರ; ನಾಳೆ ಸಭೆ ಬಳಿಕ ಹೈಕೋರ್ಟ್‌ಗೆ ವರದಿ