Site icon Vistara News

Government Hospital | ಸರ್ಕಾರಿ ಆಸ್ಪತ್ರೆಯಲ್ಲಿ ಬೇಡ ಕ್ಯೂ, ಬರಲಿದೆ ಕ್ಯೂಆರ್‌ ಕೋಡ್‌: ಸಚಿವ ಡಾ. ಕೆ. ಸುಧಾಕರ್‌

Government Hospital

ಬೆಂಗಳೂರು: ಜನದಟ್ಟಣೆ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆ‌ (Government Hospital) ಸೇರಿದಂತೆ ಹಲವು ಆಸ್ಪತ್ರೆಗಳು ಹಾಗೂ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್‌ ಹೆಸರು ನೋಂದಣಿ, ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ತರಲು ರಾಜ್ಯ ಸರಕಾರ ಮುಂದಾಗಿದೆ. ಮುಂದೆ ತಾಲೂಕು ಆಸ್ಪತ್ರೆಗಳಲ್ಲೂ ಇದೇ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು.

ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ವಾರ್ಡ್‌ಗೆ ಭೇಟಿ ನೀಡಿದ ಸಚಿವ ಡಾ. ಕೆ. ಸುಧಾಕರ್‌, ರೋಗಿಗಳನ್ನು ಮಾತನಾಡಿಸಿ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ಆಸ್ಪತ್ರೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಒದಗಿಸುವುದಾಗಿ ತಿಳಿಸಿದರು.

ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ಕಡಿಮೆ ಮಾಡಲು, ವೈದ್ಯರ ಭೇಟಿಗೆ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್‌ ಸಂದೇಶ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ತರಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ಜನರ ಉದ್ದದ ಸಾಲು ಕಡಿಮೆ ಮಾಡಲು ಈ ಕ್ರಮ ವಹಿಸಲಾಗುತ್ತಿದೆ. ವೈದ್ಯರ ಸಂದರ್ಶನ ಸಮಯ, ಯಾವ ವೈದ್ಯರು ಎಂಬಿತ್ಯಾದಿ ಮಾಹಿತಿಗಳನ್ನು ಮೊಬೈಲ್‌ಗೆ ಸಂದೇಶ ಕಳುಹಿಸುವ ವ್ಯವಸ್ಥೆ ತರಲಾಗುತ್ತಿದೆ. ಆಸ್ಪತ್ರೆಗೆ ಯಾರೂ ಬಂದು ಕಾಯುವ ಅಗತ್ಯವಿಲ್ಲ. ಹಾಗೆಯೇ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಜನರು ಬರುವ ಮುನ್ನವೇ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಹಾಗೂ ಡಿಜಿಟಲ್‌ ಪಾವತಿ ಮಾಡುವ ವ್ಯವಸ್ಥೆ ತರಲಾಗುವುದು ಎಂದು ಸಚಿವರು ಹೇಳಿದರು.‌

ಇದನ್ನೂ ಓದಿ | Covid Fear | ಕರ್ನಾಟಕ ಸೇರಿದಂತೆ 7 ರಾಜ್ಯಗಳಿಗೆ ಕೇಂದ್ರದಿಂದ ಕೋವಿಡ್‌ ಅಲರ್ಟ್‌!

ಜಯನಗರ ಸರ್ಕಾರಿ ಆಸ್ಪತ್ರೆ ಎನ್‌ಕ್ಯೂಎಸ್‌ ಗುಣಮಟ್ಟವನ್ನು ಹೊಂದುವಂತೆ ಕ್ರಮ ವಹಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಸರ್ಕಾರಿ ಸೇವೆಯ ಗುಣಮಟ್ಟವನ್ನು ಹೆಚ್ಚಿಸಬೇಕಿದೆ. ಈಗ ಪರಿಶೀಲನೆ ನಡೆಸಿದ ಬಳಿಕವೂ ಮತ್ತೊಮ್ಮೆ ಬಂದು ಪರಿಶೀಲನೆ ನಡೆಸಿ ಗುರಿ ತಲುಪಲಾಗಿದೆಯೇ ಎಂದು ಗಮನಿಸಲಾಗುವುದು ಎಂದರು.

51 ಹಾಸಿಗೆಗಳ ಐಸಿಯು ಇಲ್ಲಿದ್ದು, ಕೋವಿಡ್‌ ಬಳಿಕ ಇಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಇದಕ್ಕೆ ಪೂರಕವಾಗಿ ಅಗತ್ಯ ಸಿಬ್ಬಂದಿಯನ್ನು ನೀಡಲಾಗುವುದು. ಕಾಯಂ ಸಿಬ್ಬಂದಿ ನೇಮಕಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ನೀಡಲಾಗುವುದು. ನಾಲ್ಕು ಆರ್ಥೊಪೆಡಿಕ್‌ ತಜ್ಞರು ಈ ಆಸ್ಪತ್ರೆಯಲ್ಲಿದ್ದರೂ 40 ಪ್ರೊಸೀಜರ್‌ ಮಾತ್ರ ನಡೆಯುತ್ತಿದೆ. ಈ ಸಂಖ್ಯೆಯನ್ನು 100ಕ್ಕೆ ಏರಿಸಿಕೊಳ್ಳಬೇಕು. ಹಾಗೆಯೇ ಸಭೆ ನಡೆಸಿ ವಿವಿಧ ವಿಭಾಗಗಳ ನಡುವೆ ಸಮನ್ವಯತೆ ತರಬೇಕು ಎಂದು ಸೂಚಿಸಲಾಗಿದೆ ಎಂದರು.

ಗುಣಮಟ್ಟದ ಚಿಕಿತ್ಸೆ 5 ಕೋಟಿ ರೂ. ಅನುದಾನ

ಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ರೋಗಿಗಳನ್ನು ಮಾತನಾಡಿಸಿದ್ದು, ಒಬ್ಬರೂ ಗುಣಮಟ್ಟದಲ್ಲಿ ಲೋಪ ಆಗಿದೆ ಎಂದು ಹೇಳಿಲ್ಲ. ಐದು ವರ್ಷದಿಂದ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವ ರೋಗಿಯೊಬ್ಬರು, ಯಾವುದೇ ಹಣ ನೀಡದೆ ಚಿಕಿತ್ಸೆ ಪಡೆಯುತ್ತಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಾವಣಿ ಸೇರಿದಂತೆ ಕೆಲವೆಡೆ ದುರಸ್ತಿ ಕಾರ್ಯಗಳು ನಡೆಯಬೇಕಿದೆ. ಸುಮಾರು 5 ಕೋಟಿ ರೂ.ನಷ್ಟು ಅನುದಾನ ಬೇಕಿದ್ದು, ಅದನ್ನು ನೀಡಲಾಗುವುದು ಎಂದರು.

ಪ್ರಸೂತಿ ವಿಭಾಗದಲ್ಲಿ ಕೆಲ ದೂರುಗಳಿದ್ದು, ಅದಕ್ಕಾಗಿ ಸ್ಪಷ್ಟ ಸೂಚನೆ ನೀಡಲಾಗಿದೆ. ಪ್ರತಿ ವಿಭಾಗಗಳ ಮುಖ್ಯಸ್ಥರಿಗೆ ನಿಗದಿತ ಗುರಿ ನೀಡಲಾಗಿದೆ. ಜನರು ಖಾಸಗಿ ಆಸ್ಪತ್ರೆಗೆ ಹೋಗದೆ ಇಲ್ಲಿಯೇ ಬರುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಲಂಚ ಪಡೆದವರ ಅಮಾನತು

ಈ ಹಿಂದೆ ಲಂಚ ಪಡೆದ ಹೊರಗುತ್ತಿಗೆ ವೈದ್ಯರೊಬ್ಬರ ವಿರುದ್ಧ ತನಿಖೆ ನಡೆಯುತ್ತಿದೆ. ಈಗ ತಕ್ಷಣ ಕೆಲಸದಿಂದ ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ. ತನಿಖಾ ವರದಿ ಬರುವ ಮುನ್ನವೇ ಅವರನ್ನು ಕೆಲಸದಿಂದ ತೆಗೆದುಹಾಕಲು ತಿಳಿಸಲಾಗಿದೆ. ರಾಜ್ಯದ ಬೇರೆ ಬೇರೆ ಆಸ್ಪತ್ರೆಗಳಿಗೂ ಭೇಟಿ ನೀಡಲಾಗುವುದು. ನಮ್ಮ ಸರ್ಕಾರ ಮಾತೃ ಹೃದಯ ಹೊಂದಿದ್ದು, ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.

ಹಣ ವಾಪಸ್‌ ಕೊಡಿಸುವವರೆಗೂ ಬಿಡುವುದಿಲ್ಲ

ಕೋವಿಡ್‌ ರೋಗಿಗಳಿಂದ ಹಣ ಪಡೆದು ಬಳಿಕ ಸರ್ಕಾರದಿಂದ ಹಣ ಪಡೆದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ನೀಡಿ, ಹಣವನ್ನು ರೋಗಿಗಳಿಗೆ ಹಿಂದಿರುಗಿಸಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರ ಈ ರೀತಿಯ ಕ್ರಮ ವಹಿಸಿ, 1.58 ಕೋಟಿ ರೂ. ಹಣವನ್ನು ರೋಗಿಗಳ ಕುಟುಂಬಕ್ಕೆ ವಾಪಸ್‌ ಮಾಡಲಾಗಿದೆ. ಇನ್ನು ಉಳಿದ ಮೊತ್ತವನ್ನು ಕೂಡ ವಾಪಸ್‌ ಕೊಡಿಸಲಾಗುವುದು. ಮೊತ್ತವನ್ನು ವಾಪಸ್‌ ಕೊಡಿಸುವವರೆಗೂ ಸರ್ಕಾರ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌ ಹಾಜರಿದ್ದರು.

ಇದನ್ನೂ ಓದಿ | Covid-19 News | ಒಂದೇ ದಿನ ಆರು ಮಂದಿ ಸಾವು; ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ ಸಚಿವ ಸುಧಾಕರ್‌

Exit mobile version