ರಾಮನಗರ: ʻಸರ್ಕಾರಿ ಕೆಲಸ ದೇವರ ಕೆಲಸʼ ಎಂಬ ಮಾತು ಕೇವಲ ಕಚೇರಿಯ ಗೋಡೆ ಮೇಲಿರುವ ಬೋರ್ಡ್‌ಗಷ್ಟೇ ಸೀಮಿತವಾಗಿ ಎಷ್ಟೋ ಸಮಯ ಕಳೆದಿದೆ. ಸರ್ಕಾರಿ ಕಚೇರಿಯಲ್ಲಿದ್ದ ಲಂಚ ಕೇಳುವ ಬೇಡಿಕೆ ಈಗ ಸರ್ಕಾರಿ ಆಸ್ಪತ್ರೆಯಲ್ಲೂ (Government Hospital) ಕೇಳಿ ಬರುತ್ತಿದೆ. ಈಗ ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು 10 ಸಾವಿರ ರೂ. ಲಂಚಕ್ಕೆ ಸ್ತ್ರೀರೋಗ ತಜ್ಞೆ ಬೇಡಿಕೆ ಇಟ್ಟಿದ್ದಾರೆ. ಬಿಡದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಪ್ರಕರಣ ನಡೆದಿದ್ದು, ಸ್ತ್ರೀರೋಗ ತಜ್ಞೆ ಶಶಿಕಲಾ ಹಾಗೂ ಡಾ.ಐಶ್ವರ್ಯ ಎಂಬುವವರು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಈಗ ಅಮಾನತು ಮಾಡಲಾಗಿದೆ.
ಲಂಚ ಕೇಳುವ ವಿಡಿಯೊ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಿಡದಿ ನಿವಾಸಿ ಮಂಜುನಾಥ್ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಂಜುನಾಥ್ ಅವರು ತಮ್ಮ ಪತ್ನಿಯನ್ನು ಹೆರಿಗೆಗಾಗಿ ಬಿಡದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಲಾಗಿತ್ತು.
ಶುಕ್ರವಾರ ಡಿಸ್ಚಾರ್ಜ್ ಮಾಡುವ ವೇಳೆ 10 ಸಾವಿರ ಹಣ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಮಂಜುನಾಥ್ ನಾನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವುದು, ನನ್ನ ಬಳಿ ಕೇವಲ 2 ಸಾವಿರ ರೂ.ಮಾತ್ರ ಇದೆ ಮೇಡಂ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಆಸ್ಪತ್ರೆ ಸಿಬ್ಬಂದಿ ʻಚಾನ್ಸೇ ಇಲ್ಲ, ಎರಡು ಸಾವಿರ ತೆಗೆದುಕೊಳ್ಳಲು ಆಗಲ್ಲ ಆಸ್ಪತ್ರೆ ಬೇರೆ ಸಿಬ್ಬಂದಿಗೂ ಕೊಡಬೇಕು ಎಂದು ವೈದ್ಯೆ ಶಶಿಕಲಾ ಹೇಳಿದ್ದಾರೆ.
ಈ ವೇಳೆ ಆಸ್ಪತ್ರೆಯ ಮತ್ತೊಬ್ಬ ಸಿಬ್ಬಂದಿಯೂ ಜತೆಯಾಗಿ, ಒಬ್ಬರಿಗೊಂದು ರೀತಿ ಭೇದಭಾವ ಮಾಡಲು ಆಗುವುದಿಲ್ಲ. ನಿಮ್ಮಂತೆ ವಾರ್ಡ್‌ನಲ್ಲಿರುವ ಎಲ್ಲರೂ ಹಾಗೇ ಕೇಳುತ್ತಾರೆ ಎಂದಿದ್ದಾರೆ. ಈ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
ಇಬ್ಬರು ವೈದ್ಯೆಯರು ಅಮಾನತು
ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಪ್ರಸೂತಿ ತಜ್ಞೆ ಶಶಿಕಲಾ ಹಾಗೂ ಡಾ. ಐಶ್ವರ್ಯ ಅವರನ್ನು ಅಮಾನತು ಮಾಡಿ ರಾಮನಗರ ಡಿಎಚ್ಒ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ನೋಟಿಸ್ ನೀಡಲಾಗಿತ್ತು. ಲಂಚ ಪಡೆಯುತ್ತಿರುವ ಬಗ್ಗೆ ವಿಡಿಯೊದಲ್ಲಿ ಸ್ಪಷ್ಟವಾಗಿದೆ. ಹಾಗಾಗಿ ಇಬ್ಬರನ್ನೂ ಅಮಾನತು ಮಾಡಿದ್ದೇವೆ. ಈ ಬಗ್ಗೆ ಸಂಪೂರ್ಣ ವರದಿ ಸಂಗ್ರಹಿಸಿ ಕ್ರಮ ಕೈಗೊಳ್ಳುತ್ತೇವೆ ಎಂದ ಡಿಎಚ್ಒ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Murugha seer case | ಕಾಮಕಾಂಡ ಬಯಲಿಗೆಳೆದ ಒಡನಾಡಿ ಬಾಯಿ ಮುಚ್ಚಿಸಲು 3 ಕೋಟಿ ರೂ. ಆಫರ್, ಮಂತ್ರಿಯ ಮಧ್ಯಸ್ಥಿಕೆ?