ರಾಜ್ಯ ಸರ್ಕಾರ ಜನರ ಅಳಲುಗಳನ್ನು ಆಲಿಸುವುದಕ್ಕಾಗಿ ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸ್ವತಃ ಮುಖ್ಯಮಂತ್ರಿಗಳು, ಪ್ರಮುಖ ಸಚಿವರು ಇದನ್ನು ನಡೆಸಿ ಜನರ ಅಹವಾಲುಗಳನ್ನು ಆಲಿಸುತ್ತಾರೆ. ಇಂಥ ಸಭೆಯಲ್ಲಿ ಅಧಿಕಾರಿಗಳು ಏನು ಮಾಡಬೇಕು? ಅವರಿಗೂ ಮಹತ್ವದ ಜವಾಬ್ದಾರಿಗಳಿವೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳು ಆಯಾ ಜಿಲ್ಲೆಯ ಜನ ಎದುರಿಸುವ ಮುಖ್ಯ ಸಮಸ್ಯೆಗಳ ಪರಿಹಾರದಲ್ಲಿ ಮಹತ್ವದ ಪಾತ್ರ ವಹಿಸಬೇಕು. ಆದರೆ ಜನರ ದೂರನ್ನು ಆಲಿಸಲು ಸಿದ್ಧವಿಲ್ಲದಿದ್ದರೆ ಏನು ಮಾಡಬೇಕು? ರಾಮನಗರದಲ್ಲಿ ಹೀಗೆ ಆಗಿದೆ. ಜನಸ್ಪಂದನ ಸಭೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ವೇದಿಕೆಯಲ್ಲಿ ಆರಾಮಾಗಿ ಕಾಲು ಮೇಲೆ ಕಾಲು ಹಾಕಿ ಕುಳಿತು ಮೊಬೈಲ್ ಗೇಮ್ ಆಡುತ್ತಾ ಕುಳಿತು ದೌಲತ್ತು ಮೆರೆದಿದ್ದಾರೆ. ರಾಮನಗರ ತಾಲೂಕಿನ ಮಾಗಡಿಯಲ್ಲಿ ಶುಕ್ರವಾರ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಅವರ ಈ ವರ್ತನೆ ಈಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ(Vistara Editorial).
ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಜನರು ಸಂಕಷ್ಟದಲ್ಲಿದ್ದಾರೆ. 236 ತಾಲೂಕುಗಳಲ್ಲಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜನಸ್ಪಂದನ ನಡೆಸುತ್ತಿದೆ. ಅಧಿಕಾರಿಗಳು ನೇರವಾಗಿ ಜನರ ಬಳಿಗೆ ಹೋಗುವ ಮೊದಲ ಜನಸ್ಪಂದನಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂದರೆ ಜನರ ಬಳಿ ಸಮಸ್ಯೆಗಳು ಅಷ್ಟು ಇವೆ ಎಂದೇ ಅರ್ಥವಾಗುತ್ತದೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮಾಗಡಿ ಶಾಸಕರು, ಜಿಲ್ಲಾಧಿಕಾರಿ ಎಲ್ಲರೂ ಇರುವಾಗಲೇ ಸಿಇಒ ದಿಗ್ವಿಜಯ್ ಬೋಡ್ಕೆ ಕಾಲು ಮೇಲೆ ಕಾಲು ಹಾಕಿಕೊಂಡು ತಮ್ಮ ಮೊಬೈಲ್‌ನಲ್ಲಿ ಕ್ಯಾಂಡಿ ಕ್ರಶ್ ಆಟವಾಡುತ್ತಾ ಕುಳಿತಿದ್ದುದು ಉಡಾಫೆಯ ಪರಮಾವಧಿ. ಜನರ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು ಮೊಬೈಲ್‌ನಲ್ಲಿ ಮುಳುಗುವುದು ಎಷ್ಟು ಸರಿ? ಅಧಿಕಾರಿಗಳು ಇರುವುದು ಜನ ಸೇವೆ ಮಾಡಲೋ? ಅಥವಾ ಉಡಾಫೆಯಿಂದ ನಡೆದುಕೊಳ್ಳಲೋ ಎಂಬುದು ಜನರ ಪ್ರಶ್ನೆ. ಆ ಅಧಿಕಾರಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು, ಇಂತಹ ಪ್ರಕರಣ ಮರುಕಳಿಸದಂತೆ ನೀತಿ ರೂಪಿಸಬೇಕು ಎಂದು ರಾಜಕೀಯ ನಾಯಕರೂ ಆಗ್ರಹಿಸಿದ್ದಾರೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಂತರ್ಜಲ ಕೊರತೆ, ಜಲಾಂದೋಲನಕ್ಕೆ ಜನ ಕೈಜೋಡಿಸಬೇಕಿದೆ
ಅಧಿಕಾರಿಯ ವರ್ತನೆಯಲ್ಲಿ ಉಡಾಫೆಯಷ್ಟೇ ಅಲ್ಲ, ಕರ್ತವ್ಯಲೋಪವೂ ಇದೆ. ಜನಸ್ಪಂದನ ಸಭೆ ಕರೆದಿರುವುದೇ ಅಧಿಕಾರಿಗಳು ಜನರ ಅಹವಾಲುಗಳನ್ನು ಆಲಿಸಲೆಂದು. ಸಂತ್ರಸ್ತ ಜನತೆಗೆ ಸರ್ಕಾರಿ ಕಚೇರಿಯಲ್ಲಿ ಕೆಲಸಗಳು ಸೂಕ್ತವಾಗಿ ಆಗುತ್ತಿಲ್ಲ ಎಂಬುದನ್ನು ಕಂಡುಕೊಂಡ ಬಳಿಕವೇ ಜನಸ್ಪಂದನ ರೂಪಿಸಲಾಗಿದೆ. ಇಲ್ಲಿ ಜನರನ್ನು ಆಲಿಸುವುದು ಅಧಿಕಾರಿಗಳಿಗೆ ಕಡ್ಡಾಯ. ಇಂಥ ಹೊತ್ತಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕ್ಯಾಂಡಿ ಕ್ರಶ್ ಆಡುತ್ತ ಕೂರುವುದೆಂದರೆ, ಸರ್ಕಾರಿ ಸಂಬಳ ಪಡೆದು ಜನತೆಯ ಕೆಲಸ ಮಾಡಬೇಕಾದ ಹೊತ್ತಿನಲ್ಲಿ ಸ್ವಂತ ಮಜಾ ಉಡಾಯಿಸಿದಂತೆ. ಇವರು ಪಡೆಯುತ್ತಿರುವ ಸಂಬಳ ನಮ್ಮನಿಮ್ಮಂಥ ಸಾರ್ವಜನಿಕರು ಕಟ್ಟುವ ತೆರಿಗೆ ಹಣ. ನಾವು ಸಂಬಳ ಕೊಡುವುದು ನಮ್ಮ ಕೆಲಸ ಮಾಡಲಿ ಎಂದು ಹೊರತು ಕರ್ತವ್ಯದ ಹೊತ್ತಿನಲ್ಲಿ ಕ್ಯಾಂಡಿ ಕ್ರಶ್ ಆಡಲಿ ಎಂದಲ್ಲ. ಇಂಥವರು ಕರ್ತವ್ಯದಲ್ಲಿರುವುದಕ್ಕೇ ಇರ್ಹರಲ್ಲ. ಇವರಿಗೆ ಜನತೆಯ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ, ಕಾರ್ಯಾಂಗದ ಕಾಯಿದೆಗಳ ಬಗ್ಗೆ, ಸಂವಿಧಾನದ ಬಗ್ಗೆ ಇನ್ನೆಷ್ಟು ಗೌರವ ಇರಬಹುದು? ಜನಸ್ಪಂದನದಲ್ಲಿ, ಎಲ್ಲರ ಸಮ್ಮಖದಲ್ಲಿ ಜನರ ಬಗ್ಗೆ ಇಷ್ಟೊಂದು ಉಡಾಫೆ ಹೊಂದಿರುವ ವ್ಯಕ್ತಿ, ಕಚೇರಿಗೆ ಹೋದ ಬಡಪಾಯಿಗಳನ್ನು ಹೇಗೆ ನಡೆಸಿಕೊಳ್ಳಬಹುದು? ಕೊಂಚವಾದರೂ ಕೆಲಸ, ಜನೋಪಕಾರ ಇವರಿಂದ ಆದೀತೇ?
ಇವರು ಕೆಲಸದಿಂದ ಬಿಡುಗಡೆ ಪಡೆದು ಮನೆಯಲ್ಲಿ ಆರಾಮವಾಗಿ ಕ್ಯಾಂಡಿ ಕ್ರಶ್ ಆಡುತ್ತ ಇರುವುದೇ ಹೆಚ್ಚು ಸೂಕ್ತವಾದುದು. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಿ. ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಈ ಮಂತ್ರಿಗಳಿಗೆ, ಸರ್ಕಾರಕ್ಕೆ ಯಾವ ಅಧಿಕಾರಿಯೂ ಹೆದರುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮುಂದೆ ಯಾವ ಅಧಿಕಾರಿಯೂ ಈ ರೀತಿ ಮಾಡಲು ಮುಂದಾಗಬಾರದು. ಜನರಿಗೆ ಸ್ಪಂದಿಸದ ಬೇಜವಾಬ್ದಾರಿ ಅಧಿಕಾರಿಗಳು ಯಾಕಾದರೂ ಆ ಪದವಿಯಲ್ಲಿರಬೇಕು? ಇನ್ನು ಮುಂದೆ ಅಧಿಕಾರಿಗಳು ತಮ್ಮ ಕಚೇರಿ ಅವಧಿಯಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗದೇ, ಜನರ ಪರವಾಗಿ ಕಾರ್ಯನಿರ್ವಹಣೆ ಮಾಡುವಂತೆ ಸಮರ್ಪಕ ನೀತಿ– ನಿರೂಪಣೆಯನ್ನು ಜಾರಿಗೆ ತರಬೇಕು.