Site icon Vistara News

ವಿಸ್ತಾರ ಸಂಪಾದಕೀಯ: ಅತಿಥಿ ಉಪನ್ಯಾಸಕರ ಅಳಲು ಆಲಿಸಿ

Guest Lecturers

Government Should Solve The Problems Of Guest Lecturers In Karnataka

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆ ಸೇವಾ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಆದರೆ ಗರಿಷ್ಠ 5,000 ರೂ. ವೇತನ ಹೆಚ್ಚಿಸಲು ಸರ್ಕಾರ ಸಮ್ಮತಿ ಸೂಚಿಸಿದೆ. ವಿಕಾಸಸೌಧದಲ್ಲಿ ಅತಿಥಿ ಉಪನ್ಯಾಸಕರ ನಿಯೋಗದ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್, ಅತಿಥಿ ಉಪನ್ಯಾಸಕರಿಗೆ ಗರಿಷ್ಠ 5 ಸಾವಿರ ರೂ. ಹೆಚ್ಚಳ ಮಾಡಲು ಸಿಎಂ ಸಮ್ಮತಿ ಸೂಚಿಸಿದ್ದಾರೆ. ಅವರ ಸೇವಾವಧಿ ಆಧಾರದ ಮೇಲೆ ವೇತನ ಪರಿಷ್ಕರಣೆಯಾಗಲಿದೆ. ಅದರಂತೆ ಗರಿಷ್ಠ 32,000 ರೂ. ವೇತನ ಪಡೆಯುವ ಅತಿಥಿ ಉಪನ್ಯಾಸಕರಿಗೆ 5,000 ರೂ.ನಷ್ಟು ವೇತನ ಹೆಚ್ಚಾಗಲಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ 55 ಕೋಟಿ ರೂ. ಹೊರೆ ಆಗಲಿದೆ ಎಂದಿದ್ದಾರೆ. ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲು ನಿರ್ಧರಿಸಲಾಗಿದ್ದು, ವಾರ್ಷಿಕ ಐದು ಲಕ್ಷ ರೂ. ಆರೋಗ್ಯ ವಿಮೆ ನೀಡಲು ಸಮ್ಮತಿಸಲಾಗಿದೆ. ಆದರೆ ಇದ್ಯಾವುದೂ ಸೇವಾಭದ್ರತೆ ನೀಡುವ ಅನುಕೂಲವನ್ನು ನೀಡಲಾರದು.

ಮುಷ್ಕರ ಆರಂಭವಾಗಿ ತಿಂಗಳು ಕಳೆದಿದ್ದರೂ ಉಪನ್ಯಾಸಕರೊಂದಿಗೆ ತಾರ್ಕಿಕ ಒಪ್ಪಂದಕ್ಕೆ
ಬರುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ. ರಾಜ್ಯದಲ್ಲಿರುವ  430 ಸರ್ಕಾರಿ ಪದವಿ ಕಾಲೇಜುಗಳು ಸುಮಾರು ಹತ್ತು ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಸೇವಾ ಭದ್ರತೆ ದೊರೆಯುವುದೆಂದು ನಂಬಿ 15- 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರ ವೃತ್ತಿಬದುಕೇ ಬಹಳಷ್ಡು ಕಳೆದುಹೋಗಿದೆ. ಇವರ ಬದುಕು ಅತಂತ್ರವಾಗಿದೆ.

ರಾಜ್ಯದ ಕಾಲೇಜುಗಳು ಬಹುಮಟ್ಟಿಗೆ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದ್ದು, ಅವರಲ್ಲಿ ಬಹುತೇಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ತೊಡಗಿರುವುದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರೀಕ್ಷೆಗಳು ಸನ್ನಿಹಿತವಾಗಿರುವ ಸಂದರ್ಭದಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯದೆ ವಿದ್ಯಾರ್ಥಿಗಳು ಒತ್ತಡ ಅನುಭವಿಸಬೇಕಾಗಿದೆ. ತರಗತಿಗಳು ನಡೆಯದಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಇದನ್ನೂ ಓದಿ: Shivamogga News: ನೌಕರಿ ಕಾಯಂಗೊಳಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ದೀರ್ಘ ಕಾಲದಿಂದ ಅತಿಥಿ ಉಪನ್ಯಾಸಕರ ಬೇಡಿಕೆಗಳು ನನೆಗುದಿಗೆ ಬಿದ್ದಿವೆ. ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸುವ ದಿಸೆಯಲ್ಲಿ ಸರ್ಕಾರದ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ಆಗಿಲ್ಲ. ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಾಯಂ ಬೋಧಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ. ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ಮುಂದಾಗಿಲ್ಲ. ಅತಿಥಿ ಉಪನ್ಯಾಸಕರ ನೆರವಿನಿಂದಲೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರೈಸಬೇಕಾದ ಸ್ಥಿತಿಯಿದೆ. ಹೊಸ ಹೊಸ ಕಾಲೇಜು ಮತ್ತು ಜಿಲ್ಲೆಗೊಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ತೋರಿಸುವ ಉತ್ಸಾಹವನ್ನು ಉಪನ್ಯಾಸಕರ ನೇಮಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ತೋರಿಲ್ಲ.ಇದರಿಂದಾಗಿ ಉನ್ನತ ಶಿಕ್ಷಣದ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಸರ್ಕಾರ ಇನ್ನಾದರೂ ದೃಢ ನಿರ್ಧಾರ ಪ್ರದರ್ಶಿಸಬೇಕಿದೆ. ಸೇವಾಭದ್ರತೆಯಿಲ್ಲದ
ಸ್ಥಿತಿಯಲ್ಲಿರುವ ಉಪನ್ಯಾಸಕರ ಸ್ಥಿತಿಗತಿಯ ಪರಿಣಾಮ   ವಿದ್ಯಾರ್ಥಿಗಳ ಮೇಲೂ ಆಗುತ್ತದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version