ಬೆಂಗಳೂರು: ಇಸ್ರೋ ಮಾಜಿ ನಿರ್ದೇಶಕ ಶಿವನ್, ಹಿರಿಯ ಸಾಹಿತಿ ಅ.ರಾ.ಮಿತ್ರ, ಪ್ರೊ.ಕೃಷ್ಣೇಗೌಡ, ಇಂಗ್ಲಿಷ್ ಕಡಲ್ಗಾಲುವೆ ಈಜಿದ ವಿಕಲಚೇತನ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್, ಸೇರಿ ಒಟ್ಟು 67 ಸಾಧಕರಿಗೆ ರಾಜ್ಯ ಸರ್ಕಾರವು 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೊಷಣೆ ಮಾಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನೂ ಘೋಷಣೆ ಮಾಡಲಾಗಿದೆ.
ಇಸ್ರೋ ಮಾಜಿ ನಿರ್ದೇಶಕ ಶಿವನ್, ಹಿರಿಯ ಸಾಹಿತಿ ಅ.ರಾ.ಮಿತ್ರ, ಪ್ರೊ.ಕೃಷ್ಣೇಗೌಡ, ಇಂಗ್ಲೀಷ್ ಕಡಲ್ಗಾಲುವೆ ಈಜಿದ ವಿಕಲಚೇತನ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ಸೋಲಿಗ ಸಮುದಾಯದಲ್ಲಿ ಸಹಕಾರದ ಬೆಳಕು ಚೆಲ್ಲಿದ ಸೋಲಿಗರ ಮಾದಮ್ಮ, ವನಸಂರಕ್ಷಣೆಗಾಗಿ ಜೀವನವನ್ನೇ ಮುಡುಪಾಗಿಟ್ಟ ರಾಮನಗರದ ಸಾಲುಮರದ ನಿಂಗಣ್ಣ, ಹಿರಿಯ ಚಲನಚಿತ್ರನಟರಾದ ದತ್ತಣ್ಣ, ಅವಿನಾಶ್, ಪೌರ ಸೇನಾನಿ ಶ್ರೀಮತಿ ಮಲ್ಲಮ್ಮ, ಉಡುಪಿ ಜಿಲ್ಲೆಯ ದೈವನರ್ತಕ ಗುಡ್ಡ ಪಾಣಾರ, ಕಿರುತೆರೆ ನಟ ಸಿಹಿಕಹಿ ಚಂದ್ರು, ಯಕ್ಷಗಾನ ಕಲಾವಿದರಾದ ಡಾ. ಎಂ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ವೀರಗಾಸೆ ಕಲಾವಿದ ಹಾವೇರಿಯ ಮಹೇಶ್ವರ ಗೌಡ ಲಿಂಗದಹಳ್ಳಿ, ಕಮಲಮ್ಮ ಸೂಲಗಿತ್ತಿ, ಹಿರಿಯ ಸಂಗೀತ ವಿದ್ವಾಂಸ ಅನಂತಾಚಾರ್ಯ ಬಾಳಾಚಾರ್ಯ, ಹಿರಿಯ ಪತ್ರಕರ್ತರಾದ ಎಚ್.ಆರ್. ಶ್ರೀಶ, ಜಿ.ಎಂ.ಶಿರಹಟ್ಟಿ, ಹಿರಿಯ ಸಂಶೋಧಕ ಡಾ.ಎಂ.ಜಿ.ನಾಗರಾಜ್ ಸೇರಿದಂತೆ ೬೭ ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಲಹಾ ಸಮಿತಿ ನೀಡಿದ್ದ 1:2 ಅನುಪಾತದ ಪಟ್ಟಿಯಲ್ಲಿ 67 ಸಾಧಕರನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಆಯ್ಕೆ ಸಮಿತಿ ಘೋಷಣೆ ಮಾಡಿದೆ. ಪ್ರಶಸ್ತಿಯು ತಲಾ 5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಚಿನ್ನದ ನಾಣ್ಯವನ್ನು ಒಳಗೊಂಡಿರಲಿದೆ. ನವೆಂಬರ್ 1ರಂದು ರಾಜ್ಯೋತ್ಸವ ದಿನದ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಅಮೃತ ಮಹೋತ್ಸವ ಪ್ರಶಸ್ತಿ
ಮೈಸೂರಿನ ರಾಮಕೃಷ್ಣ ಆಶ್ರಮ, ಗದಗದ ಲಿಂಗಾಯುತ ಪ್ರಗತಿಶೀಲ ಸಂಸ್ಥೆ, ಹಾವೇರಿಯ ಅಗಡಿ ತೋಟ, ಬಾಗಲಕೋಟೆಯ ತಲಸೇಮಿಯಾ ಮತ್ತು ಹಿಮೋಫೀಲಿಯಾ ಸೊಸೈಟಿ, ಬೆಂಗಳೂರಿನ ಅಮೃತ ಶಿಶು ನಿವಾಸ, ಬೆಂಗಳೂರಿನ ಸುಮನಾ ಫೌಂಡೇಷನ್, ದಕ್ಷಿಣ ಕನ್ನಡದ ಯುವ ವಾಹಿನಿ ಸಂಸ್ಥೆ, ಬೆಂಗಳೂರಿನ ನೆಲೆ ಫೌಂಡೇಷನ್, ಬೆಂಗಳೂರಿನ ನಮ್ಮನೆ ಸುಮ್ಮನೆ-ನಿರಾಶ್ರಿತರ ಆಶ್ರಮ (ಮಂಗಳಮುಖಿಯರ ಸಂಸ್ಥೆ), ಮಂಡ್ಯದ ಶ್ರೀ ಉಮಾ ಮಹೇಶ್ವರಿ ಹಿಂದುಳಿದ ವರ್ಗ ಅಭಿವೃದ್ಧಿ ಟ್ರಸ್ಟ್‌ಗಳಿಗೆ ಅಮೃತ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಜನಸಾಮಾನ್ಯಗೆ ಸಮ್ಮಾನ
ತೆರೆಮರೆಯಲ್ಲಿ ಸಾಧನೆ ಮಾಡಿದ ಜನಸಾಮಾನ್ಯರನ್ನು ಗುರುತಿಸುವಲ್ಲಿ ರಾಜ್ಯೋತ್ಸವ ಸಮಿತಿ ವಿಶೇಷ ಗಮನ ನೀಡಿದೆ. ಚಾಮರಾಜನಗರದ ಸೋಲಿಗರ ಮಾದಮ್ಮ, ಪೌರ ಸೇನಾನಿ ಶ್ರೀಮತಿ ಮಲ್ಲಮ್ಮ, ಉಡುಪಿಯ ದೈವನರ್ತಕ, ಗುಡ್ಡ ಪಾಣಾರ, ಪರಿಸರ ಸಂರಕ್ಷಕ ಸಾಲುಮರದ ನಿಂಗಣ್ಣ, ಗೊಲ್ಲ ಸಮುದಾಯದ ಡಾ.ಕರಿಯಪ್ಪ, ಮುಖವೀಣೆ ಕಲಾವಿದ ಅಂಜನಪ್ಪ ಸತ್ಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಅಸಾಮಾನ್ಯ ಸಾಧಕರು
ಸಾಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸುವಲ್ಲೂ ಸಮಿತಿ ವಿಶೇಷ ಆಸಕ್ತಿ ನೀಡಿದೆ. ಈ ಪಟ್ಟಿಯಲ್ಲಿ ಇಸ್ರೋ ಮಾಜಿ ನಿರ್ದೇಶಕ ಶಿವಂ, ಸಾಹಿತಿ ಪ್ರೊ.ಕೃಷ್ಣೇಗೌಡ, ಅ.ರಾ.ಮಿತ್ರ, ವಿಭಿನ್ನ ಪಾತ್ರಗಳ ಮೂಲಕ ಚಲನಚಿತ್ರ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ದತ್ತಣ್ಣ, ಅವಿನಾಶ, ಕಿರುತೆರೆ ದಿಗ್ಗಜ ಸಿಹಿಕಹಿ ಚಂದ್ರು, ಇಂಗ್ಲೀಷ್ ಕಡಲ್ಗಾಲುವೆ ಈಜಿದ ಪ್ಯಾರಾ ಒಲಂಪಿಕ್ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್, ದಲಿತ ಯುವಕರನ್ನು ಉದ್ಯಮಿಯಾಗಿ ರೂಪಿಸುವಲ್ಲಿ ಅವಿರತ ಶ್ರಮಿಸಿದ ಕೋಲಾರದ ಉದ್ಯಮಿ ಜೆ,ಶ್ರೀನಿವಾಸನ್, ಶಿಕ್ಷಣ ತಜ್ಞ ಸುಬ್ಬರಾವ್ ಶೆಟ್ಟಿ ಅವರನ್ನು ಪ್ರಶಸ್ತಿ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್, ಈ ವರ್ಷದ ರಾಜ್ಯೋತ್ಸವ ಪಟ್ಟಿ ಅತ್ಯಂತ ಸಮತೋಲಿತವಾಗಿದ್ದು, ಎಲೆಮರೆಯ ಸಾಧಕರನ್ನು ಗುರುತಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ಅಳೆದು-ತೂಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಅಸಾಮಾನ್ಯ ಸಾಧನೆ ಮಾಡಿದ ಶ್ರೀಸಾಮಾನ್ಯರು, ಅರ್ಹ ಸಾಧಕರನ್ನು ಗುರುತಿಸಿದ್ದೇವೆ. ಒಂದರ್ಥದಲ್ಲಿ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ ಮಾದರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದಿದ್ದಾರೆ.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಸಾಧಕರ ಆಯ್ಕೆಗೆ ಸಲಹಾ ಸಮಿತಿ ರಚನೆ