ಬೆಂಗಳೂರು: ಕಳೆದ ಅನೇಕ ವರ್ಷಗಳಿಂದ ಕಡಿಮೆಯಾಗಿದ್ದ ಆ್ಯಸಿಡ್ ದಾಳಿ ಪ್ರಕರಣಗಳು ಒಂದೊಂದಾಗಿ ಮತ್ತೆ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಕಾಮಾಕ್ಷಿಪಾಳ್ಯದಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನೆನಪು ಮಾಸವ ಮುನ್ನವೇ ಜಯನಗರದಲ್ಲಿ ಯುವತಿಯ ಮೇಲೆ ಪಾಗಲ್ ಪ್ರೇಮಿಯೊಬ್ಬ ಆ್ಯಸಿಡ್ ದಾಳಿ ನಡೆಸಿದ್ದಾನೆ. ಇದೆಲ್ಲಕ್ಕೂ ಇತಿಶ್ರೀ ಹಾಡಲು ಸರ್ಕಾರ ಹೊಸ ಹಾಗೂ ಕಠಿಣ ಕಾನೂನು ರೂಪಿಸಲು ಸಿದ್ಧತೆ ಆರಂಭಿಸಿದೆ.
ಕಾಮಾಕ್ಷಿಪಾಳ್ಯ ಘಟನೆ
ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯದಲ್ಲಿ ಯುವತಿಯ ಮೇಲೆ ಆ್ಯಸಿಡ್ ಎರಚಿ ನಾಗೇಶ್ ಪರಾರಿಯಾಗಿದ್ದ. ಆ ಗಾಯಗಳನ್ನೆ ತೋರಿಸಿ ನ್ಯಾಯಾಲಯದ ಬಳಿ ವಕೀಲರನ್ನು ಭೇಟಿಯಾಗಿದ್ದ. ಯಾರೂ ಕೇಸ್ ತೆಗೆದುಕೊಳ್ಳದೇ ನಿರಾಕರಿಸಿದ್ದರಿಂದ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳುವ ಜತೆಗೆ ಮಾಡಿದ ಪಾಪವನ್ನು ತೊಳೆದುಕೊಳ್ಳಲು ತಮಿಳುನಾಡಿನ ತಿರುವಣ್ಣಾಮಲೈಯಲ್ಲಿರುವ ರಮಣಶ್ರೀ ಆಶ್ರಮದಲ್ಲಿ ಸನ್ಯಾಸಿಯಂತೆ ನಟಿಸುತ್ತಿದ್ದ ನಾಗೇಶನನ್ನು ಪೊಲೀಸರು 16 ದಿನಗಳ ನಂತರ ಬಂಧಿಸಿದ್ದರು. ಇತ್ತ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದರೂ ಅನೇಕ ಶಸ್ತ್ರಚಿಕಿತ್ಸೆಗೆ ಒಳಗಾಗುವ ಹಿಂಸೆ ಅನುಭವಿಸುತ್ತಿದ್ದಾಳೆ.
ಸ್ನೇಹಿತನ ಮೇಲೆ ದಾಳಿ
ಕಬ್ಬನ್ ಪೇಟೆ ವ್ಯಾಪ್ತಿಯಲ್ಲಿ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿ ಒಬ್ಬ ಮತ್ತೊಬ್ಬನ ಮೇಲೆ ಆ್ಯಸಿಡ್ ಎರಚಿದ್ದ. ಗಾಯಾಳು ಮಂತು ಸಾಂತ್ರಾ ಮತ್ತು ಆರೋಪಿ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ರಾತ್ರಿ ಇಬ್ಬರ ನಡುವೆ ಜಗಳ ಶುರುವಾಯಿತು. ಈ ವೇಳೆ ಡೈಲ್ಯೂಟೇಡ್ ಸೆಲ್ಫ್ಯೂರಿಕ್ ಆ್ಯಸಿಡ್ ಅನ್ನು ಆರೋಪಿ ಎರಚಿದ್ದ. ಮಂತು ಸಾಂತ್ರಾನ ಮುಖ ಮತ್ತು ಎದೆ ಸುಟ್ಟು ಹೋಗಿತ್ತು. 30% ಗಾಯಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿವಾಹಿತೆ ಮೇಲೆ ಆ್ಯಸಿಡ್ ದಾಳಿ
ಬೆಂಗಳೂರಿನ ಗೋರಿಪಾಳ್ಯದ ನಿವಾಸಿ ಅಹಮದ್ ಎಂಬುವನಿಂದ ವಿವಾಹಿತ ಮಹಿಳೆ ಮೇಲೆ ಆ್ಯಸಿಡ್ ದಾಳಿ ಶುಕ್ರವಾರವಷ್ಟೆ ನಡೆದಿದೆ. ಆರೋಪಿ ಅಹಮದ್ ಹಾಗೂ ಮಹಿಳೆ ಕುಮಾರಸ್ವಾಮಿ ಲೇಔಟ್‌ನ ಕರ್ನಾಟಕ ಫ್ರೇಗ್ನೆನ್ಸ್ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ಮಹಿಳೆಗೆ ಮದುವೆ ಆಗಿ ಮೂವರು ಮಕ್ಕಳಿದ್ದು, ಆರೋಪಿ ಅಹಮದ್‌ಗೂ ಇಬ್ಬರು ಮಕ್ಕಳಿದ್ದಾರೆ. ಮಹಿಳೆ ಬಳಿ ಅಹಮದ್ ಮದುವೆ ಆಗೋಣ ಎಂದು ದೇಪದೆ ಒತ್ತಾಯಿಸುತ್ತಿದ್ದ. ಆತನ ಕಿರುಕುಳ ತಾಳಲಾರದೆ ಮಹಿಳೆಯು ಎರಡು ತಿಂಗಳ ಹಿಂದೆ ಮಹಿಳೆ ಕೆಲಸ ಬಿಟ್ಟಿದ್ದಳು. ಜೆ. ಪಿ ನಗರ ಮೆಟ್ರೋ ಸ್ಟೇಷನ್ ಹತ್ತಿರ ಬರುತ್ತಿದ್ದಂತೆ ಮತ್ತೆ ಮದುವೆಯ ಪ್ರಸ್ತಾಪ ಮಾಡಿದ. ಮಹಿಳೆ ಎಂದಿನಂತೆ ನಿರಾಕರಿಸಿದ್ದರು. ನಂತರ ಕೆ ಎಸ್ ಲೇಔಟ್‌ನಿಂದ ಜೆ ಪಿ ನಗರದ ಕಡೆ ಹೋಗುತ್ತಿದ್ದ ಮಹಿಳೆ ಮೇಲೆ ಸಾರಕ್ಕಿ ಸಿಗ್ನಲ್ ಬಳಿ ಅಡ್ಡಗಟ್ಟಿದ ಆರೋಪಿ, ಮುಖಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದ. ಆರೋಪಿಯನ್ನು ಕೆಲವೆ ಗಂಟೆಗಳಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸುಲಭವಾಗಿ ಸಿಗುತ್ತದೆ H2SO4 ಆ್ಯಸಿಡ್
ಪದೇಪದೆ ಆ್ಯಸಿಡ್ ದಾಳಿ ನಡೆಯುತ್ತಿದ್ದರೂ ಆ್ಯಸಿಡ್ ಎಲ್ಲಿಬೇಕೆಂದರೆ ಅಲ್ಲಿ ಸುಲಭವಾಗಿ ಸಿಗುತ್ತಿರುವುದಕ್ಕೆ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ. ಇಷ್ಟು ಸುಲಭವಾಗಿ ಅಪಾಯಕಾರಿ ರಾಸಾಯನಿಕಗಳು ಸಿಗುವಂತಿರಬಾರದು. ಈ ನಿಟ್ಟಿನಲ್ಲಿ ಕಾನೂನು ಬಲಗೊಳಿಸಬೇಕು. ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕಠಿಣ ಕಾನೂನು ಜಾರಿ ಮಾಡಿದರೆ ಮತ್ತೊಬ್ಬರು ಇಂತಹ ಕೃತ್ಯ ಎಸಗಲು ಹಿಂದೇಟು ಹಾಕುತ್ತಾರೆ ಎಂಬ ಒತ್ತಾಯ ಕೇಳಿಬಂದಿತ್ತು. ಬಿಜೆಪಿ ಸಂಗಟನೆ ವತಿಯಿಂದಲೂ ಸರ್ಕಾರದ ಮೇಲೆ ಈ ನಿಟ್ಟಿನಲ್ಲಿ ಒತ್ತಡವಿತ್ತು. ಇದೀಗ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಕಠಿಣ ಕಾನೂನಿಗೆ ಒಲವು ತೋರಿಸಿದ್ದಾರೆ.
ತಜ್ಞರೊಂದಿಗೆ ಸಿಎಂ ಚರ್ಚೆ
ಪದೇಪದೆ ಆ್ಯಸಿಡ್ ದಾಳಿ ಆಗುತ್ತಿರುವುದರ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿಯಾಗಿರುವುದು ಬಹಳ ದುರದೃಷ್ಟಕರ. ಈಗಿರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸುವ ಚಿಂತನೆ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಆ್ಯಸಿಡ್ ದಾಳಿ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಈಗಿರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಬೇಕಿದೆ. ಕಾನೂನು ರೂಪಿಸುವಂತೆ ಕಾನೂನು ತಜ್ಞರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.