ಬೆಂಗಳೂರು: ಗೋ ಸಂತತಿಯನ್ನು ಸಂರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಎ, ಬಿ ಹಾಗೂ ಸಿ ವೃಂದಕ್ಕೆ ಮೊತ್ತವನ್ನು ಕಡಿತ ಮಾಡಲಾಗಿದ್ದು, ಡಿ ವೃಂದಕ್ಕೆ ವಿನಾಯಿತಿ ನೀಡಲಾಗಿದೆ.
ಅಕ್ಟೋಬರ್‌ನಲ್ಲಿ ಸರ್ಕಾರಿ ನೌಕರರೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಭಾರತೀಯ ಕೃಷಿ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳು ದೇಶದ ಸಂಸ್ಕೃತಿ ಹಾಗೂ ಸಂಪತ್ತಿನ ಪ್ರತೀಕ. ಈ ಯೋಜನೆಗೆ ಸರ್ಕಾರಿ ನೌಕರರು ದೇಣಿಗೆ ನೀಡಬಹುದು ಎಂದು ಮನವಿ ಮಾಡಿದ್ದರು.
ಮುಖ್ಯಮಂತ್ರಿಯವರ ಕರೆಗೆ ಸ್ಪಂದಿಸಿದ ಸರ್ಕಾರಿ ನೌಕರರ ಸಂಘವು, ರಾಜ್ಯ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಎಲ್ಲ ನೌಕರರ ಒಂದು ದಿನದ ವೇತನದಂತೆ ಅಂದಾಜು ನೂರು ಕೋಟಿ ರೂ. ನೀಡಲು ಸಮ್ಮತಿ ಸೂಚಿಸಿದ್ದರು. ಇದೀಗ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್(2022) ವೇತನದಿಂದ ಒಂದು ಬಾರಿಗೆ ಕಡಿತ ಮಾಡಲಾಗುತ್ತದೆ.
ಎ ವೃಂದದ ನೌಕರರ ವೇತನದಿಂದ 11,000 ರೂ., ಬಿ ವೃಂದದ ನೌಕರರ ವೇತನದಿಂದ 4,000 ರೂ., ಸಿ ವೃಂದದ ನೌಕರರ ವೇತನದಿಂದ 400 ರೂ. ಕಡಿತ ಮಾಡಲಾಗುತ್ತದೆ. ಡಿ ವೃಂದದ ಸಿಬ್ಬಂದಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಕಡಿತ ಮಾಡದಿರಲೂ ಅವಕಾಶ
ಪುಣ್ಯಕೋಟಿ ದತ್ತು ಯೋಜನೆಗೆ ಹಣ ನೀಡಲು ಇಚ್ಛೆ ಇಲ್ಲದ ಸರ್ಕಾರಿ ನೌಕರರಿಗೆ ಅವಕಾಶ ನೀಡಲಾಗಿದೆ. ತಮಗೆ ಹಣ ನೀಡಲು ಇಚ್ಛೆ ಇಲ್ಲದ ನೌಕರರು ನವೆಂಬರ್ 25ರೊಳಗೆ ಸಂಬಂಧಪಟ್ಟ ಬಟವಾಡೆ ಅಧಿಕಾರಿಗೆ ತಮ್ಮ ಅಸಮ್ಮತಿಯನ್ನು ಲಿಖಿತ ಮೂಲಕ ನೀಡಬೇಕು. ಅಂತಹವರ ವೇತನದಿಂದ ವಂತಿಕೆಯನ್ನು ಕಟಾವು ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ಒಂದು ದಿನದ ವೇತನ ದೇಣಿಗೆ