ಬಳ್ಳಾರಿ: ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಉಂಟಾದ ವಿದ್ಯುತ್ ಕಡಿತದಿಂದ ಹಳೆ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಲು ಸರಕಾರದ ಆದೇಶಿಸಿದೆ.
ವಿದ್ಯುತ್ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ವೆಂಟಿಲೇಟರ್ ಗೆ ವಿದ್ಯುತ್ ಸಂಪರ್ಕ ಕಡಿತವಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಈ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಮಿತಿ ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬುಧವಾರ ಬೆಳಗ್ಗಿನ ಹೊತ್ತು ವಿಮ್ಸ್‌ನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಈ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೌಲಾ ಹುಸೇನ್ ಮತ್ತು ಚೆಟ್ಟೆಮ್ಮ ಎನ್ನುವವರು ಮೃತ ಪಟ್ಟಿದ್ದಾರೆಂದು ವಿಡಿಯೊ ಒಂದರಲ್ಲಿ ಆರೋಪಿಸಲಾಗಿತ್ತು. ವಿದ್ಯುತ್ ವ್ಯತ್ಯಯ ಉಂಟಾದಾಗ ಜನರೇಟರ್ ಇರಲಿಲ್ಲ. ಹೀಗಾಗಿ ವೆಂಟಿಲೇಟರ್‌ನಲ್ಲಿದ್ದ ರೋಗಿಗಳು ಮೃತ ಪಟ್ಟಿದ್ದಾರೆಂಬ ಆರೋಪ ಮಾಡಲಾಗಿತ್ತು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಪ್ರಕರಣದ ತನಿಖೆ ನಡೆಸಲು ಐದು ಜನದ ಸಮಿತಿಯನ್ನು ರಚಿಸಿ ಕೂಡಲೇ ವರದಿ ಸರಕಾರಕ್ಕೆ ನೀಡುವಂತೆ ಸರಕಾರ ಸೂಚಿಸಿದೆ.
ಸಮಿತಿಯನ್ನು ಯಾರ್ಯಾರು ಇದ್ದಾರೆ?
ಸಮಿತಿಯ ಅಧ್ಯಕ್ಷರಾಗಿ ಬೆಂಗಳೂರಿನ ಬಿಎಂಸಿ&ಆರ್ ಐ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕಿ ಡಾ.ಸ್ಮಿತಾ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಡಾ.ಸಿದ್ದಿಕಿ ಅಹಮದ್, ಬಿಎಂಸಿ&ಆರ್ ಐ ಜನರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ.ದಿವಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಯೋಗೇಶ್ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿ ಕೆ.ಎ.ಉಮಾ ಅವರು ಇರುತ್ತಾರೆ.
ಇದನ್ನೂ ಓದಿ | ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ: ಐಸಿಯುನಲ್ಲಿದ್ದ ಇಬ್ಬರ ಸಾವು? ವಿಡಿಯೊದಲ್ಲಿ ಆರೋಪ, ಆಸ್ಪತ್ರೆ ಮೌನ
ಇದನ್ನೂ ಓದಿ | ಇಬ್ಬರು ರೋಗಿಗಳ ಸಾವಿಗೆ ತೀವ್ರ ಅನಾರೋಗ್ಯವೇ ಕಾರಣ ಎಂದು ವಿಮ್ಸ್ ನಿರ್ದೇಶಕ ಸ್ಪಷ್ಟನೆ