ಬೆಂಗಳೂರು: 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಮಹಾ ಮುಷ್ಕರ (Govt Employees Strike) ಕೈಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ (ಮಾ. 1) ರಾಜ್ಯಾದ್ಯಂತ ಬಹುತೇಕ ಸರ್ಕಾರಿ ಆಸ್ಪತ್ರೆಗಳು ಅರೆಬರೆ ಕಾರ್ಯನಿರ್ವಹಣೆ ಮಾಡಿದ ಹಿನ್ನೆಲೆಯಲ್ಲಿ ರೋಗಿಗಳು ತೀವ್ರ ಪರದಾಡುವಂತಾಯಿತು. ಕೇವಲ ತುರ್ತು ನಿಗಾ ಘಟಕ, ಹೆರಿಗೆ ಸೇರಿದಂತೆ ಗಂಭೀರ ಪ್ರಕರಣಗಳನ್ನು ಮಾತ್ರ ವೈದ್ಯರು ಪರಿಗಣನೆಗೆ ತೆಗೆದುಕೊಳ್ಳುತ್ತಿರುವುದರಿಂದ ಉಳಿದ ಹೊರ ರೋಗಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಎಲ್ಲೆಲ್ಲಿ ಏನೇನು ಸಮಸ್ಯೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ. ಈಗ ಮುಷ್ಕರವನ್ನು ವಾಪಸ್ ಪಡೆಯಲಾಗಿದ್ದರೂ ಸೇವೆ ಆರಂಭದ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
ಬಳ್ಳಾರಿಯಲ್ಲಿ ಒಪಿಡಿ ಬಂದ್
ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ಬಳ್ಳಾರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಲಾಗಿತ್ತು. ಹೀಗಾಗಿ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳು ಮರಳಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸ್ಕ್ಯಾನಿಂಗ್‌ಗೆ ಬಂದ ಗರ್ಭಿಣಿ ಮಹಿಳೆ ಸಹ ಚಿಕಿತ್ಸೆಗಾಗಿ ಪರದಾಡಿದ ಪ್ರಸಂಗ ಕಂಡುಬಂತು. ಜಿಲ್ಲಾಸ್ಪತ್ರೆಗೆ ಬಂದರೂ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ. ಇದೇ ವೇಳೆ ನಾಳೆಯೂ (ಗುರುವಾರ- ಮಾ.2) ಒಪಿಡಿ ಬಂದ್ ಇರುವುದಾಗಿ ಆಸ್ಪತ್ರೆ ಸಿಬ್ಬಂದಿಯು ರೋಗಿಗಳಿಗೆ ಹೇಲಿ ಕಳುಹಿಸುತ್ತಿದ್ದಾರೆ. ಆಸ್ಪತ್ರೆಯ ಮುಂಭಾಗದಲ್ಲಿಯೇ ನಿಂತು ಬಂದವರನ್ನು ವಾಪಸ್ ಕಳಿಸಲಾಗುತ್ತಿದೆ. ಆಂಧ್ರಪ್ರದೇಶದ ಸೇರಿದಂತೆ ಜಿಲ್ಲೆ ನಾನಾ ಭಾಗದಿಂದ ರೋಗಿಗಳ ಬಂದಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಸದ್ಯ ತುರ್ತು ಸೇವೆಗಳನ್ನು ಮಾತ್ರ ನೀಡಲಾಗುತ್ತಿದೆ. ಎಮರ್ಜೆನ್ಸಿ ಸೇವೆ ನೀಡುತ್ತಿರುವ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಸೇವೆಗೆ ಹಾಜರಾಗಿದ್ದಾರೆ. ಬೇಡಿಕೆ ಈಡೇರಿಸುವವರೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.
ಗದಗ ಜಿಲ್ಲಾದ್ಯಂತ ಸಮಸ್ಯೆ
ಗದಗ ಜಿಲ್ಲಾಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದೆ. ಜಿಲ್ಲೆಯಾದ್ಯಂತ 850 ವೈದ್ಯಕೀಯ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಜಿಲ್ಲಾಸ್ಪತ್ರೆ ಸೇರಿದಂತೆ ನಾಲ್ಕು ತಾಲೂಕು ಆಸ್ಪತ್ರೆ, 39 ಪ್ರಾರ್ಥಮಿಕ ಆರೋಗ್ಯ ಕೇಂದ್ರ, 3 ನಗರ ಆರೋಗ್ಯ ಕೇಂದ್ರ, 2 ಆರೋಗ್ಯ ಕೇಂದ್ರ ಒಪಿಡಿಗಳು ಬಂದ್ ಆಗಿವೆ. ಆದರೆ, ಆ್ಯಂಬ್ಯುಲೆನ್ಸ್ ಸೇವೆ ಮುಂದುವರಿದಿದೆ. ಒಳ ರೋಗಿಗಳಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ಕಪ್ಪು ಪಟ್ಟಿ ಕಟ್ಟಿಕೊಂಡು ಒಳರೋಗಿಗಳ ಚಿಕಿತ್ಸೆಯಲ್ಲಿ ಸಿಬ್ಬಂದಿ ತೊಡಗಿದ್ದಾರೆ.
ಬೆಳಗಾವಿಯಲ್ಲಿ ಹೊರರೋಗಿಗಳ ಪರದಾಟ
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಒಪಿಡಿಯಲ್ಲಿ ಹೊರರೋಗಿಗಳು ತೀವ್ರ ಪರದಾಟ ಮಾಡುವಂತಾಗಿದೆ. ಒಪಿಡಿಯ 56 ವಿಭಾಗಗಳ ಪೈಕಿ ಕೆಲವೊಂದು ವಿಭಾಗ ಮಾತ್ರ ತೆರೆಯಲಾಗಿದೆ. ರಕ್ತ ತಪಾಸಣೆ, ಜನರಲ್ ಚೆಕ್‌ಅಪ್‌ಗೆ ಬಂದ ರೋಗಿಗಳು ಪರದಾಡಿದ್ದಾರೆ. ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲೂ ತುರ್ತು ಸೇವೆ ಹೊರತುಪಡಿಸಿ ಎಲ್ಲ ಸೇವೆಗಳನ್ನು ಬಂದ್ ಮಾಡಲಾಗಿದೆ. ಒಪಿಡಿ, ರಕ್ತ ತಪಾಸಣೆ, ಸ್ಕ್ಯಾನಿಂಗ್ ಕೂಡ ಬಂದ್ ಆಗಿವೆ. ಜಿಲ್ಲಾಸ್ಪತ್ರೆಯ ಐಸಿಯು, ಡಯಾಲಿಸಿಸ್, ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಾರ್ಡ್ ಸೇರಿದಂತೆ ತುರ್ತು ಚಿಕಿತ್ಸೆ ವಿಭಾಗಗಳ ಸಿಬ್ಬಂದಿ ಹಾಜರಾಗಿದ್ದಾರೆ.
ಬೆಳಗಾವಿಯಲ್ಲಿ ರೋಗಿಗಳ ಪರದಾಟ
ದಾವಣಗೆರೆಯಲ್ಲಿ ತುರ್ತು ನಿಗಾ ಘಟಕ ಕಾರ್ಯನಿರ್ವಹಣೆ
ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಿ ಕೇವಲ ತುರ್ತು ಸೇವೆ ಮಾತ್ರ ಅವಕಾಶ ನೀಡಿದ್ದರಿಂದ ಹೊರ ರೋಗಿಗಳು ಪರದಾಡಿದ್ದಾರೆ. ಹಾವೇರಿ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ಬಂದ ರೋಗಿಗಳು ವಾಪಸಾಗುವಂತಾಗಿದೆ.
ತುಮಕೂರಲ್ಲಿ ಒಪಿಡಿ ಬಂದ್
ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಒಪಿಡಿ ಸೇವೆಯನ್ನು ಬಂದ್ ಮಾಡಲಾಗಿತ್ತು. ತುರ್ತು ಸೇವೆ ಸೇರಿದಂತೆ ಹೆರಿಗೆ, ಅಪಘಾತದಲ್ಲಿ ಗಾಯಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತಾಗಿ ಬರುವ ರೋಗಿಗಳಿಗೆ ಯಾವುದೇ ತೊಂದರೆ ಇಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರು. ಜಿಲ್ಲಾಸ್ಪತ್ರೆ ಸರ್ಜನ್ ಡಾ. ವೀಣಾ ಹಾಗೂ ಸಿಬ್ಬಂದಿ ಕಪ್ಪು ಬಟ್ಟೆ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆಂಬ್ಯುಲೆನ್ಸ್ ಚಾಲಕರು ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Unemployment Rate : ಜನವರಿಯಲ್ಲಿ ನಿರುದ್ಯೋಗದ ಪ್ರಮಾಣ 7.14%ರಿಂದ 7.45%ಕ್ಕೆ ಏರಿಕೆ
ಹಾವೇರಿಯಲ್ಲಿ ತುರ್ತು ಚಿಕಿತ್ಸೆ ಮಾತ್ರ
ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಬಂದ್ ಆಗಿದ್ದು, ಆಸ್ಪತ್ರೆ ಸಿಬ್ಬಂದಿ ಕೇವಲ ತುರ್ತು ಚಿಕಿತ್ಸೆಯನ್ನು ಮಾತ್ರ ನೀಡುತ್ತಿದ್ದಾರೆ. ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳ ಪರದಾಡುವಂತಾಗಿದೆ. ಗ್ರಾಮೀಣ ಭಾಗದಿಂದ ಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳು ಪರದಾಡುವಂತಾಗಿದೆ.
ಶಿವಮೊಗ್ಗದಲ್ಲಿ ಬಿಕೋ ಎನ್ನುತ್ತಿರುವ ಮೆಗ್ಗಾನ್ ಆಸ್ಪತ್ರೆ
ಶಿವಮೊಗ್ಗ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಮೆಗ್ಗಾನ್ ಆಸ್ಪತ್ರೆ ಬಿಕೋ ಎನ್ನುತ್ತಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಲಾಗಿದೆ. ಒಪಿಡಿ ಸೇವೆ ಕಾರ್ಯನಿರ್ವಹಿಸಲಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಗಳು ಪರದಾಡಿದರು.
ಮಂಗಳೂರಲ್ಲಿ ಹೊರ ವಿಭಾಗ ನೌಕರರು ಗೈರು
ಮಂಗಳೂರು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಸೇವೆ ಲಭ್ಯವಾಗಿದ್ದು, ಹೊರ ರೋಗಿಗಳ ವಿಭಾಗದ ನೌಕರರು ಗೈರಾಗಿದ್ದಾರೆ. ಇದರಿಂದ ನೌಕರರು ತೀವ್ರ ಪರದಾಡುವಂತಾಯಿತು.
ಕೊಡಗಿನಲ್ಲಿಲ್ಲ ಸಮಸ್ಯೆ
ಮಡಿಕೇರಿಯ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಎಂದಿನಂತೆ ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲವನ್ನೂ ಬಂದ್ ಮಾಡಿ ಬಂದ್‌ಗೆ ಬೆಂಬಲ ಸೂಚಿಸಲು ಮನವಿ ಮಾಡಲಾಗಿದ್ದರೂ ಕರ್ತವ್ಯ ನಿರ್ವಹಣೆ ಮಾಡಲಾಗಿದೆ.
ಇದನ್ನೂ ಓದಿ: Govt. Employees strike : ಸರ್ಕಾರಿ ನೌಕರರ ಮುಷ್ಕರ; ರಾಜ್ಯಾದ್ಯಂತ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧ
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬೀಗ
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಒಪಿಡಿ ಪ್ರವೇಶ ದ್ವಾರಕ್ಕೆ ಬೀಗ ಹಾಕಲಾಗಿದ್ದರಿಂದ ಅಲ್ಲಿಯವರೆಗೆ ಬರುವ ರೋಗಿಗಳು ವಾಪಸಾಗುತ್ತಿದ್ದಾರೆ. ಬೀಗ ಜಡಿದಿರೋದಕ್ಕೆ ರೋಗಿಗಳ ಸಂಬಂಧಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ರೋಗಿಯ ಪುತ್ರರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ನಾನು ಸೆಕ್ಯೂರಿಟಿ ಕೆಲಸ ಮಾಡುವುದು. ನಮ್ಮ ತಂದೆಗೆ ಉಸಿರಾಟ ಸಮಸ್ಯೆ ಅಂತ ಸೇರಿಸಿದ್ದೇನೆ. ಸಾವು ಬದುಕಿನ ನಡುವೆ ತಂದೆ ಇದ್ದಾರೆ. ಸಿಟಿ ಸ್ಕ್ಯಾನ್, ಹಾರ್ಟ್ ಚೆಕ್ಅಪ್ ಮಾಡಿಸಿ ಅಂದಿದ್ದಾರೆ. ಆದರೆ, ಇಲ್ಲಿ ಯಾವುದಕ್ಕೂ ಸಿಬ್ಬಂದಿ ಇಲ್ಲ. ಹೊರಗಡೆ ಹೇಗೆ ಮಾಡಿಸಲಿ? ನಾನು ಬಡವ. ಇನ್ನು ಆಸ್ಪತ್ರೆಗೆ ಬೀಗ ಹಾಕಿಬಿಟ್ಟರೆ ನಾನು ಹೋಗೋದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ತೀರಾ ಎಮರ್ಜೆನ್ಸಿ ಆದರೆ ಅವರನ್ನು ಕರೆದುಕೊಂಡು ಹೋಗುವುದಾದರೂ ಹೇಗೆ ಎಂದು ಕಣ್ಣೀರಿಟ್ಟಿದ್ದಾರೆ.
ಹುಬ್ಬಳ್ಳಿ ಕಿಮ್ಸ್‌ನಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ಕ್ಕೆ ಹಾಜರಾದ ಸಿಬ್ಬಂದಿ
ಸರ್ಕಾರಿ ನೌಕರರು ಒಪಿಡಿ ಸೇವೆಯಿಂದ ದೂರ ಉಳಿದಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಗುತ್ತಿಗೆ ಆಧಾರದ ಸಿಬ್ಬಂದಿಯಿಂದ ಒಪಿಡಿ ಸೇವೆಯನ್ನು ಕಿಮ್ಸ್ ಆಡಳಿತ ಮಂಡಳಿಯವರು ಕೊಡಿಸುವ ಕ್ರಮ ಕೈಗೊಂಡಿದ್ದಾರೆ. ಐಸಿಯು ಮತ್ತು ತುರ್ತು ಚಿಕಿತ್ಸಾ ಘಟಕ ಮಾತ್ರ ಓಪನ್ ಆಗಿದೆ. ಕಿಮ್ಸ್‌ನ ಸುಮಾರು 400 ಸಿಬ್ಬಂದಿ ಕೆಲಸದಿಂದ ದೂರವುಳಿದಿದ್ದಾರೆ. ನರ್ಸಿಂಗ್, ಫಾರ್ಮಸಿ, ಲ್ಯಾಬ್, ಕ್ಲರಿಕಲ್ ಸಿಬ್ಬಂದಿ ಗೈರಾಗಿದ್ದಾರೆ.
ಮಂಡ್ಯದಲ್ಲಿ ಎಂದಿನಂತೆ ಕಾರ್ಯನಿರ್ವಹಣೆ
ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಎಂದಿನಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಒಪಿಡಿ, ಎಮರ್ಜೆನ್ಸಿ ವಿಭಾಗ ಸೇರಿದಂತೆ ಎಲ್ಲ ವಿಭಾಗದಲ್ಲೂ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೆ ಪರದಾಟ
ಇದನ್ನೂ ಓದಿ: Govt Employees Strike : ಶೇ.17 ರಷ್ಟು ವೇತನ ಹೆಚ್ಚಳದ ಆದೇಶ; ಹೋರಾಟ ಸಕ್ಸಸ್ ಎಂದ ಸಿ.ಎಸ್. ಷಡಾಕ್ಷರಿ
ಉತ್ತರ ಕನ್ನಡಕ್ಕೂ ತಟ್ಟಿದ ಬಿಸಿ
ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು ತಮ್ಮ ಸೇವೆಯನ್ನು ಬಂದ್ ಮಾಡಿದ್ದಾರೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಒಪಿಡಿ ಸೇವೆ ಬಂದ್ ಆಗಿದೆ. ಎಲ್ಲೆಡೆಯೂ ಇದೇ ಪರಿಸ್ಥಿತಿ ಇದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಶಿರಸಿ ತಾಲೂಕು ಸರ್ಕಾರಿ ಆಸ್ಪತ್ರೆಯ ಐಸಿಯುವಿನಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ತುರ್ತು ಚಿಕಿತ್ಸೆಯನ್ನು ಮಾತ್ರ ನೀಡಲಾಗುತ್ತಿದೆ.
ತುಮಕೂರಲ್ಲಿ ತುರ್ತು ಸೇವೆ ಮಾತ್ರ
ತುಮಕೂರು ಜಿಲ್ಲಾಸ್ಪತ್ರೆಯ ಒಪಿಡಿ ವಿಭಾಗವನ್ನು ಬಂದ್ ಮಾಡಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲ ಸೇವೆಗಳು ಬಂದ್ ಆಗಿದ್ದರಿಂದ ರೋಗಿಗಳು ಪರದಾಡಿದರು.
ಉಡುಪಿ, ವಿಜಯಪುರ, ಬೀದರ್, ಮೈಸೂರು, ಕಲಬುರಗಿ, ಹಾಸನ ಸ್ಥಿತಿ ಹೀಗಿದೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ ತುರ್ತು ಚಿಕಿತ್ಸೆ ಮಾತ್ರ ಲಭ್ಯವಾಗಿದೆ. ಚಿಕ್ಕಮಗಳೂರಿನಲ್ಲಿ ತುರ್ತು ಆರೋಗ್ಯ ಸೇವೆಯನ್ನು ಮಾತ್ರ ಮುಂದುವರಿಸಲಾಗಿದೆ. ವಿಜಯಪುರದಲ್ಲಿ ಜಿಲ್ಲಾಸ್ಪತ್ರೆಯ ಒಪಿಡಿ ಬಂದ್ ಆಗಿದ್ದು, ತುರ್ತು ಸೇವೆಗಳಿಗೆ ತೊಂದರೆಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿನ ಆಸ್ಪತ್ರೆಗಳಲ್ಲೂ ತುರ್ತು ಸೇವೆ ಮಾತ್ರ ಲಭ್ಯವಾಗಿದೆ. ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಎಂದಿನಂತೆ ಒಪಿಡಿ ಸೇವೆ ಆರಂಭವಾಗಿದ್ದು, ರೋಗಿಗಳು ನಿರಾಳರಾಗಿದ್ದಾರೆ. ಮೈಸೂರಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನೌಕರರ ಮುಷ್ಕರವು ರೋಗಿಗಳಿಗೆ ಬಿಸಿ ತಟ್ಟಿದ್ದು, ಒಪಿಡಿ ಬಂದ್ ಆಗಿದೆ. ಕೇವಲ ತುರ್ತು ಚಿಕಿತ್ಸೆ ಮಾತ್ರ ಲಭ್ಯವಾಗುತ್ತಿದೆ. ಕಲಬುರಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಲಾಗಿದ್ದು, ತುರ್ತು ಸೇವೆ ಮುಂದುವರಿದಿದೆ.
ಇದನ್ನೂ ಓದಿ: Govt Employees Strike: ಶೇ.17 ವೇತನ ಹೆಚ್ಚಳದಿಂದ ಯಾವ ನೌಕರರಿಗೆ ಎಷ್ಟು ವೇತನ ಸಿಗುತ್ತದೆ? ಇಲ್ಲಿದೆ ಲೆಕ್ಕಾಚಾರ
ಹಾಸನದಲ್ಲಿ ರೋಗಿಗಳ ನೆರವಿಗೆ ಬಂದ ಜ್ಯೂ. ಡಾಕ್ಟರ್ಸ್
ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಜೂನಿಯರ್ ಡಾಕ್ಟರ್ಸ್, ಹೊರಗುತ್ತಿಗೆ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಎಂದಿನಂತೆ ಹೊರರೋಗಿ ನೋಂದಣಿ ಕೌಂಟರ್ ಹಾಗೂ ಒಪಿಡಿ ಕಾರ್ಯಾರಂಭ ಮಾಡಿದೆ. ರೋಗಿಗಳಿಗೆ ತೊಂದರೆಯಾಗದಂತೆ ಹಿಮ್ಸ್ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ.