ಔರಾದ್: ಕಾಂಗ್ರೆಸ್ ಭ್ರಷ್ಟಾಚಾರ, ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ-ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ರವಾನಿಸುತ್ತೇನೆ. ಅವರು ಏನು ಮಾಡುತ್ತಾರೆಂದು ಕಾದು ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲೆಸೆದರು.
ಬೀದರ್ ಜಿಲ್ಲೆಯ ಔರಾದ್ ನಲ್ಲಿ ‘ಜನಸಂಕಲ್ಪ’ ಯಾತ್ರೆಯ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಮಾತನಾಡಿದರು. ಸಿದ್ದರಾಮಯ್ಯ ಅವಧಿಯ ಹಗರಣಗಳ ವಿವರವನ್ನು ರಾಹುಲ್ ಗಾಂಧಿಗೆ ಕಳಿಸಿಕೊಡಲಿದ್ದೇವೆ. 2016ರ ಶಿಕ್ಷಕರ ನೇಮಕಾತಿ ಹಗರಣ ಸೇರಿ ಎಲ್ಲ ವಿವರ ಕೊಡಲಿದ್ದೇವೆ ಎಂದು ತಿಳಿಸಿದರು.
ಅರ್ಜಿಯನ್ನೇ ಹಾಕದವರನ್ನೂ ನೇಮಕಾತಿ ಮಾಡಲಾಗಿದೆ. ಪ್ರಾಸಿಕ್ಯೂಟರ್ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲೂ ಹೀಗೇ ಆಗಿತ್ತು. ಎಲ್ಲ ಹಗರಣಗಳನ್ನೂ ಮುಚ್ಚಿ ಹಾಕಿದ್ದರು, ಇದು ಕಾಂಗ್ರೆಸ್ ಸರ್ಕಾರ. ನಮ್ಮಲ್ಲಿ ಪಿಎಸ್‍ಐ ನೇಮಕಾತಿ ಆದಾಗ ತಪ್ಪು ಮಾಡಿದ್ದವರನ್ನು ಬಂಧಿಸಿದ್ದೇವೆ. ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡುತ್ತಾರೆ. ಅಬ್ಬರಿಸಿ ಬೊಬ್ಬಿರಿದರೆ ಕೇಳುವವರು ಯಾರೂ ಇಲ್ಲ. ಬರಿಯ ಮಾತನಾಡುವುದಲ್ಲ, ಇವರಿಗೆ ಕ್ರಮ ಕೈಗೊಳ್ಳುವ ಧಮ್ಮಿದೆಯೇ ಎಂದು ಕೇಳಿದರು.
ಇದನ್ನೂ ಓದಿ | ರಸ್ತೆ ಗುಂಡಿ ಕಾರಣಕ್ಕೆ ಮಹಿಳೆ ಸಾವಿನ ತನಿಖೆಗೆ ಆದೇಶ ನೀಡಿದ ಸಿಎಂ ಬೊಮ್ಮಾಯಿ: ಬಿಬಿಎಂಪಿ ಅಧಿಕಾರಿಗಳಲ್ಲಿ ನಡುಕ
ಜನರ ಮೂಲಕ ನಾವೆಲ್ಲರೂ ಆಯ್ಕೆಯಾಗಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಆಡಳಿತ ನಡೆಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಕ್ಕಿಳಿಸಿ ಬಿಜೆಪಿಯನ್ನು ಆಯ್ಕೆ ಮಾಡಿದ್ದೀರಿ. 3 ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಜನಪರ ಆಡಳಿತ ಮತ್ತು ಹತ್ತು ಹಲವಾರು ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಕೋವಿಡ್ ನಡುವೆಯೂ ಸತತ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಅತಿವೃಷ್ಟಿ ಸಂಬಂಧ ಪರಿಹಾರವನ್ನು ನಾವು ಹೆಚ್ಚಿಸಿದ್ದೇವೆ. ಮನೆಗಳ ಸಂಬಂಧ ಪರಿಹಾರ ಮೊತ್ತವನ್ನೂ ಹೆಚ್ಚಿಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಒಂದರಿಂದ ಒಂದೂವರೆ ವರ್ಷದಲ್ಲಿ ಪರಿಹಾರ ಕೊಡುತ್ತಿತ್ತು. ಈಗ ಕೇವಲ ಒಂದು ತಿಂಗಳಿನಲ್ಲಿ ಪರಿಹಾರ ನೀಡುತ್ತಿದ್ದೇವೆ ಎಂದರು.
ತಾಂಡಾಗಳ ಅಭಿವೃದ್ಧಿ, ಬಡವರಿಗೆ ನೆರವಾಗಿದ್ದೇವೆ. 23 ಸಾವಿರ ತಾಂಡಾಗಳನ್ನು ಗ್ರಾಮಗಳನ್ನಾಗಿ ಆದೇಶ ಮಾಡಲಾಗಿದೆ. ಮನೆಗಳಿಗೆ ಹಕ್ಕಪತ್ರ ನೀಡಲಾಗುತ್ತಿದೆ ಎಂದು ವಿವರಿಸಿದರು. ಇದು ಹಲವು ದಶಕಗಳ ಬೇಡಿಕೆ ಎಂದರು. ಕಾಂಗ್ರೆಸ್ ಪಕ್ಷವು, ದೀನದಲಿತರ ಹೆಸರಿನಲ್ಲಿ ಅಧಿಕಾರ ಮಾಡಿದರೂ ಈ ಸಮುದಾಯಗಳ ಅಭಿವೃದ್ಧಿ ಆಗಲಿಲ್ಲ ಎಂದು ಟೀಕಿಸಿದರು.
ದೀನ ದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ
ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೊಡುಗೆ ಎನ್ನಲು ಆತ್ಮಸಾಕ್ಷಿ ಬೇಕಲ್ಲವೇ ಎಂದ ಬೊಮ್ಮಾಯಿ, ನಿರ್ಣಯ ತೆಗೆದುಕೊಂಡವರು ಯಾರು ಎಂದು ಪ್ರಶ್ನಿಸಿದರು. ದೀನದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಉಚಿತವಾಗಿ ಕೋವಿಡ್ ಲಸಿಕೆ ನೀಡಿದ್ದು, ಉಚಿತ ಪಡಿತರ ವಿತರಣೆ ಮಾಡಿದ್ದಲ್ಲದೆ ಕೋವಿಡ್ ನಡುವೆಯೂ ದೇಶ ಸರ್ವತೋಮುಖ ಅಭಿವೃದ್ಧಿ ಸಾಧಿಸಿದೆ. ರೈತ ಉಳಿದರೆ ದೇಶ ಉಳಿದೀತು ಎಂಬಂತೆ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಅನುದಾನ ನೀಡಿದ್ದು, ಕಾಮಗಾರಿ ಆರಂಭವಾಗುತ್ತಿದೆ. ಮುಂದಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ನೀಡಲಿದ್ದೇವೆ. ಅದಕ್ಕಾಗಿ ಕ್ರಿಯಾ ಯೋಜನೆಯನ್ನೂ ಮಾಡಿದ್ದೇವೆ. 14 ಸಾವಿರ ನೇಮಕಾತಿಗೆ ಅನುಮತಿ ಕೊಟ್ಟಿದ್ದೇವೆ ಎಂದು ವಿವರಿಸಿದರು. ನೀರಾವರಿ ಯೋಜನೆಗೆ ವಿಶೇಷ ಅನುದಾನ ಕೊಟ್ಟಿದ್ದೇವೆ. ಪ್ರಭು ಚವ್ಹಾಣ್, ಭಗವಂತ ಖೂಬಾ ಅವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಭಗವಂತ್ ಖೂಬಾ ಮಾತನಾಡಿ, ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಈ ಭಾಗದ ನನೆಗುದಿಗೆ ಬಿದ್ದಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಇದಕ್ಕಾಗಿ ಬೊಮ್ಮಾಯಿ ಅವರಿಗೆ ಧನ್ಯವಾದ ಎಂದರು.
ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಈ ಭಾಗದ ನೀರಾವರಿಗೆ ಬಿಜೆಪಿ ಸರ್ಕಾರ ಆದ್ಯತೆ ಕೊಟ್ಟಿದೆ. ನರೇಂದ್ರ ಮೋದಿ, ಬೊಮ್ಮಾಯಿಯವರ ಸರ್ಕಾರ ಜನೋಪಯೋಗಿ ಕಾರ್ಯಗಳನ್ನು ಮಾಡಿದೆ. ಕಾಂಗ್ರೆಸ್ ಪಕ್ಷದ ಜೋಡೋ ಯಾತ್ರೆ ಕೇವಲ ನಾಟಕವಷ್ಟೇ. ಇದು ಕೇವಲ ಹಾಸ್ಯಾಸ್ಪದ. ಜನರು ಕಾಂಗ್ರೆಸನ್ನು ಸಂಪೂರ್ಣವಾಗಿ ತಿರಸ್ಕರಿಸಲು ಮುಂದಾಗಿದ್ದಾರೆ ಎಂದರು.
ಸಚಿವರಾದ ಪ್ರಭು ಚವ್ಹಾಣ್, ಬೈರತಿ ಬಸವರಾಜ್, ಶ್ರೀರಾಮುಲು, ಶಂಕರ ಪಾಟೀಲ ಮುನೇನಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮತ್ತಿತರರಿದ್ದರು.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಕಾಂಗ್ರೆಸ್‌ನದ್ದು 85% ಸರಕಾರ: ರಾಜೀವ್ ಗಾಂಧಿಯನ್ನು ಉದಾಹರಿಸಿದ ಬೊಮ್ಮಾಯಿ