Site icon Vistara News

Gowri murder | ಗೌರಿ ಹತ್ಯೆ ಪ್ರಕರಣದ ಕೆಲವೊಂದು ಸಾಕ್ಷಿಗಳ ಗೌಪ್ಯ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ಆರಂಭ

Gowri Journalist

ಬೆಂಗಳೂರು: 2017ರ ಸೆಪ್ಟೆಂಬರ್‌ 5ರಂದು ನಡೆದಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ (Gowri murder) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಬಯಸಿದ ಕೆಲವೊಂದು ನಿರ್ದಿಷ್ಟ ಸಾಕ್ಷಿಗಳ ಗೌಪ್ಯ ವಿಚಾರಣೆ ಮಂಗಳವಾರ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಆರಂಭಗೊಂಡಿದೆ.

ಕೆಲವೊಂದು ಸಾಕ್ಷಿಗಳ ಗೌಪ್ಯ ವಿಚಾರಣೆ ಕೋರಿ ವಿಶೇಷ ಸರ್ಕಾರಿ ಅಭಿಯೋಜಕರು ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ) ಕಾಯಿದೆಯ ಸೆಕ್ಷನ್‌ 20(3) ಅಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಾದ ನ್ಯಾಯಾಧೀಶರಾದ ರಾಮಚಂದ್ರ ಡಿ. ಹುದ್ದಾರ್‌ ಒಪ್ಪಿಕೊಂಡಿದ್ದರು.

ಗೌರಿ ಹತ್ಯೆ ಪ್ರಕರಣ ತನಿಖೆ ನಡೆಸಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ಪ್ರಾಥಮಿಕ ಮತ್ತು ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ. 2022ರ ಜುಲೈ 4ರಂದು ಪ್ರಕರಣದ ವಿಚಾರಣೆ ಆರಂಭವಾಗಿದ್ದು, 200 ಸಾಕ್ಷಿಗಳ ಪೈಕಿ ಇದುವರೆಗೆ 30ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ.

ಐದು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣ
2017ರ ಸೆಪ್ಟೆಂಬರ್‌ 5ರಂದು ಗೌರಿ ಲಂಕೇಶ್‌ ಅವರು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಮೇಲೂ ಇದೆ. ಆರೋಪಿಗಳ ಪರವಾಗಿ 60ಕ್ಕೂ ಹೆಚ್ಚು ವಕೀಲರು ವಕಾಲತ್ತು ವಹಿಸಿದ್ದರು. ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ಕಾರಣಕ್ಕೆ ಹತ್ಯೆ ಪ್ರಕರಣದ ವಿಚಾರಣೆ ತಡವಾಗಿತ್ತು. ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ಎಸ್‌ಐಟಿ 18 ಆರೋಪಿಗಳನ್ನು ಬಂಧಿಸಿ, ಅವರ ವಿರುದ್ದ 8,500 ಪುಟಗಳ ಆರೋಪ ಪಟ್ಟಿ ಸಲ್ಲಿಸಿತ್ತು.

ಧಾರವಾಡದಲ್ಲಿ ಎಂ ಎಂ ಕಲಬುರ್ಗಿ, ಕೊಲ್ಲಾಪುರದಲ್ಲಿ ಎಡಪಂಥೀಯ ಚಿಂತಕ ಗೋವಿಂದ್ ಪನ್ಸಾರೆ ಹತ್ಯೆಗೆ ಬಳಸಲಾದ 7.65 ಎಂಎಂ ಕಂಟ್ರಿಮೇಡ್ ಪಿಸ್ತೂಲ್ ಗೌರಿ ಲಂಕೇಶ್‌ ಅವರ ಹತ್ಯೆಗೂ ಬಳಕೆಯಾಗಿದೆ ಎಂದು ಎಸ್‌ಐಟಿ ಪತ್ತೆ ಹಚ್ಚಿತ್ತು. ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಲು ಬಳಸಿದ ಬಂದೂಕಿಗೂ ಪನ್ಸಾರೆ ಅವರ ಮೇಲಿನ ಗುಂಡಿನ ದಾಳಿಯಲ್ಲಿ ಬಳಸಿದ ಬಂದೂಕಿಗೂ ಹೊಂದಾಣಿಕೆಯಾಗಿರುವುದು ಕಂಡುಬಂದಿತ್ತು.

ಗೌರಿ ಲಂಕೇಶ್‌ ಅವರ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ, ಅಮೋಲ್ ಕಾಳೆ ಸಹಚರ ಮೋಹನ್ ನಾಯಕ್‌ ವಿರುದ್ದ ದಾಖಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧಗಳ ಕಾಯಿದೆ (ಕೋಕಾ) ಪ್ರಕರಣವನ್ನು ಕರ್ನಾಟಕ ಹೈಕೊರ್ಟ್ ಈ ಹಿಂದೆ ರದ್ದು ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಗೌರಿ ಲಂಕೇಶ್‌ ಸಹೋದರಿ ಕವಿತಾ ಲಂಕೇಶ್‌‌ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೊರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್‌ ಪಾಟೀಲ್‌, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ | High court | ಸಂತ್ರಸ್ತೆಯನ್ನೇ ಮದುವೆಯಾದ ಅತ್ಯಾಚಾರ ಆರೋಪಿ: ಎಚ್ಚರಿಕೆ ನೀಡಿ ಪ್ರಕರಣಕ್ಕೆ ತೆರೆ ಎಳೆದ ಕೋರ್ಟ್‌

Exit mobile version