Site icon Vistara News

ಚುನಾವಣಾ ಪ್ರಣಾಳಿಕೆಯಲ್ಲಿರಲಿ ಹಸಿರು ನಗರ-ಆರೋಗ್ಯಕರ ಆಹಾರ: ರಾಜಕೀಯ ಪಕ್ಷಗಳಿಗೆ ಗ್ರೀನ್‌ಪೀಸ್‌ ಇಂಡಿಯಾ ಆಗ್ರಹ

Greenpeace India urges political parties to include green city and healthy food in election manifesto

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸುತ್ತವೆ. ಈ ಬಾರಿ ಪ್ರಕಟಿಸುವಾಗ ಸುಸ್ಥಿರ ನಗರಗಳು ಮತ್ತು ಪೌಷ್ಟಿಕಾಂಶದ ವೈವಿಧ್ಯತೆಗೆ ಸಂಬಂಧಿಸಿದ ಅಂಶಗಳಿಗೆ ಆದ್ಯತೆ ನೀಡುವಂತೆ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯು ವಿವಿಧ ರಾಜಕೀಯ ಪಕ್ಷಗಳಿಗೆ ಆಗ್ರಹಿಸಿ ಒಟ್ಟು 20 ಅಂಶಗಳ ಶಿಫಾರಸುಗಳನ್ನು ಸಲ್ಲಿಸಿದೆ.

ಈ ಶಿಫಾರಸುಗಳೊಂದಿಗೆ ಗ್ರೀನ್‌ಪೀಸ್ ಇಂಡಿಯಾ, ರಾಜಕೀಯ ಪಕ್ಷಗಳಿಗೆ ಸುಸ್ಥಿರ ನಗರಗಳು, ಸರ್ವರಿಗೂ ಸಮಾನ ಸಂಚಾರ ಸಾರಿಗೆ ವ್ಯವಸ್ಥೆಯ ಅವಕಾಶಗಳು ಮತ್ತು ಸುಸ್ಥಿರ ಕೃಷಿಯಂತಹ ಪ್ರಮುಖ ಪರಿಸರ ಸಮಸ್ಯೆಗಳನ್ನು ಪ್ರಸ್ತುತ ಮತ್ತು ಭವಿಷ್ಯದ ಶಾಸನ ಸಭೆಯ ನಿರ್ಣಯಗಳಲ್ಲಿ ಗಂಭೀರವಾಗಿ ಪರಿಗಣಿಸಲು ಹಕ್ಕೊತ್ತಾಯ ಮಂಡಿಸಿದೆ.

ಸುಸ್ಥಿರ ನಗರಗಳು ಮತ್ತು ಪೌಷ್ಟಿಕಾಂಶದ ವೈವಿಧ್ಯತೆಗೆ ಸಂಬಂಧಿಸಿದ ಅಂಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಗ್ರೀನ್‌ಪೀಸ್‌ ಇಂಡಿಯಾ

ಸುಸ್ಥಿರ ನಗರಗಳಿಗೆ ಸಂಬಂಧಿಸಿದಂತೆ ಮಂಡಿಸಲಾದ ಶಿಫಾರಸುಗಳು ಸೈಕಲ್‌ ಸವಾರಿ (ಸೈಕ್ಲಿಂಗ್) ರೀತಿಯ ಸಾರ್ವಜನಿಕ ಸಾರಿಗೆ ಮತ್ತು ವಾಕಿಂಗ್‌ನಂತಹ ಮೋಟಾರುರಹಿತ ಸಾರಿಗೆ (NMT) ಮೇಲೆ ಕೇಂದ್ರೀಕರಿಸುತ್ತವೆ. ಇದರೊಂದಿಗೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಹೈಬ್ರಿಡ್ ಮಾದರಿಯ ಕೆಲಸದ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಈ ಶಿಫಾರಸುಗಳ ಮೂಲಕ, ಹೊರ ವರ್ತುಲ ರಸ್ತೆ (ಔಟರ್‌ ರಿಂಗ್‌ ರೋಡ್‌) ಉದ್ದಕ್ಕೂ ಬಸ್ ಆದ್ಯತಾ ಲೇನ್‌ನ ಪುನರುಜ್ಜೀವನ/ ಮರುನಿರ್ಮಾಣ ಮತ್ತು ಸಮಗ್ರ ಮಹಾನಗರ ಯೋಜನೆಯಲ್ಲಿ ಸೂಚಿಸಿದ 11 ಇತರ ಬಸ್ ಲೇನ್‌ಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ದಟ್ಟಣೆ ಮತ್ತು ಮಾಲಿನ್ಯದ ಮಟ್ಟಗಳನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆಗಳಿಗೆ ತುರ್ತಾಗಿ ಸ್ಪಂದಿಸುವಂತೆ ಪ್ರಸ್ತುತ ಹಕ್ಕೊತ್ತಾಯಗಳನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ: Bengaluru Karaga 2023: ಕರಗ ಹೊತ್ತ ಪೂಜಾರಿ ಮೇಲೆ ಕೆಮಿಕಲ್‌ ದಾಳಿ ಮಾಡಿದವನ ಸೆರೆ

“ಹೆಚ್ಚು ಮೇಲ್ಸೇತುವೆಗಳು (ಫ್ಲೈ ಓವರ್‌ಗಳು), ರಸ್ತೆಗಳು ಮತ್ತು ಎಲಿವೇಟೆಡ್ ಕಾರಿಡಾರ್‌ಗಳನ್ನು (ಎತ್ತರಿಸಿದ ಮಾರ್ಗ) ನಿರ್ಮಿಸಲಾಗುತ್ತಿದೆ ಎಂದರೆ, ನಾವು ಹೆಚ್ಚು ಹೆಚ್ಚು ಖಾಸಗಿ ವಾಹನಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ ಮತ್ತು ಜನಸಾಮಾನ್ಯರು ಬಸ್‌ಗಳು ಹಾಗು ಮೋಟಾರು ರಹಿತ ಸಾರಿಗೆಯಲ್ಲಿ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದೇವೆ ಎಂದರ್ಥ. ನಾವು ಗುಂಪಿನಿಂದ ಪ್ರತ್ಯೇಕವಾಗಿ ಉಳಿದಷ್ಟು, ನಮ್ಮ ನಗರಗಳ ಸುಸ್ಥಿರತೆ ಮತ್ತು ವಾಸಯೋಗ್ಯ ಗುಣಗಳು ಕ್ಷೀಣಿಸುತ್ತವೆ. ನಾವು ಹೆಚ್ಚು ಹೆಚ್ಚು ಬಸ್ಸುಗಳು, ಬಸ್ ಲೇನ್‌ಗಳು, ಸೈಕಲ್ ಸವಾರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪಡೆಯುವತ್ತ ಗಮನಹರಿಸಬೇಕು ಮತ್ತು ಖಾಸಗಿ ಸಾರಿಗೆಯನ್ನು ವಿಳಂಬ ಮಾಡದೆ ತಕ್ಷಣವೇ ನಿರ್ಲಕ್ಷಿಸಬೇಕಾಗಿದೆ. ನಮ್ಮ ನಗರವು ಅಪಾಯದಲ್ಲಿದೆ” ಎಂದು ಗ್ರೀನ್‌ಪೀಸ್ ಇಂಡಿಯಾ ಕ್ಯಾಂಪೇನರ್ ಅಮೃತಾ ಎಸ್.ಎನ್. ಹೇಳುತ್ತಾರೆ

ಕೌನ್ಸಿಲ್ ಫಾರ್ ಆ್ಯಕ್ಟಿವ್ ಮೊಬಿಲಿಟಿಯ ಅಜಯ್ ನಂದಕುಮಾರ್ ಮಾತನಾಡಿ, “ಖಾಸಗಿ ಮೋಟಾರು ವಾಹನಗಳ ಅನಿಯಂತ್ರಿತ ಹೆಚ್ಚಳ ಮತ್ತು ಬಳಕೆಯಿಂದಾಗಿ ನಗರದ ಮೂಲಸೌಕರ್ಯ ಮತ್ತು ಜನಜೀವನದ ಗುಣಮಟ್ಟವು ತೀವ್ರ ಒತ್ತಡದಲ್ಲಿದೆ. ಸಾರಿಗೆಯ ಅಗತ್ಯಗಳಿಗಾಗಿ, ಪರ್ಯಾಯ ಸಾರಿಗೆ ವ್ಯವಸ್ಥೆಗಳಿಗೆ ಮಾಡುತ್ತಿರುವ ಹೂಡಿಕೆ ಮತ್ತು ಮೋಟಾರು ವಾಹನಗಳ ಮೇಲಿನ ಹೂಡಿಕೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ರಾಜಕೀಯ ಅಜೆಂಡಾ ಸೆಟ್ಟಿಂಗ್‌/ಕ್ರಿಯಾಸೂಚಿಯ ಮೂಲಕ ಈ ಅಸಮಾನತೆಯನ್ನು ಸರಿಪಡಿಸಿ ಬೆಂಗಳೂರು ನಗರಕ್ಕೆ ಸಮತೋಲಿತ ಸಾರಿಗೆಯ ರೂಪುರೇಷೆಗಳನ್ನು ನಿರ್ದೇಶಿಸಬೇಕಿದೆ. ಬಸ್ಸುಗಳು, ಸೈಕ್ಲಿಂಗ್ ಮತ್ತು ವಾಕಿಂಗ್‌ಗೆ ಹೆಚ್ಚಿನ ಆದ್ಯತೆಯ ಮೇರೆಗೆ ಹಣವನ್ನು ಮೀಸಲಿರಿಸುವುದು ಮತ್ತು ಈ ಸಂಬಂಧೀ ನೀತಿ ನಿರೂಪಣೆಗೆ ಪ್ರತಿ ಪಕ್ಷವು ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ನೀಡಬೇಕು ಎಂದು ನಾವು ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಗ್ರೀನ್‌ಪೀಸ್ ಇಂಡಿಯಾವು ಪ್ರಸ್ತುತ ಹವಾಮಾನ ವೈಪರೀತ್ಯಗಳನ್ನು ಎದುರಿಸುತ್ತಿರುವ ಭಾರತದಲ್ಲಿ, ಹವಾಮಾನ ಬಿಕ್ಕಟ್ಟಿನ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲ ಆಹಾರ ವ್ಯವಸ್ಥೆಯನ್ನು ನಿರ್ಮಿಸಲು ಶಿಫಾರಸುಗಳನ್ನು ಮಂಡಿಸಿದೆ. ಇತರ ಶಿಫಾರಸುಗಳ ಪೈಕಿ, ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಬಲ್ಲ ಸಿರಿಧಾನ್ಯವನ್ನು ಬೆಳೆಯುವುದನ್ನು ಉತ್ತೇಜಿಸುವ ಸಲುವಾಗಿ, ಕಡಿಮೆ ಫಲವತ್ತತೆ ಇರುವ ಭೂಮಿಯನ್ನು ಪೋಷಿಸುವ ರೈತರ ಕೊಡುಗೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಹಾಗೂ ಸಿರಿಧಾನ್ಯ ಬೆಳೆಯುವ ರೈತರ ಪ್ರೋತ್ಸಾಹ ಧನವನ್ನು ಹೆಕ್ಟೇರ್‌ಗೆ 10,000 ರೂ.ನಿಂದ 25,000 ರೂ.ಗೆ ಹೆಚ್ಚಿಸುವುದು ಸೇರಿದೆ.

ಗ್ರೀನ್‌ಪೀಸ್ ಇಂಡಿಯಾದ ಹಿರಿಯ ಪ್ರಚಾರಕ ರೋಹಿನ್ ಕುಮಾರ್ ಮಾತನಾಡಿ, “ಹವಾಮಾನ ಬಿಕ್ಕಟ್ಟಿನಿಂದಾಗಿ ಸಾಮಾಜಿಕ ಭದ್ರತೆಯಲ್ಲಿ, ಅದರಲ್ಲೂ ಮುಖ್ಯವಾಗಿ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯಲ್ಲಿ ಭಾರತವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಬದಲಾಗುತ್ತಿರುವ ಹವಾಮಾನ ಮಾದರಿಗಳು, ಕೃಷಿ ಮತ್ತು ಆಹಾರದ ಮೇಲೆ ಅದರ ಪರಿಣಾಮಗಳು, ಹವಾಮಾನ ಬಿಕ್ಕಟ್ಟನ್ನು ತಗ್ಗಿಸುವುದು ಮಾತ್ರವಲ್ಲದೆ ಅದನ್ನು ಉತ್ತಮವಾಗಿ ಸ್ವೀಕರಿಸಬಲ್ಲ, ಆ ಸ್ಥಿತಿಗೆ ಒಗ್ಗಿಕೊಳ್ಳಬಲ್ಲ ಸಮುದಾಯಗಳನ್ನು ರೂಪಿಸಬಲ್ಲ ಆಹಾರ ವ್ಯವಸ್ಥೆಯನ್ನು ನಾವು ನಿರ್ಮಿಸಬೇಕು ಎಂಬ ಸಂದೇಶ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Elections : ನಾನು ಬದುಕಿರೋವರೆಗೆ ದತ್ತನ ಕೈಬಿಡಬಾರದು, ಕಷ್ಟ ಕಾಲದಲ್ಲಿ ನೆರವಿಗೆ ನಿಲ್ಬೇಕು ಎಂದು ಹೇಳಿದ್ರಂತೆ ಎಚ್‌ಡಿಡಿ

ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳು ಕರ್ನಾಟಕದ ಪಾಲಿಗೆ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವೂ ಆಗಬಹುದು. ಬದಲಾಗುವ ಹವಾಮಾನ ಪರಿಸ್ಥಿತಿಗೆ ಒಗ್ಗಿಕೊಳ್ಳಬಲ್ಲ ಮತ್ತು ಪೌಷ್ಟಿಕಾಂಶ ಭರಿತ ಸಿರಿಧಾನ್ಯಗಳು ಸಾಂಸ್ಕೃತಿಕವಾಗಿ ರಾಜ್ಯದಲ್ಲಿ ಆಹಾರ ಪದ್ಧತಿಯ ಭಾಗವಾಗಿದೆ. ಉತ್ತಮ ನೀತಿ-ನಿರೂಪಣೆ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳ ಲಭ್ಯತೆ, ಮಧ್ಯಾಹ್ನದ ಬಿಸಿಯೂಟ ಮತ್ತು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸಿರಿಧಾನ್ಯಗಳ ಸೇರ್ಪಡೆ, ಸಿರಿಧಾನ್ಯ ಸಂಸ್ಕರಣಾ ಘಟಕಗಳೊಂದಿಗೆ ಸ್ವಸಹಾಯ ಗುಂಪುಗಳನ್ನು ಬೆಂಬಲಿಸುವುದು, ಕನಿಷ್ಠ ಬೆಂಬಲದಲ್ಲಿ ಖರೀದಿಸಿದ ಸಿರಿಧಾನ್ಯಗಳಿಗೆ ಬೆಲೆ ಮತ್ತು ಮಾರುಕಟ್ಟೆಯನ್ನು ಖಾತರಿಪಡಿಸುವುದು, ಆಹಾರದಲ್ಲಿ ವೈವಿಧ್ಯತೆಗೆ ಕಾರಣವಾಗುತ್ತದೆ. ಆದ್ದರಿಂದ, ಈ ಶಿಫಾರಸುಗಳನ್ನು ಅಳವಡಿಸಿಕೊಳ್ಳುವಂತೆ ನಾವು ರಾಜಕೀಯ ಪಕ್ಷಗಳನ್ನು ಆಗ್ರಹಿಸುತ್ತೇವೆ. ಜತೆಗೆ ಹೊಸ ಸರ್ಕಾರವು ಅದನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಬೇಕುʼʼ ಎಂದು ಅವರು ಒತ್ತಾಯಿಸಿದ್ದಾರೆ.

Exit mobile version