Site icon Vistara News

Gruha lakshmi : ಗೃಹ ಲಕ್ಷ್ಮಿ ಯೋಜನೆ ಸಾಕಾರ; 1.28 ಕೋಟಿ ಗೃಹಿಣಿಯರ ಖಾತೆಗೆ ಇನ್ನು ಪ್ರತಿ ತಿಂಗಳು 2,000 ರೂ. ಪಕ್ಕಾ

gruhalakshmi udgatane

ಮೈಸೂರು: ರಾಜ್ಯದ 1.28 ಕೋಟಿ ಮನೆ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂ. ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಸಾಕಾರಗೊಂಡಿದೆ. ಇದರೊಂದಿಗೆ ಕಾಂಗ್ರೆಸ್‌ ಚುನಾವಣಾ ಪೂರ್ವದಲ್ಲಿ ನೀಡಿದ ಪಂಚ ಗ್ಯಾರಂಟಿಗಳಲ್ಲಿ ನಾಲ್ಕನೆಯದನ್ನು ಈಡೇರಿಸಿದಂತಾಗಿದೆ. ಈಗಾಗಲೇ ಶಕ್ತಿ, ಅನ್ನ ಭಾಗ್ಯ ಮತ್ತು ಗೃಹ ಜ್ಯೋತಿ ಯೋಜನೆಗಳು ಜಾರಿಯಾಗಿವೆ.

ಒಂದುಗೂಡಿ ಕೈಜೋಡಿಸಿದ ನಾಯಕರು

ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸೇರಿದ ಒಂದು ಲಕ್ಷ ಜನರನ್ನು ಸಾಕ್ಷೀಕರಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಹಲವು ಸಚಿವರು, ಶಾಸಕರ ಸಮ್ಮುಖದಲ್ಲಿ ಲೋಗೊ ಅನಾವರಣದ ಮೂಲಕ ಈ ಯೋಜನೆಗೆ ಚಾಲನೆ ನೀಡಲಾಯಿತು. ಕಾಂಗ್ರೆಸ್‌ನ ರಾಜ್ಯ ಚುನಾವಣಾ ಉಸ್ತುವಾರಿಯಾಗಿದ್ದ ರಣದೀಪ್‌ ಸುರ್ಜೇವಾಲಾ ಅವರು ಕೂಡಾ ಉಪಸ್ಥಿತರಿದ್ದರು.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸ್ವಾಗತ ಭಾಷಣ ಮಾಡಿದರು. ಬಳಿಕ ದೀಪ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಗೃಹಜ್ಯೋತಿ ಕಾರ್ಯಕ್ರಮ ಉದ್ಘಾಟನೆ

ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗುವ ಅರ್ಹತೆಯನ್ನು ಪಡೆದುಕೊಂಡಿದ್ದು ಅವರ ಪೈಕಿ 11.5 ಕೋಟಿ ಮಹಿಳೆಯರು ಈಗಾಗಲೇ ಈ ಸೌಲಭ್ಯಕ್ಕಾಗಿ ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಇನ್ನೂ 16.5 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಳ್ಳಲು ಬಾಕಿ ಇದೆ.

ಇದನ್ನೂ ಓದಿ: Gruha Lakshmi Scheme : ಗೃಹಲಕ್ಷ್ಮಿಯರ ಕೈಗೆ ಬರುತ್ತೆ 2000 ರೂ. ನಿಮ್ಗೂ ಬೇಕಾದರೆ ಕೂಡಲೇ ಹೀಗೆ ಮಾಡಿ

ಒಂದು ಲಕ್ಷ ಜನ ಫಲಾನುಭವಿಗಳು ಭಾಗಿ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಒಂದು ಲಕ್ಷ ಫಲಾನುಭವಿಗಳು ಆಗಮಿಸಿದ್ದು ಇಡೀ ಸಭಾಂಗಣ ಮಹಿಳೆಯರಿಂದ ತುಂಬಿ ಹೋಗಿದೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 80 ಅಡಿ ಉದ್ದ, 60 ಅಡಿ ಅಗಲ, 8 ಅಡಿ ಎತ್ತರದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ವೇದಿಕೆ ಹಿಂಭಾಗ 140 ಅಡಿ ಉದ್ದದ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗಿದೆ.

ಇಡೀ ರಾಜ್ಯಾದ್ಯಂತ 12,000 ಕಡೆ ಕಾರ್ಯಕ್ರಮ

ಕೇವಲ ಮೈಸೂರಿನಲ್ಲಿ ಮಾತ್ರವಲ್ಲ, ಇಡೀ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಮತ್ತು ಕೆಲವು ಗ್ರಾಮಗಳಲ್ಲೂ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆಯ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ 12000 ಕಡೆ ಕಾರ್ಯಕ್ರಮ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳನ್ನು ಜೂಮ್‌ ಮೂಲಕ ಪ್ರಧಾನ ಕಾರ್ಯಕ್ರಮಕ್ಕೆ ಕನೆಕ್ಟ್‌ ಮಾಡಲಾಗಿದೆ. ಇಲ್ಲಿನ ಉದ್ಘಾಟನಾ ಕಾರ್ಯಕ್ರಮ ಅಲ್ಲಿ ನೇರ ಪ್ರಸಾರವಾಗುವ ವ್ಯವಸ್ಥೆ ಮಾಡಲಾಗಿದೆ. ಫಲಾನುಭವಿಗಳೊಂದಿಗೆ ರಾಹುಲ್ ಗಾಂಧಿ ಅವರು ಡಿಜಿಟಲ್ ಸಂವಾದ ನಡೆಸಲಿದ್ದು, ಇದು ಆನ್‌ಲೈನ್ ಮೂಲಕ ರಾಜ್ಯಾದ್ಯಂತ ನೇರಪ್ರಸಾರವಾಗಲಿದೆ.

ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮದಲ್ಲಿ ಸಚಿವರು

ಇದನ್ನೂ ಓದಿ : Gruha lakshmi Scheme : ಗೃಹಲಕ್ಷ್ಮಿ ಯೋಜನೆ ಅದ್ಧೂರಿ ಉದ್ಘಾಟನೆಯ ಕ್ಷಣಗಳನ್ನು LIVE ಆಗಿ ಇಲ್ಲಿ ನೋಡಿ

ಭಾವುಕವಾಗಿ ಮಾತನಾಡಿದ ಸಿದ್ದರಾಮಯ್ಯ

ಈ ಯೋಜನೆಯ ಉದ್ಘಾಟನೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾವುಕ ಪೋಸ್ಟ್‌ ಒಂದು ಮಾಡಿದ್ದರು. ʻʻಕಾರ್ಯಕ್ರಮದ ಚಾಲನೆಗೆ ಇನ್ನೇನು ಕೆಲವೇ ನಿಮಿಷಗಳು ಉಳಿದಿರುವ ಈ ಹೊತ್ತಿನಲ್ಲಿ ನಾಡಿನ ತಾಯಂದಿರ ಮುಖದಲ್ಲಿ ಮೂಡುವ ನೆಮ್ಮದಿಯ ನಗೆ ಕಾಣಲು ಉತ್ಸುಕನಾಗಿದ್ದೇನೆʼʼ ಎಂದು ಹೇಳಿಕೊಂಡಿದ್ದಾರೆ.

ರಾಜಕೀಯವಾಗಿ ಬಹು ಮಹತ್ವದ ಕಾರ್ಯಕ್ರಮ

ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಕೇವಲ ಯೋಜನೆಯೊಂದರ ಉದ್ಘಾಟನಾ ಕಾರ್ಯಕ್ರಮವಾಗಿ ನೋಡದೆ ಇದನ್ನೊಂದು ರಾಜಕೀಯ ಮೆಟ್ಟಿಲಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದ್ದು ಸ್ಪಷ್ಟವಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸಂಕಷ್ಟಕ್ಕೆ ಒಳಗಾಗಲಿದೆ ಎಂದು ಬಿಜೆಪಿ ಪ್ರಚಾರ ಮಾಡಿದ್ದಲ್ಲದೆ, ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂದಿತ್ತು. ಇದೀಗ ಅವರಿಗೆಲ್ಲ ಉತ್ತರ ನೀಡುವಂತೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗಾವಿಯಲ್ಲಿ ಆಯೋಜಿಸಲಾಗುವುದು ಎಂದು ತೀರ್ಮಾನವಾಗಿದ್ದ ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಗೆ ಶಿಫ್ಟ್‌ ಮಾಡುವ ಮೂಲಕ ಹಳೆ ಮೈಸೂರು ಭಾಗದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲಾಭ ಎತ್ತುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಲಿದೆ.

ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಅದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತುವಂತೆ ಮಾಡುವ ಪ್ರಯತ್ನವನ್ನು ಕಾಂಗ್ರೆಸ್‌ ಸರ್ಕಾರ ನಡೆಸಿದೆ. ಈ ಮೂಲಕ ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಂದಿರುವ ಕಾಂಗ್ರೆಸ್‌ ಪರ ಫಲಿತಾಂಶವನ್ನು ಲೋಕಸಭೆಗೂ ವಿಸ್ತರಿಸಲು ಪ್ರಯತ್ನ ನಡೆದಿದೆ.

Exit mobile version