ಬಳ್ಳಾರಿ: ರಾಜ್ಯದಲ್ಲಿ ಈಗ ಅರ್ಜಿ ಸಲ್ಲಿಕೆ ಸುಗ್ಗಿ. ಕಾಂಗ್ರೆಸ್ ಸರ್ಕಾರದ (Congress Guarantee) ಪಂಚ ಗ್ಯಾರಂಟಿಗಳಿಗೆ ಸಂಬಂಧಿಸಿ ಪ್ರತಿಯೊಂದಕ್ಕೂ ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಎಲ್ಲರೂ ದಾಖಲೆ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಎಲ್ಲರ ಗಮನ ಸೆಳೆದಿರುವ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ (Gruhalakshmi scheme) ನೋಂದಣಿಗಂತೂ ಮಹಿಳೆಯರು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದರ ನಡುವೆಯೇ ಈ ಅರ್ಜಿ ಸಲ್ಲಿಕೆಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವವರೂ ಹುಟ್ಟಿಕೊಂಡಿದ್ದಾರೆ. ಬಳ್ಳಾರಿಯ ವಿವಿಧೆಡೆ ಈ ವಂಚಕರು ಮಹಿಳೆಯರಿಂದ ಅರ್ಜಿ ಸಲ್ಲಿಕೆ ಹೆಸರಲ್ಲಿ 150 ರೂ. ವಸೂಲಿ ಮಾಡಿದ ಪ್ರಸಂಗ ನಡೆದಿದೆ.
ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ (Gruhalakshmi scheme)ಯನ್ನು ಆಗಸ್ಟ್ 17 ಅಥವಾ 18ರಂದು ಉದ್ಘಾಟನೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಹೇಳಿದ್ದಾರೆ. ಈ ಯೋಜನೆಯ ಅರ್ಜಿ ಸಲ್ಲಿಕೆ ಜೂನ್ 16ರಿಂದ ಆರಂಭವಾಗಬೇಕಾಗಿದ್ದು, ತಾಂತ್ರಿಕ ಕಾರಣಗಳಿಂದ ಮುಂದಕ್ಕೆ ಹೋಗಿದೆ. ಸರ್ಕಾರಿ ಸೇವಾ ಸಿಂಧು ಪೋರ್ಟಲ್ ಜತೆಗೆ ಒಂದು ವಿಶೇಷ App ಮೂಲಕ ನೋಂದಣಿ ಮಾಡಿಸಲು ಅವಕಾಶ ನೀಡಲು ಎಲ್ಲ ವ್ಯವಸ್ಥೆ ಸಿದ್ಧವಾಗಿದೆ. ಜೂನ್ 28ರಂದು ಸಂಪುಟ ಸಭೆಯ ಬಳಿಕ ಇದನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಹೇಳಿದ್ದರು. ಆದರೆ, ಇನ್ನೂ ಬಿಡುಗಡೆ ಆಗಿಲ್ಲ. ಇಷ್ಟರ ನಡುವೆಯೇ ಗೃಹಲಕ್ಷ್ಮಿ ಯೋಜನೆ ನೋಂದಣಿ ಹೆಸರಿನಲ್ಲಿ ವಂಚನೆ ಮಾಡುವ ತಂಡಗಳು, ಏಜೆನ್ಸಿಗಳು ಹುಟ್ಟಿಕೊಂಡಿವೆ.
ಬಳ್ಳಾರಿ ನಗರದಲ್ಲಿ ಕೆಲವು ಯುವಕರು ಗೃಹಲಕ್ಷ್ಮಿ ಯೋಜನೆ ಅರ್ಜಿ ಭರ್ತಿ ಮಾಡಿಸುವ ಹೆಸರಿನಲ್ಲಿ ನೂರಾರು ಜನರಿಂದ ಹಣ ವಸೂಲಿ ಮಾಡಿದ್ದಾರೆ. ಏಜೆನ್ಸಿಯೊಂದರ ಹೆಸರಿನಲ್ಲಿ ಮನೆ ಮನೆಗೂ ಭೇಟಿ ನೀರಿ ಅರ್ಜಿಯಲ್ಲಿ ಹೆಸರು ಮತ್ತು ಇತರ ಮಾಹಿತಿಗಳನ್ನು ದಾಖಲಿಸಿಕೊಂಡಿದ್ದಾರೆ.
ನಿಜವೆಂದರೆ, ಗೃಹ ಲಕ್ಷ್ಮಿ ಯೋಜನೆಯ ಅಪ್ಲಿಕೇಶನೇ ಇನ್ನೂ ಬಿಡುಗಡೆ ಆಗಿಲ್ಲ. ಅರ್ಜಿ ಯಾವ ರೀತಿ ಇರುತ್ತದೆ ಎನ್ನುವುದರ ಸ್ಪಷ್ಟತೆ ಇಲ್ಲ. ಯಾವ ಯಾವ ವಿವರಗಳು ಬೇಕು ಎನ್ನುವ ನಿಖರತೆಯೂ ಇಲ್ಲ. ಹೀಗಿರುತ್ತಲೇ ಬಳ್ಳಾರಿ ನಗರದಲ್ಲಿ ಕೆಲವರು ಅರ್ಜಿಯೊಂದನ್ನು ಹಿಡಿದುಕೊಂಡು ಬಂದು ಅದರಲ್ಲಿ ಮಾಹಿತಿಗಳನ್ನು ಸಂಗ್ರಹಿಸುವುದರ ಜತೆಗೆ ಒಂದು ಅರ್ಜಿ ತುಂಬಿದ್ದಕ್ಕೆ 150 ರೂ. ಪಡೆಯುತ್ತಿದ್ದರು.
ಬಳ್ಳಾರಿಯ ವಿವಿಧೆಡೆ ಮಹಿಳೆಯರಿಂದ ವಸೂಲಿ ಮಾಡಿದ ಮಾಡಿದ ಖಾಸಗಿ ಏಜೆನ್ಸಿಯ ಯುವಕರನ್ನು ತಡೆದು ಬಳ್ಳಾರಿಯ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ದಿಶಾ ಒನ್ ಎಂಬ ಹೆಸರಿನ ಖಾಸಗಿ ಏಜೆನ್ಸಿಯವರು ಗೃಹ ಲಕ್ಷ್ಮೀ, ಗೃಹ ಜ್ಯೋತಿ ಸೇರಿದಂತೆ ಇತರೆ ಸ್ಕೀಂ ಫಾರಂ ತುಂಬುತ್ತೇವೆಂದು ಹಣ ಸಂಗ್ರಹ ಮಾಡಿದ್ದಾರೆ. ಹೀಗೆ ಹಣ ಪೀಕಿದವರನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಏಜೆನ್ಸಿಯವರು ಹೇಳುವುದೇನು?
ದಿಶಾ ಸಂಸ್ಥೆಯ ಯುವಕರನ್ನು ನಿಲ್ಲಿಸಿ ಪ್ರಶ್ನಿಸಿದಾಗ, ನಾವು ಇಲ್ಲಿ ಅರ್ಜಿಗಳನ್ನು ತುಂಬಿಕೊಂಡು ಹೋಗಿ ಗ್ರಾಮ ಒನ್‌ನಲ್ಲಿ ಅಪ್‌ಲೋಡ್ ಮಾಡುತ್ತೇವೆ ಎಂಬ ಉತ್ತರ ನೀಡಿದ್ದಾರೆ. ಇನ್ನೂ ಅರ್ಜಿಯೇ ಬಿಡುಗಡೆ ಆಗಿಲ್ಲವಲ್ಲ ಎಂದು ಕೇಳಿದಾಗ, ಸಂಪುಟ ಸಭೆಯ ನಂತರ ಬಿಡುಗಡೆಯಾಗುತ್ತದೆ ಎಂಬ ಸಬೂಬು ಹೇಳಿದ್ದಾರೆ.
ವಂಚನೆಗೆ ಒಳಗಾಗಬೇಡಿ, ಅರ್ಜಿ ಸಲ್ಲಿಕೆ ಫುಲ್ ಫ್ರೀ
ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಸರ್ಕಾರ ಅರ್ಜಿ ಮಾದರಿಯನ್ನು ಬಿಡುಗಡೆ ಮಾಡಲಿದೆ, ಅರ್ಜಿ ತುಂಬುವಾಗ ಬೇಕಾದ ಮಾಹಿತಿಯ ವಿವರವನ್ನು ಸದ್ಯವೇ ನೀಡಲಿದೆ.
ಒಮ್ಮೆ ಸೇವಾ ಸಿಂಧು ಪೋರ್ಟಲ್ ಮತ್ತು ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆಗೆಂದೇ ವಿಶೇಷವಾಗಿ ರೂಪಿಸಲಾದ App ಬಿಡುಗಡೆಯಾದ ನಂತರ ಮೊಬೈಲ್, ಕಂಪ್ಯೂಟರ್ ಬಳಸಿ ನೇರವಾಗಿ ಜನರೇ ಅರ್ಜಿಯನ್ನು ತುಂಬಿಸಬಹುದು.
ಇದರ ಜತೆಗೆ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಕಚೇರಿಗಳಲ್ಲಿ ಅರ್ಜಿ ತುಂಬಲು ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಒಂದು ವೇಳೆ ಯಾರಾದರೂ ಸೈಬರ್ ಸೆಂಟರ್‌ಗಳಲ್ಲಿ, ಖಾಸಗಿ ಏಜೆನ್ಸಿಗಳಲ್ಲಿ ಅರ್ಜಿ ತುಂಬಿಸಿಕೊಳ್ಳುವುದಿದ್ದರೂ 20 ರೂ.ಗಳಿಗಿಂತ ಹೆಚ್ಚು ಶುಲ್ಕ ವಿಧಿಸಬಾರದು ಎಂದು ಸರ್ಕಾರವೇ ಹೇಳಿದೆ.
ಇನ್ನೂ ಕೂಡಾ ಗೃಹಲಕ್ಷ್ಮಿ ಯೋಜನೆಯ App ಬಿಡುಗಡೆಯಾಗಿಲ್ಲ. ಅದು ಅಧಿಕೃತವಾಗಿ ಬಿಡುಗಡೆಯಾದ ಬಳಿಕವೇ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: Gruhalakshmi Scheme: ಅರ್ಜಿ ಸಲ್ಲಿಸಲು ಗೃಹಲಕ್ಷ್ಮಿ App ರೆಡಿ; ದಾಖಲೆ ರೆಡಿ ಮಾಡಿಕೊಳ್ಳಿ