ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಗೆ (Gruha lakshmi scheme) ಅರ್ಜಿ ಸ್ವೀಕರಿಸಲು ದಿನ ನಿಗದಿಯಾಗಿದೆ. ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ. ಜಮಾ ಮಾಡುವ ಈ ಯೋಜನೆಗೆ ಜುಲೈ 19ರಿಂದ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ. ರಾಜ್ಯದಲ್ಲಿ 1.28 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಲಾಭ ಸಿಗಲಿದೆ.
ಹಾಗಿದ್ದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for Gruhalakshmi scheme) ಯಾರಿಗೆ ಅರ್ಹತೆ ಇದೆ (who are Eligible for Gruhalakshmi scheme) ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ.
ಗಮನದಲ್ಲಿ ಇಟ್ಟುಕೊಳ್ಳಬೇಕಾದ ಪ್ರಧಾನ ಅಂಶಗಳು
- ಗೃಹಲಕ್ಷ್ಮಿ ಯೋಜನೆಗೆ ಗೃಹಜ್ಯೋತಿಯಂತೆ ನಾವೇ ಸ್ವತಃ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಆಗುವುದಿಲ್ಲ.
- ಸರ್ಕಾರ ನಿಗದಿಪಡಿಸಿದ ಕೇಂದ್ರಗಳಲ್ಲಿ, ನಿಗದಿಪಡಿಸಿದ ದಿನ ಮಾತ್ರ ಅರ್ಜಿ ಸ್ವೀಕಾರ ನಡೆಯುತ್ತದೆ.
- ನಿಗದಿಪಡಿಸಿದ ದಿನದಂದು ಎಲ್ಲ ದಾಖಲೆಗಳೊಂದಿಗೆ ತೆರಳಿ ಅರ್ಜಿ ನೀಡಬೇಕಾಗುತ್ತದೆ.
- ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಖುದ್ದಾಗಿ ಹೋಗಿ ಅರ್ಜಿ ಸಲ್ಲಿಸಬೇಕು.
- ಈ ಕೇಂದ್ರಗಳ ಸೌಲಭ್ಯಗಳು ಇಲ್ಲದಿದ್ದ ಭಾಗದಲ್ಲಿ ಜನಪ್ರತಿನಿಧಿಗಳು ಮನೆ ಮನೆಗೆ ಹೋಗಿ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
- ನೀವು ಯಾವಾಗ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ನೀವು ನಿರ್ಧರಿಸುವಂತಿಲ್ಲ. ಇಲಾಖೆ ದಿನ ನಿಗದಿ ಮಾಡಿ ನಿಮ್ಮ ನೋಂದಾಯಿತ ಮೊಬೈಲ್‌ಗೆ ಸ್ಥಳ, ದಿನಾಂಕ, ಸಮಯದ ಮಾಹಿತಿಯನ್ನು ನೀಡುತ್ತದೆ.
ಅರ್ಜಿ ಸಲ್ಲಿಕೆ ಸಲ್ಲಿಕೆ ಎಲ್ಲಿ ಮತ್ತು ಹೇಗೆ?
ರಾಜ್ಯಾದ್ಯಂತ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲು ಅನುಮತಿ ನೀಡಲಾಗಿದೆ. ಈ ಕೇಂದ್ರಗಳಿಗೆ ತೆರಳಿ ನೀವು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು. ಆದರೆ, ನಮ್ಮ ಮನಸ್ಸಿಗೆ ಬಂದ ದಿನ, ನನಗೆ ಇವತ್ತು ರಜೆ ಇದೆ ಹೋಗುತ್ತೇನೆ ಎಂದು ಹೊರಟರೆ ಆಗುವುದಿಲ್ಲ. ಒಂದು ಕೇಂದ್ರಕ್ಕೆ ಒಂದು ದಿನಕ್ಕೆ 60 ಜನರ ಪಟ್ಟಿಯನ್ನು ತಯಾರಿಸಿ ಇಂಥವರು ಇಂಥ ದಿನ, ಈ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಸಿದ್ಧಪಡಿಸಲಾಗುತ್ತದೆ. ನಿರ್ದಿಷ್ಟ ವ್ಯಕ್ತಿಗೆ ಯಾವ ದಿನಾಂಕದಂದು ಅರ್ಜಿ ಸಲ್ಲಿಕೆಗೆ ಅವಕಾಶ ಎಂಬುದನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾಹಿತಿ ಕಳುಹಿಸಲಾಗುತ್ತದೆ.
-ಯಾವ ಕೇಂದ್ರ, ಯಾವ ದಿನ, ಯಾವ ಸಮಯಕ್ಕೆ ನೋಂದಣಿಗೆ ಅವಕಾಶ ಎಂದು ತಿಳಿದ ಮೇಲೆ ಆ ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿರಬೇಕು. ಒಂದು ಕೇಂದ್ರದಲ್ಲಿ ಬೆಳಗ್ಗೆ 30 ಮಂದಿ, ಮಧ್ಯಾಹ್ನದ ನಂತರ 30 ಮಂದಿ ಅರ್ಜಿ ಸಲ್ಲಿಸಲು ಅವಕಾಶವಿದೆ.
-ಯಾವುದೇ ಕಾರಣಕ್ಕೂ ಸರ್ವರ್ ಮೇಲೆ ಒತ್ತಡ ಆಗಬಾರದು, ಕೇಂದ್ರಗಳ ಮೇಲೆ ಒತ್ತಡ ಆಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ನೀವು ಬೆಳಗ್ಗೆ ಐದು ಗಂಟೆ, ಆರು ಗಂಟೆಗೆ ಎದ್ದು ಹೋಗಿ ಕ್ಯೂ ನಿಲ್ಲುವ ಪ್ರಮೇಯವೂ ಇರುವುದಿಲ್ಲ.
-ಒಂದು ವೇಳೆ ನಿಮಗೆ ನಿಗದಿ ಮಾಡಿದ ಸಮಯದಲ್ಲಿ ಅರ್ಜಿ ಸಲ್ಲಿಸಲು ವಿಫಲವಾದರೆ ಅಲ್ಲಿ ಹೋಗಿ ಸಿಬ್ಬಂದಿ ಮೇಲೆ ಒತ್ತಡ ಹಾಕುವಂತಿಲ್ಲ. ಟೈಮ್ ಮಿಸ್ ಮಾಡಿಕೊಂಡವರಿಗೆ ಅದೇ ದಿನ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ನೋಂದಣಿಗೆ ಅವಕಾಶ ಇರುತ್ತದೆ.
ಗೃಹ ಲಕ್ಷ್ಮಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
- ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವವರು ಹಣ ಪಡೆಯಲು ಅರ್ಜಿ ಸಲ್ಲಿಸಬಹುದು.
- ಆದರೆ ಅರ್ಜಿ ಸಲ್ಲಿಸುವವರು ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು, ಜಿಎಸ್‌ಟಿ ಕಟ್ಟುವವರೂ ಆಗಿರಬಾರದು. ತಾವು ಆದಾಯ ತೆರಿಗೆ/ಜಿಎಸ್‌ಟಿ ಕಟ್ಟುತ್ತಿಲ್ಲ ಎಂದು ಘೋಷಣೆ ಮಾಡಬೇಕಾಗುತ್ತದೆ.
- ನೀವು ಅರ್ಜಿ ಸಲ್ಲಿಸಲು ಹೋಗುವಾಗ ಪಡಿತರ ಚೀಟಿ, ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು), ಆಧಾರ್ ನಂಬರ್‌ಗೆ ಲಿಂಕ್ ಆಗಿರುವ ಮೊಬೈಲ್‌ನ್ನು ಹಿಡಿದುಕೊಂಡು ಹೋಗಬಹುದು.
- ಒಂದು ವೇಳೆ ಆಧಾರ್ ಲಿಂಕ್ ಆಗಿರದ ಖಾತೆಗೆ ಹಣ ಬರಬೇಕು ಎಂದರೆ ಬೇರೆ ಪಾಸ್‌ಬುಕ್ ಕೂಡಾ ಕೊಡಬಹುದು. (ಆ ಪಾಸ್‌ಬುಕ್ ಅನ್ನು ಸಾಫ್ಟ್‌ವೇರ್ ನಲ್ಲಿ ಅಪ್ ಲೋಡ್ ಮಾಡಿದ ಬಳಿಕ ಅದು ಸಿಡಿಪಿಒ, ತಹಶೀಲ್ದಾರ್, ತಾಲೂಕ್ ಪಂಚಾಯತ್ ಇಒಗಳ ಲಾಗಿನ್‌ಗೆ ಮಾಹಿತಿ ಹೋಗಲಿದ್ದು, ಈ ಪಾಸ್‌ಬುಕ್ ಪಡಿತರ ಚೀಟಿಯಲ್ಲಿರುವ ಮನೆಯ ಮುಖ್ಯಸ್ಥೆಯ ಜೊತೆ ಹೊಂದಾಣಿಕೆಯಾದರೆ ಅಲ್ಲಿ ಆರ್ಡರ್ ಕಾಪಿ ಕೊಡಲಾಗುವುದು. ಸಿಡಿಪಿಒ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ತಲುಪಿಸಲಾಗುವುದು).
ಅರ್ಜಿ ಸಲ್ಲಿಕೆಯ ಎರಡನೇ ವಿಧಾನ ಜನಪ್ರತಿನಿಧಿ
ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗುವುದು ಒಂದು ವಿಧಾನವಾದರೆ ಎರಡನೆಯರು ಪ್ರಜಾಪ್ರತಿನಿಧಿಗಳು ನೇರವಾಗಿ ನಿಮ್ಮ ಮನೆಗೆ ಬಂದು ನೋಂದಣಿ ಮಾಡಿಕೊಳ್ಳುವುದು.
ಫಲಾನುಭವಿಗಳ ಅರ್ಜಿ ನೋಂದಣಿ ಪ್ರಕ್ರಿಯೆ ಸುಲಭವಾಗಿಸಲು ಪ್ರಜಾಪ್ರತಿನಿಧಿ ಎಂದು ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರನ್ನು ನೇಮಕ ಮಾಡಲಾಗುತ್ತದೆ. 1000 ಜನಸಂಖ್ಯೆ ಇದ್ದಾಗ ಇಬ್ಬರು (ಒಬ್ಬರು ಮಹಿಳೆ, ಒಬ್ಬರು ಪುರುಷ) ನೇಮಕ ಮಾಡಲಾಗುತ್ತದೆ. ಮನೆ ಬಾಗಿಲಿಗೆ ತೆರಳಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದು, ನೋಂದಣಿ ಪ್ರಕ್ರಿಯೆಗೆ ಸಹಾಯ ಮಾಡಲಿದ್ದಾರೆ. ಇದು ಗ್ರಾಮ ಒನ್ ಕೇಂದ್ರಗಳಿಂದ ದೂರ ಇರುವ, ಕೇಂದ್ರಗಳಿಗೆ ಬರಲಾಗದವರಿಗೆ ಸಹಾಯ ಮಾಡಲು ಇರುವ ವ್ಯವಸ್ಥೆ.
ನೋಂದಾಯಿಸಿದ್ದರ ಅಧಿಕೃತ ದಾಖಲೆ ಸಿಗಲಿದೆ
- ನೀವು ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡರೆ ಕೂಡಲೇ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆ. ಜತೆಗೆ ತಕ್ಷಣವೇ ಮೊಬೈಲ್‌ಗೆ ಸಂದೇಶ ಬರುತ್ತದೆ.
- ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿಕೊಂಡರೆ ಮಂಜೂರಾತಿ ಪತ್ರವನ್ನು ನಂತರ ಮನೆಗೆ ಕಳುಹಿಸಲಾಗುತ್ತದೆ.
- ಒಂದೊಮ್ಮೆ ಕೇಂದ್ರಗಳಿಗೆ ಹೋಗಿ ಅರ್ಜಿ ನೀಡಿದ್ದರೂ, ಆಧಾರ್‌ಗೆ ಲಿಂಕ್ ಆಗದ ಬೇರೆ ಖಾತೆಗೆ ಹಣ ಹಾಕಬೇಕು ಎಂದಾದಲ್ಲಿ ಅದರ ಪರಿಶೀಲನೆ ಕಾರ್ಯ ತಾಲೂಕು ಮಟ್ಟದಲ್ಲಿ ನಡೆಯಬೇಕು. ಹೀಗಾಗಿ, ಮಂಜೂರಾತಿ ಸಿಡಿಪಿಒ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಮನೆಗೆ ತಲುಪಿಸಲಾಗುತ್ತದೆ.
ನೀವು ಯಾರಿಗೂ ಒಂದು ನಯಾಪೈಸೆ ಕೊಡಬೇಕಾಗಿಲ್ಲ
ಗಮನಿಸಿ, ಈ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಕೆ ವೇಳೆ ಯಾವುದೇ ಶುಲ್ಕವನ್ನು ಪಾವತಿಸಬಾರದು. ಈ ನೋಂದಣಿ ಪ್ರಕ್ರಿಯೆ ಸಂಪೂರ್ಣ ಉಚಿತ. ಅರ್ಜಿ ಸಲ್ಲಿಸಲು ಯಾರಾದರೂ ಹಣ ಕೇಳಿದರೆ ಸಿಡಿಪಿಒಗಳ ಗಮನಕ್ಕೆ ತರುವಂತೆ ಕೋರಲಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿರುವಂತೆ, ಈ ಯೋಜನೆಗೆ ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗದಿಪಡಿಸಿಲ್ಲ. ಇದೊಂದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಹೀಗಾಗಿ ಒಂದು ವೇಳೆ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದರೆ ಮುಂದೆ ಒಂದು ಸುತ್ತಿನ ಅಭಿಯಾನ ಮುಗಿದ ಬಳಿಕ ಯಾವುದೇ ದಿನಾಂಕ/ಸಮಯದಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ನನಗೆ ಸಂದೇಶ ಬಂದಿಲ್ಲ ಅಂದರೆ ಏನು ಮಾಡಬೇಕು?
ನೀವು ಯಾವಾಗ, ಎಲ್ಲಿ, ಯಾವ ಸಮಯಕ್ಕೆ ನೋಂದಣಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಿಮ್ಮ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಒಂದು ವೇಳೆ ನಿಮಗೆ ಸಂದೇಶ ಬಾರದೆ ಇದ್ದರೆ ನೀವು 1092ಕ್ಕೆ ಕಾಲ್ ಮಾಡಿ ಇಲ್ಲವೇ 8147500500 ನಂಬರ್‌ಗೆ SMS ಮಾಡಿ ಮಾಹಿತಿಯನ್ನು ಪಡೆಯಬಹುದು.
ನಿಮ್ಮ ಎಲ್ಲ ಗೊಂದಲ, ಸಮಸ್ಯೆಗಳಿಗೆ ಸಹಾಯವಾಣಿಗೆ ಕರೆ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ಏನೇ ಗೊಂದಲವಿದ್ದರೂ ಸಹಾಯವಾಣಿ ಸಂಖ್ಯೆ 1902ಗೆ ಕರೆ ಮಾಡಿ ಗೊಂದಲ ಬಗೆಹರಿಸಿಕೊಳ್ಳಬಹುದು. ಅಥವಾ ಮೊಬೈಲ್ ಸಂಖ್ಯೆ: 8147500500ಗೆ ಎಸ್ಎಂಎಸ್ ಮಾಡಬಹುದು.
ಇದನ್ನೂ ಓದಿ: Gruha Lakshmi Scheme : ಜು. 19ಕ್ಕೆ ಗೃಹಲಕ್ಷ್ಮಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಬರಲ್ಲ ಹೈಕಮಾಂಡ್