Site icon Vistara News

Guarantee Scheme: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 50 ಸಾವಿರ ರೂ. ಕೊಡಲೂ ಸರ್ಕಾರದಲ್ಲಿ ಹಣವಿಲ್ಲ?

CM Siddaramaiah infront of vidhanasouda

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಸೇರಿದಂತೆ ಕಾಂಗ್ರೆಸ್‌ ಸರ್ಕಾರದವರು (Congress Government) ಅನುದಾನದ ಕೊರತೆ ಇಲ್ಲ ಎಂದು ಹೇಳಿಕೊಳ್ಳುತ್ತಲೇ ಬರುತ್ತಿದ್ದರೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದಾಗಿ (Congress Guarantee Scheme) ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಕಾರಣ, ಕೋವಿಡ್‌ನಿಂದ (Covid 19) ಮೃತಪಟ್ಟ ಕುಟುಂಬದ ವಾರಸುದಾರರಿಗೆ 50 ಸಾವಿರ ರೂಪಾಯಿ ಪರಿಹಾರ ವಿತರಿಸಲು ಅನುದಾನ ಕೊರತೆ ಇರುವುದು ಈಗ ಬಹಿರಂಗವಾಗಿದೆ.

ಜನವರಿ ಮೊದಲನೇ ವಾರದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠಗಳು ಆದೇಶ ಹೊರಡಿಸಿವೆ. ಆದರೆ, 850 ಪ್ರಕರಣಗಳಲ್ಲಿ ಪರಿಹಾರ ವಿತರಿಸಲು ಸರ್ಕಾರದ ಬಳಿ ಅನುದಾನ ಲಭ್ಯವಿಲ್ಲ ಎಂದು ಗೊತ್ತಾಗಿದೆ. ಇದೀಗ ಸಾಕಷ್ಟು ವಿವಾದ, ವಿರೋಧಕ್ಕೆ ಕಾರಣವಾಗಿದೆ. ‌

no covid fund by government letter

ಇದನ್ನೂ ಓದಿ: Murder Case: ತಲೆ ಮೇಲೆ ಕಲ್ಲು ಹಾಕಿ, ಬೆಂಕಿ ಹಚ್ಚಿ ಕೊಲೆ! ಅನೈತಿಕ ಸಂಬಂಧ ಕಾರಣವೇ?

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಹಣ ಇಲ್ಲದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. 2023ರಲ್ಲಿ ಕೋವಿಡ್‌ಗೆ ಮೃತಪಟ್ಟವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ ಅನುದಾನದಿಂದ ಪರಿಹಾರ ನೀಡಬೇಕು. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಒಟ್ಟು 10 ಕೋಟಿ ರೂಪಾಯಿ ಪರಿಹಾರ ನೀಡಬೇಕಿದೆ. ಆದರೆ, 10 ಕೋಟಿ ರೂಪಾಯಿ ಅನುದಾನ ಇಲ್ಲ ಎಂದು ಪತ್ರ ಬರೆದು ತಿಳಿಸಲಾಗಿದೆ.

ಸಾಕಷ್ಟು ಅರ್ಜಿ ಸಲ್ಲಿಕೆ

ಈಗಾಗಲೇ ಸಾಕಷ್ಟು ಜನ ಹಣ ಪಾವತಿಗೆ ಕರೆ ಮಾಡಿದ್ದಲ್ಲದೆ, ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಪರಿಹಾರ ನೀಡಲು ಹಣವಿಲ್ಲವೆಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆಯಲಾಗಿದೆ.

ಗ್ಯಾರಂಟಿ ಯೋಜನೆಗಳ ಎಫೆಕ್ಟ್?‌

ರಾಜ್ಯ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳಿಗಾಗಿ ಅನುದಾನ ಒದಗಿಸಲು ಪರದಾಟ ನಡೆಸುತ್ತಿದೆ. ಇದಕ್ಕಾಗಿ ಕಳೆದ ಆರ್ಥಿಕ ವರ್ಷದಲ್ಲಿ ಸರಿಸುಮಾರು 37 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಹೊಂದಿಸಬೇಕಿದೆ. ಇನ್ನು ಮುಂದಿನ ಆರ್ಥಿಕ ವರ್ಷದಿಂದ ಅಂದಾಜು 52 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಬೇಕಿದೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ಪರದಾಡುತ್ತಿರುವ ರಾಜ್ಯ ಸರ್ಕಾರವು, ಇತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಈಗ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಪರಿಹಾರ ನೀಡಲು ಹಣ ಇಲ್ಲ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದಿದೆ.

ಹೀಗಾಗಿ ಸರ್ಕಾರದ ಬಳಿ ಹಣ ಇಲ್ಲವೇ ಎಂಬ ಚರ್ಚೆ ಹುಟ್ಟಿಕೊಂಡಿದೆ. ಅಲ್ಲದೆ, ಈಗ ವಿರೋಧ ಪಕ್ಷಗಳು ಈ ಬಗ್ಗೆ ಆಕ್ರೋಶವನ್ನು ಹೊರಹಾಕಿವೆ. ಕಾಂಗ್ರೆಸ್‌ ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಕೋವಿಡ್‌ನಿಂದ ಮೃತಪಟ್ಟವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಿ ಎಂದು ಆಗ್ರಹಿಸಿತ್ತು. ಈಗ ಅಧಿಕಾರದಲ್ಲಿದ್ದು, 50 ಸಾವಿರ ರೂಪಾಯಿ ಹಣ ನೀಡಲೂ ಆಗುವುದಿಲ್ಲವೇ ಎಂದು ಪ್ರತಿಪಕ್ಷಗಳು ಪ್ರಶ್ನೆ ಮಾಡುತ್ತಿವೆ.

ಜನವರಿ ಮೊದಲನೇ ವಾರದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠಗಳು ಆದೇಶವನ್ನು ಹೊರಡಿಸಿರುವುದರಿಂದ ಸರ್ಕಾರ ಪರಿಹಾರವನ್ನು ವಿತರಣೆ ಮಾಡುವುದು ಅನಿವಾರ್ಯವಾಗಿದೆ. ನಿಗದಿತ ಅವಧಿಯಲ್ಲಿ ಪರಿಹಾರವನ್ನು ವಿತರಿಸಲು ಸಾಧ್ಯವಾಗದೇ ಹೋದಲ್ಲಿ ನ್ಯಾಯಾಂಗ ನಿಂದನೆ ಭೀತಿಯನ್ನು ಎದುರಿಸಬೇಕಿದೆ.

ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ: ಕೃಷ್ಣ ಬೈರೇಗೌಡ

ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣ ಬೈರೇಗೌಡ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಅನುದಾನ ಇಲ್ಲ ಎಂಬ ಪತ್ರ ಬಂದಿರಬಹುದು. ನನ್ನ ಇಲಾಖೆಯಲ್ಲಿ ಕೋವಿಡ್‌ಗೆ ಅನುದಾನ ಮೀಸಲಿದೆ. ಕೋವಿಡ್‌ಗಾಗಿಯೇ ಮೀಸಲಿಟ್ಟ 10 ಕೋಟಿ ರೂಪಾಯಿ ನನ್ನ ಇಲಾಖೆಯಲ್ಲಿಯೇ ಇದೆ. ಹೀಗಾಗಿ ಏನಾಗಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇನೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದ ಹೇಳಿದ್ದಾರೆ.

ಇದನ್ನೂ ಓದಿ: Hanuman Flag: ಧ್ವಜಸ್ತಂಭವನ್ನು ನಿರ್ಮಿಸಿದ್ದೇ ಹನುಮಾನ್‌ ಧ್ವಜ ಹಾರಿಸಲು; ಕಾಂಗ್ರೆಸ್‌ ಜನರ ಕ್ಷಮೆ ಕೇಳಲಿ: ವಿಜಯೇಂದ್ರ

ಇಂತಹ ಸರ್ಕಾರ ಇರಬೇಕಾ?: ಅಶ್ವತ್ಥನಾರಾಯಣ್‌ ಪ್ರಶ್ನೆ

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌, ಕೋವಿಡ್‌ನಲ್ಲಿ ಸೋಂಕಿತರಾಗಿ ಮೃತರಾದವರಿಗೆ ಪರಿಹಾರ ಕೊಡಲು ಸರ್ಕಾರದವರು ಹಣ ಇಲ್ಲ ಅಂತಾರೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಹಣ ಇಲ್ಲ ಅಂತಾರೆ. ಬರ ಪರಿಹಾರ ಇಲ್ಲ, ಆತ್ಮಹತ್ಯೆಗೆ ಹಣ ಇಲ್ಲ. ಈಗ ಕೋವಿಡ್‌ನಿಂದ ಮೃತಪಟ್ಟವರಿಗೂ ಹಣ ಇಲ್ಲ. ನಮಗೆ ಒಂದು ಅವಕಾಶ ಕೊಡಿ, ಅವಕಾಶ ಕೊಡಿ ಅಂತ ಕೇಳಿದ್ದರು. ಅವಕಾಶ ಕೊಟ್ಟಿದ್ದಕ್ಕೆ ಹೀಗೆ ಮಾಡಿದ್ದಾರೆ. ಇಂತಹ ಸರ್ಕಾರ ಇರಬೇಕಾ? ಎಂದು ಪ್ರಶ್ನೆ ಮಾಡಿದರು.

Exit mobile version