ಹಾಸನ: ರಾಜ್ಯಸಭೆ ಚುನಾವಣೆ ಇರಬಹುದು, ವಿಧಾನಪರಿಷತ್ ಚುನಾವಣೆ ಇರಬಹುದು, ಹೆಜ್ಜೆಹೆಜ್ಜೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಇ.ಡಿ. ವಿಚಾರಣೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಅರ್ಧ ಗಂಟೆಯಲ್ಲಿ ನಡೆಸಬಹುದಾದ ವಿಚಾರಣೆಗೆ ಐದು ದಿನ ತೆಗೆದುಕೊಳ್ಳುತ್ತಿರುವುದು ಏತಕ್ಕೆ? ಎಂದು ಹಾಸನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ರಾಹುಲ್ ಗಾಂಧಿ ಅವರ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ನಿರಂತರವಾಗಿ ವಿಚಾರಣೆಗೆ ಕರೆಯುತ್ತಿದ್ದಾರೆ. ವಿಚಾರಣೆ ಮಾಡಲು ಐದು ದಿನಗಳು ಬೇಕಾ? ಎಲ್ಲಾ ದಾಖಲಾತಿಗಳೂ ಇಡಿ ಬಳಿಯೇ ಇರುತ್ತವೆ. ಅರ್ಧ ಗಂಟೆಯಲ್ಲೇ ಎಲ್ಲಾ ವಿಚಾರಣೆ ಮಾಡಿ ಮುಗಿಸಬಹುದು.
ಇದನ್ನೂ ಓದಿ | ಶ್ರೀನಿವಾಸಗೌಡಗೆ ಮಾನ ಮರ್ಯಾದೆ ಇಲ್ಲ: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
ರಾಹುಲ್ ಗಾಂಧಿ ಅವರಿಗೆ ಕಿರಿಕುಳ ನೀಡುವ ದುರುದ್ದೇಶದಿಂದ ಈ ರೀತಿ ವಿಚಾರಣೆ ಮಾಡುತ್ತಿದ್ದಾರೆ. ಸುಬ್ರಹ್ಮಣ್ಯಂ ಸ್ವಾಮಿ ದೂರು ನೀಡಿದರು ಎಂದು ತನಿಖೆ ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸ್ವತಃ ಪ್ರಧಾನಿಗಳಿಗೇ ಪತ್ರ ಬರೆದು 40% ಕಮಿಷನ್ ಬಗ್ಗೆ ದೂರಿದ್ದರು. ಈ ಬಗ್ಗೆ ಯಾಕೆ ಇಲ್ಲಿಯವರೆಗೆ ತನಿಖೆ ನಡೆಸಲಿಲ್ಲ ಎಂದು ಪ್ರಶ್ನೆ ಮಾಡಿದರು.
ಕೇವಲ ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಲಾಗುತ್ತಿದೆ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಇದರಿಂದ ಏನು ಸಂದೇಶ ಕೊಡೋಕೆ ಕರೆಯುತ್ತಿದ್ದೀರಿ? ಜನರ ಮುಂದೆ ಒಂದು ವ್ಯವಸ್ಥಿತ ಅನುಮಾನ ಮೂಡಿಸುವ ಕೆಲಸ ಒಂದು ಭಾಗ, ಅವರನ್ನು ಹೆದರುಸೋದು ಇನ್ನೊಂದು ಬಾಗ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ. ಅದು ಬಿಟ್ಟು ದಿನಾ ಯಾಕೆ ಕಿರುಕುಳ ಕೊಡೋದು? ಎಂದಿದ್ದಾರೆ. ಇದ್ದಕ್ಕಿದ್ದಂತೆ ಕಾಂಗ್ರೆಸ್ ಕುರಿತು ಎಚ್‌ಡಿಕೆ ಸಾಫ್ಟ್ ಕಾರ್ನರ್ ಏಕೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ.
ಈದನ್ನೂ ಓದಿ | ಕೆರೆ ನುಂಗಿ ಹಾಕಿ ಮೇಕೆದಾಟು ಎಂದರೆ ಏನು ಪ್ರಯೋಜನ?: ಕುಮಾರಸ್ವಾಮಿ ಆಕ್ರೋಶ