ರಾಮನಗರ: 2023ರಲ್ಲಿ ತಂದೆ-ತಾಯಿ, ದೇವರ ಆಶೀರ್ವಾದದಿಂದ ನೂರಕ್ಕೆ ನೂರರಷ್ಟು ಜೆಡಿಎಸ್ ಸರ್ಕಾರ ರಚನೆ ಮಾಡುತ್ತೇವೆ. ಕನಕಪುರದ ಜನ ನಮ್ಮ ತಂದೆಯನ್ನು ರಾಜಕೀಯವಾಗಿ ಕಾಪಾಡಿದ್ದಾರೆ. ಎಲ್ಲ ಸಮಾಜಗಳ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ. ಅದಕ್ಕೂ ಮುನ್ನ ಕನಕಪುರದಲ್ಲಿ ಕಾರ್ಯಕರ್ತರ ಸಭೆ ಮಾಡಿ ಕ್ಷೇತ್ರದ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಕನಕಪುರದಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆ ಕನಕಪುರ ಕ್ಷೇತ್ರದಲ್ಲೂ ಬರುವಂತೆ ದಿನಾಂಕ ನಿಗದಿ ಮಾಡುತ್ತೇನೆ. ಕಾರ್ಯಕರ್ತರ ಶ್ರಮಕ್ಕೆ ಯಾವುದೇ ಕಾರಣಕ್ಕೂ ನೋವು ಕೊಡುವುದಿಲ್ಲ. 1985ರಲ್ಲಿ ಉಪಚುನಾವಣೆಯಲ್ಲಿ ದೇವೇಗೌಡರನ್ನು ಕಾರ್ಯಕರ್ತರೇ ಚುನಾವಣೆ ನಡೆಸಿ ಗೆಲ್ಲಿಸಿದರು. ಅಂದು ಇದ್ದ ಮುಖಗಳು ಇಂದೂ ಕೂಡ ನನಗೆ ಕಾಣಿಸುತ್ತಿವೆ. ದೇವೇಗೌಡರ ಜತೆಗಿನ ನಿಮ್ಮ ಸಂಬಂಧ ಐವತ್ತು ವರ್ಷಗಳದ್ದು, ನಿಮ್ಮ ಋಣ ನಮ್ಮ ಮೇಲಿದೆ. ಅವರನ್ನು ನಂಬಿ ಹಾಳಾಗಿದ್ದೇವೆ ಎನ್ನುವ ಭಾವನೆ ನಿಮ್ಮ ಕುಟುಂಬದಲ್ಲಿ ಬರದಂತೆ, ನಿಮ್ಮ ಮನೆಯ ಮಗನಾಗಿ ಋಣ ತೀರಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | ಮತಾಂತರವಾದವರಿಗೆ SCST ಮೀಸಲಾತಿ ಬೇಡ: ವಿಶ್ವ ಹಿಂದು ಪರಿಷತ್ ಆಗ್ರಹ
ಕಳೆದ ನಾಲ್ಕೈದು ವರ್ಷಗಳಿಂದ ರಾಜಕೀಯ ಸಮಸ್ಯೆಯಿಂದ ವ್ಯತ್ಯಾಸವಾಗಿದೆ. ಕನಕಪುರ ರಾಜ್ಯದಲ್ಲಿ ವಿಶೇಷವಾದ ಕ್ಷೇತ್ರ. ಇಲ್ಲಿ ನನ್ನ ಕಾರ್ಯಕರ್ತರು ಸಾಕಷ್ಟು ನೋವು ತಿಂದಿದ್ದಾರೆ. ಹೀಗಾಗಿದ್ದರೂ ಇಂದು ಉತ್ಸಾಹದಿಂದ ದೊಡ್ಡ ಸಂಖ್ಯೆಯಲ್ಲಿ ಸಭೆಗೆ ಸೇರಿದ್ದಾರೆ. ನಾವೆಲ್ಲ ಬದುಕಿದ್ದೇವೆ ಎಂದು ತೋರಿಸಿಕೊಟ್ಟಿದ್ದೀರಿ, ನಮ್ಮನ್ನು ಉಳಿಸಿಕೊಳ್ಳುತ್ತೀರೋ ಇಲ್ಲವೋ ಎನ್ನುವ ಪ್ರಶ್ನೆಯೊಂದಿಗೆ ನಿರ್ಧಾರದ ಸಂದೇಶ ನೀಡಲಿಕ್ಕೆ ಬಂದಿದ್ದೀರಿ ಎನ್ನಿಸುತ್ತದೆ. ಹೀಗಾಗಿ ನಿಮ್ಮಲ್ಲಿ ಕ್ಷಮೆಕೋರುತ್ತೇನೆ ಎಂದು ಹೇಳಿದರು.
ನನಗೆ ಇಷ್ಟವಿಲ್ಲದೆಯೂ ಕಳೆದ ಬಾರಿ ರಾಷ್ಟ್ರ ರಾಜಕಾರಣದ ಹಿನ್ನೆಲೆಯಲ್ಲಿ ಅನಿವಾರ್ಯ ಕಾರಣದಿಂದ ಒಪ್ಪಿಗೆ ಇಲ್ಲದ ಕೆಲಸ ಮಾಡಿದ್ದೆವು. ಇದರಿಂದ ರಾಜ್ಯದಲ್ಲೂ ಸಮಸ್ಯೆ ಹೆಚ್ಚಾಯಿತು. ಕನಕಪುರದಲ್ಲಿ ನಮ್ಮನ್ನ ನಂಬಿದ್ದ ಕಾರ್ಯಕರ್ತರು ಅನಾಥರಾಗುವಂತಾಯಿತು, ಅದು ನನ್ನಿಂದ ಆದ ತಪ್ಪಲ್ಲ, ಪಕ್ಷದ ಉಳಿವಿಗಾಗಿ ಆದ ಸಮಸ್ಯೆ. ಕನಕಪುರದ ಕಾರ್ಯಕರ್ತರು ಸ್ವಾಭಿಮಾನಿಗಳು, ಹಣಕ್ಕಾಗಿ ರಾಜಕಾರಣ ಮಾಡಿದವರಲ್ಲ. ನಿಷ್ಠಾವಂತ ಕಾರ್ಯಕರ್ತರು, ದೇವೇಗೌಡರ ಮೇಲಿನ ವಿಶ್ವಾಸಕ್ಕೆ ಯಾರಿಗೂ ತಲೆ ಭಾಗದೆ ಹೋರಾಟ ಮಾಡಿ ಪಕ್ಷ ಉಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Bharat Jodo | ಬಳ್ಳಾರಿ ಸಭೆಗೆ ಬೆವರು ಹರಿಸಿದ್ದು ಡಿಕೆಶಿ, ಚಪ್ಪಾಳೆ-ಶಿಳ್ಳೆ ಗಿಟ್ಟಿಸಿದ್ದು ಸಿದ್ದರಾಮಯ್ಯ !