Site icon Vistara News

Hampi tourism: ಹಂಪಿ ಗ್ರಾಮ ಪಂಚಾಯತ್‌ಗೆ ಕೇಂದ್ರದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಪ್ರಶಸ್ತಿ

best tourism award 2023

ವಿಜಯನಗರ: ರಾಜ್ಯದ ಹೆಮ್ಮೆಯ ಐತಿಹಾಸಿಕ ತಾಣ ಹಂಪಿಯ ಪ್ರವಾಸೋದ್ಯಮಕ್ಕೆ (Hampi Tourism) ಮತ್ತೊಂದು ಗೌರವ ಸಂದಿದೆ. ಕೇಂದ್ರ ಸರ್ಕಾರದ ʼಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ-2023ʼ (Best tourism Village 2023) ರಾಷ್ಟ್ರೀಯ ಪ್ರಶಸ್ತಿಗೆ ಹಂಪಿ ಆಯ್ಕೆಯಾಗಿದೆ.

ಹಂಪಿಯ ಗ್ರಾಮ ಪಂಚಾಯತ್‌ಗೆ ರಾಷ್ಟ್ರ ಮಾನ್ಯತೆಯ ಗೌರವ ಒಲಿದಿದೆ. ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವ ಅಜಯ್ ಭಟ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಹಂಪಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಜನಿ ಷಣ್ಮುಖಗೌಡ ಪ್ರಶಸ್ತಿ ಸ್ವೀಕಾರ‌ ಮಾಡಿದರು.

ಪ್ರಶಸ್ತಿಗೆ 15 ಗ್ರಾಮ ಪಂಚಾಯತ್‌ಗಳು ಸೇರಿ 729 ಅರ್ಜಿಗಳು ಸಲ್ಲಿಕೆಯಾಗಿದ್ದವು. ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಗ್ರಾಮ ಪಂಚಾಯತ್‌ ಹಂಪಿ. ರಾಜ್ಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್ ಈ ಮಾಹಿತಿ ನೀಡಿದ್ದಾರೆ.

ಯುನೆಸ್ಕೋ ಪಾರಂಪರಿಕ ತಾಣದ ಪಟ್ಟಿಗೆ ಹಂಪಿ ಈಗಾಗಲೇ ಸೇರಿದೆ. ಇಲ್ಲಿನ ವಿಜಯನಗರ ಸಾಮ್ರಾಜ್ಯದ ಕಾಲದ ವಾಸ್ತುಶಿಲ್ಪಗಳು, ದೇವಾಲಯಗಳು, ಕಲ್ಲಿನ ಕಟ್ಟಡಗಳು ಇಡೀ ಜಗತ್ತಿನ ಗಮನ ಸೆಳೆದಿದ್ದು, ಜಗತ್ತಿನಾದ್ಯಂತದಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಬಾಳೆ ನಾರಿನಿಂದ ಮಾಡುವ ಕರಕುಶಲ ವಸ್ತುಗಳ ಕೌಶಲ್ಯವೃದ್ಧಿ, ಮಳಿಗೆಗಳು ಹಾಗೂ ಹೋಂಸ್ಟೇಗಳಲ್ಲಿ ಪ್ರವಾಸಿ ಸೌಲಭ್ಯಕ್ಕೆ ಪೂರಕ ವಾತಾವರಣ, ಇದಕ್ಕೆ ಪೂರಕವಾಗಿ ಸ್ಥಳಿಯರು ತೊಡಗಿಸಿಕೊಂಡಿದ್ದನ್ನು ಗಮನಿಸಿ ಹಂಪಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಂಪಿ ಗ್ರಾ.ಪಂ.ಗೆ ಪ್ರಶಸ್ತಿ ಒಲಿದು ಬಂದಿದ್ದಕ್ಕೆ ಇತರ ಸದಸ್ಯರು ಸಂತಸ ವ್ಯಕ್ತಪಡಿಸಿದ್ದು, ಹಂಪಿ ನಿವಾಸಿಗಳಿಗಳಿಂದಲೂ ಸಂತಸ ವ್ಯಕ್ತವಾಗಿದೆ.

ಇದನ್ನೂ ಓದಿ: Hampi Utsava: ಹಂಪಿ ಉತ್ಸವ ಈ ವರ್ಷ ಇಲ್ಲ; ಇದು ಬರದ ಎಫೆಕ್ಟ್‌!

Exit mobile version