ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಶಿವಪುರದ ತೂಗು ಸೇತುವೆಯಲ್ಲಿ ಕಾರು ನುಗ್ಗಿಸಿ ಪುಂಡಾಟ ನಡೆಸಿದ್ದ ಪ್ರವಾಸಿ ತಂಡದ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜೋಯಿಡಾ ತಾಲ್ಲೂಕಿನ ಉಳವಿ ಗ್ರಾಮದ ನಿವಾಸಿ ಮುಜಾಹಿದ್ ಆಜಾದ್ ಸಯ್ಯದ್(25) ಬಂಧಿತ ಆರೋಪಿ.
ಪ್ರವಾಸಿಗರ ತಂಡವೊಂದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಮಂಗಳವಾರ ಮುಂಜಾನೆ ಕಾರು ಚಲಾಯಿಸಲು ಮುಂದಾಗಿತ್ತು. ಒಂದೆರಡು ದಿನದ ಹಿಂದಷ್ಟೇ ಗುಜರಾತ್‌ನಲ್ಲಿ ಮೋರ್ಬಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತೂಗು ಸೇತುವೆ ಕುಸಿದು ನೂರಾರು ಮಂದಿ ಸಾವನ್ನಪ್ಪಿದ್ದರೂ ಯುವಕರ ತಂಡ ಕೇವಲ ಓಡಾಟಕ್ಕೆ ಸೀಮಿತವಾದ ತೂಗುಸೇತುವೆಯಲ್ಲಿ ದುಸ್ಸಾಹಸ ಮಾಡಿದ್ದು ಗ್ರಾಮಸ್ಥರನ್ನು ಕೆರಳಿಸಿತ್ತು. ತೂಗು ಸೇತುವೆಯಲ್ಲಿ ಅರ್ಧದವರೆಗೆ ಕ್ರಮಿಸಿದ್ದ ಕಾರನ್ನು ರಿವರ್ಸ್ ಕೊಂಡೊಯ್ಯುವಂತೆ ಮಾಡಿದ್ದರು.
ಪ್ರಸಿದ್ಧ ಯಾತ್ರಾಸ್ಥಳ ಜೊಯಿಡಾ ತಾಲ್ಲೂಕಿನ ಉಳವಿಯಿಂದ ಬರುವ ಅನೇಕ ಮಂದಿ ಶಿವಪುರದ ತೂಗು ಸೇತುವೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯದ ಕಾರಣ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಹಲವು ಗ್ರಾಮಸ್ಥರಿಗೆ ಇದು ದೈನಂದಿನ ಜೀವನದ ಅಗತ್ಯ ಸೌಕರ್ಯವಾಗಿದೆ. ಆದರೆ, ಯಾವ ಕಾರಣಕ್ಕೂ ಇದರಲ್ಲಿ ಕಾರಿನಂಥ ವಾಹನ ಹೋಗಲು ಸೂಕ್ತವಾದುದಲ್ಲ. ಜತೆಗೆ ಕಾರು ಹೋದರೆ ನಡೆದುಕೊಂಡು ಹೋಗುವಷ್ಟೂ ಜಾಗ ಇಲ್ಲಿಲ್ಲ. ಇಂಥ ಇಕ್ಕಟ್ಟಿನಲ್ಲಿ ಅಪಾಯಕಾರಿ ಸಾಹಸ ಮಾಡುವ ಪ್ರವೃತ್ತಿ ಬಗ್ಗೆ ಮೊದಲಿನಿಂದಲೂ ಆಕ್ರೋಶವಿತ್ತು.
ಪಂಚಾಯಿತಿ ಉಪಾಧ್ಯಕ್ಷರಿಂದ ದೂರು
ಶಿವಪುರದ ಈ ಸೇತುವೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ವಿಡಿಯೊಗಳು ವೈರಲ್ ಆಗಿತ್ತು. ವಿಸ್ತಾರ ನ್ಯೂಸ್ ಮಾಡಿದ ವರದಿಯೂ ಸದ್ದು ಮಾಡಿತ್ತು. ಈ ನಡುವೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮಂಜುನಾಥ ಮೊಖಾಶಿ ಅವರು ಪ್ರವಾಸಿ ತಂಡದ ವಿರುದ್ಧ ದೂರು ನೀಡಿದ್ದರು.
ಪ್ರವಾಸಿ ತಂಡದಲ್ಲಿ ಉಳವಿ ಗ್ರಾಮದ ನಿವಾಸಿಯಾಗಿರುವ ಮುಜಾಹಿದ್ ಆಜಾದ್ ಸಯ್ಯದ್ ಇದ್ದ ಎನ್ನುವುದನ್ನು ಗಮನಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ದೂರನ್ನು ಆಧರಿಸಿ ಮಹಾರಾಷ್ಟ್ರ ನೋಂದಣಿಯ ಕಾರನ್ನೂ ಪತ್ತೆ ಮಾಡಿದ ಪೊಲೀಸರು ಕಾರನ್ನು ತೂಗುಸೇತುವೆ ಮೇಲೆ ಚಲಾಯಿಸಿದ್ದ ಮುಜಾಹಿದ್ ವಿರುದ್ಧ ಕಲಂ 279, 336 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೋಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Hanging bridge| ಕಾಳಿ ನದಿಯ ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ ಪ್ರವಾಸಿಗರು, ಅಪಾಯಕ್ಕೆ ಆಹ್ವಾನ