Site icon Vistara News

Vistara Money Plus | ಜೀವನಮಟ್ಟ ಸುಧಾರಿಸುವ ಎಲ್ಲ ಪ್ರಯತ್ನವನ್ನೂ `ವಿಸ್ತಾರʼ ಮಾಡಲಿದೆ: ಹರಿಪ್ರಕಾಶ್‌

vistara money plus HPK

ಬೆಂಗಳೂರು: ಮಾಧ್ಯಮ ಸಂಸ್ಥೆ ಎಂದ ಕೂಡಲೆ ಸುದ್ದಿಗಳನ್ನು ಪ್ರಸಾರ ಮಾಡುವುದಷ್ಟೆ ಅಲ್ಲ, ಕರ್ನಾಟಕದ ಜನಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವ ಎಲ್ಲ ಪ್ರಯತ್ನವನ್ನೂ ʻವಿಸ್ತಾರ ಮೀಡಿಯಾʼ ಮಾಡಲಿದೆ ಎಂದು ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.

ವಿಸ್ತಾರ ಮೀಡಿಯಾ ಮುಖ್ಯ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ʻವಿಸ್ತಾರ ಮನಿ ಪ್ಲಸ್‌ʼ (Vistara Money Plus) ಯೂಟ್ಯೂಬ್‌ ಚಾನೆಲ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ದಾಸರ ಮಾತಿದೆ. ಅಂದರೆ ಭೂಮಿಯ ಮೇಲೆ ಉತ್ತಮ ಜೀವನ ನಡೆಸುವುದು ಇಲ್ಲಿನ ಪ್ರತಿ ಜೀವಿಯ ಗುರಿ ಎನ್ನುವುದು ಇದರರ್ಥ. ಹಣ ಸಂಪಾದನೆಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಈ ರೀತಿ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದರು.

ಭಾರತ ಜಗತ್ತಿನಲ್ಲಿ ಸರ್ವಶ್ರೇಷ್ಠವಾಗಿ ನಿಲ್ಲಬೇಕು ಎಂದರೆ ಇಲ್ಲಿನ ಎಲ್ಲರೂ ದುಡಿಯುವಂತೆ ಆಗಬೇಕು.
ಈ ಹಿಂದೆ ವೃತ್ತಿಗಳ ನಡುವೆ ಭೇದಭಾವ ಇತ್ತು. ನಿಕೃಷ್ಟ ಭಾವದಿಂದ ಕಾಣುತ್ತಿದ್ದ ಅನೇಕ ವೃತ್ತಿಗಳು ಇಂದು ದುಡಿಮೆಯ ದಾರಿಯಾಗಿವೆ. ಇಂತಹ ವೃತ್ತಿಗಳಲ್ಲೇ ಇಂದು ಕೋಟ್ಯಂತರ ರೂಪಾಯಿ ಸಂಪಾದಿಸುವ ಜತೆಗೆ ಜಗತ್ತಿನೆಲ್ಲೆಡೆ ವಿಸ್ತರಿಸುವ ಸಫಲ ಪ್ರಯತ್ನಗಳೂ ನಡೆದಿವೆ ಎಂದು ಹೇಳಿದರು.

ಎಲ್ಲ ಜನರನ್ನೂ ಉದ್ಯೋಗಿಗಳಾಗಿಸುವ, ಎಲ್ಲ ಕೈಗಳಿಗೂ ಕೆಲಸ ಕೊಡುವುದಕ್ಕಿಂತಲೂ ಉತ್ತಮವಾದ ಕೊಡುಗೆ ಈ ದೇಶಕ್ಕೆ ನಾವು ಕೊಡಲು ಸಾಧ್ಯವಿಲ್ಲ. ನಾವು ಬೇರೆಯವರ ಮುಂದೆ ಕೈ ಚಾಚುವುದಿಲ್ಲ, ಉದ್ಯೋಗವನ್ನು ಬೇಡುವುದಕ್ಕಿಂತಲೂ ನೀಡುವ ಕೈಗಳಾಗುವಂತೆ ಮಾಡುವುದೂ ದೇಶಪ್ರೇಮ ಎಂದು ಅಭಿಪ್ರಾಯಪಟ್ಟರು.

ಎಲ್ಲರೂ ಉದ್ಯಮಿಗಳಾಗಲು ಸಾಧ್ಯವಿಲ್ಲವೇ? ರವಿಶಂಕರ್‌ ಅವರು ಹೇಗೆ ದೇಶದಲ್ಲೇ ಉತ್ತಮ ಸಂಸ್ಥೆ ಕಟ್ಟಿದರು? ರಂಗಸ್ವಾಮಿ ಮೂಕನಹಳ್ಳಿ ಅವರು ಹೇಗೆ ಅನೇಕರಿಗೆ ಆರ್ಥಿಕ ಮಾರ್ಗದರ್ಶನ ನೀಡುತ್ತಾರೆ? ಇದನ್ನು ಯೋಚಿಸಬೇಕು. ಈ ಎಲ್ಲ ರೀತಿಯಲ್ಲೂ ವಿಸ್ತಾರ ಕಾರ್ಯನಿರ್ವಹಿಸಲಿದೆ. ನಾವು ಮಾಧ್ಯಮವಾಗಿ ವರದಿ ಮಾಡಲು ಮಾತ್ರ ಸೀಮಿತವಾಗಿರುವುದಿಲ್ಲ. ಕರ್ನಾಟಕದ ಜನಜೀವನವನ್ನು ಉತ್ತಮವಾಗಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ ಎಂದು ತಿಳಿಸಿದರು.

ಏಮ್‌ ಹೈ ಕನ್ಸಲ್ಟಿಂಗ್‌ ಸಿಇಒ, ಸಂವಹನ ಸಲಹೆಗಾರ ಎನ್‌. ರವಿಶಂಕರ್‌, ಆರ್ಥಿಕ ತಜ್ಞ ಹಾಗೂ ಸಲಹೆಗಾರ ರಂಗಸ್ವಾಮಿ ಮೂಕನಹಳ್ಳಿ, ವಿಸ್ತಾರ ಮೀಡಿಯಾ ಎಕ್ಸಿಕ್ಯೂಟಿವ್‌ ಎಡಿಟರ್‌ ಶರತ್‌ ಎಂ.ಎಸ್‌. ಉಪಸ್ಥಿತರಿದ್ದರು.

Exit mobile version