ಬೆಂಗಳೂರು: ʻʻಗುರುಲಿಂಗ ಸ್ವಾಮಿ ಅವರು ಮಾನವೀಯತೆ ಮತ್ತು ಸಹೃದಯತೆ ತುಂಬಿದ ಅಪರೂಪದ ಪತ್ರಕರ್ತ. ಎಂಥ ಶತ್ರುವನ್ನಾದರೂ, ಎಂಥಾ ಕಠೋರ ಹೃದಯವನ್ನು ಕೂಡಾ ಕರಗಿಸುವಂಥ ಸ್ವಭಾವ ಅವರದಾಗಿತ್ತು. ರಾಜಕೀಯ ನಾಯಕರ ಜತೆಗಿದ್ದರೂ ಪತ್ರಕರ್ತನ ಗುಣವನ್ನು ಎಂದೂ ಬಿಟ್ಟುಕೊಟ್ಟಿರಲಿಲ್ಲ. ನಾನೊಬ್ಬ ಅಚ್ಚುಮೆಚ್ಚಿನ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇನೆʼʼ ಎಂದು ವಿಸ್ತಾರ ಮೀಡಿಯಾ ಪ್ರೈವೆಟ್ ಲಿಮಿಟೆಡ್‌ನ ಪ್ರಧಾನ ಸಂಪಾದಕರು ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಕಂಬನಿ ಮಿಡಿದಿದ್ದಾರೆ.
ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ಎರಡರಲ್ಲೂ ವರದಿಗಾರರಾಗಿ ಕೆಲಸ ಮಾಡಿ ದೊಡ್ಡ ಹೆಸರು ಪಡೆದಿದ್ದ, ಪ್ರಸಕ್ತ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ನಿರ್ಗಮನ ಮಾಧ್ಯಮ ಲೋಕಕ್ಕೆ ದೊಡ್ಡ ಆಘಾತವಾಗಿದೆ. ಈ ಸಂದರ್ಭದಲ್ಲಿ ಹರಿಪ್ರಕಾಶ್ ಕೋಣೆಮನೆ ಅವರು ತಮ್ಮ ಸಹೋದ್ಯೋಗಿಯಾಗಿದ್ದ ಗುರುಲಿಂಗ ಸ್ವಾಮಿ ಅವರ ಸೇವೆ, ಹೃದಯವಂತಿಕೆ ಬಗೆಗಿನ ಆಪ್ತ ಒಳನೋಟವನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಅಚ್ಚು ಮೆಚ್ಚಿನ ಸಹೃದಯಿ ಸಹೋದ್ಯೋಗಿ
ಗುರುಲಿಂಗ ಸ್ವಾಮಿ ಮತ್ತು ನನ್ನ ಒಡನಾಟ ನೇರವಾಗಿ ಶುರುವಾಗಿದ್ದು ೨೦೧೧ರಲ್ಲಿ. ವಿಜಯವಾಣಿಯನ್ನು ಶುರು ಮಾಡುವ ಸಂದರ್ಭದಲ್ಲಿ. ನನ್ನ ಅಚ್ಚು ಮೆಚ್ಚಿನ, ಸಹೃದಯಿ ಸಹೋದ್ಯೋಗಿಗಳಲ್ಲಿ ಗುರುಲಿಂಗ ಸ್ವಾಮಿ ಅವರು ಪ್ರಮುಖರಾಗಿದ್ದರು. ಅವರು ಸದಾ ಹಸನ್ಮುಖಿ. ಈ ಹಿಂದೆ ಅವರು ಈ ಟೀವಿ ಕನ್ನಡದಲ್ಲಿ ಹುಬ್ಬಳ್ಳಿ-ಧಾರವಾಡದ ವರದಿಗಾರರಾಗಿದ್ದಾಗ ದಿನವೂ ಅವರ ಹೆಸರನ್ನು ಕೇಳುತ್ತಿದ್ದೆ. ಅವರಿಗಿರುವ ಸುದ್ದಿ ಗ್ರಹಿಕೆ ಮತ್ತಿತರ ಗುಣವನ್ನು ಗಮನಿಸಿದ್ದ ನಾನು ವಿಜಯವಾಣಿ ಆರಂಭ ಕಾಲದಲ್ಲೇ ನಮ್ಮಲ್ಲಿ ಬನ್ನಿ ಅಂತ ಕರೆದಿದ್ದೆ. ಅವರು ತಮ್ಮ ಶಕ್ತಿಯನ್ನು ಪತ್ರಿಕೆಗೆ ಧಾರೆ ಎರೆದಿದ್ದರು.
ಕಠಿಣ ಮಾತಿಗೂ ನಗುವಿನುತ್ತರ, ಸರಿಪಡಿಸಿಕೊಳ್ಳುವ ಔದಾರ್ಯ
ನನಗೆ ಅತ್ಯಂತ ಪ್ರೀತಿ ಪಾತ್ರರಾದ ಸಹೋದ್ಯೋಗಿಗಳಲ್ಲಿ ಗುರುಲಿಂಗಸ್ವಾಮಿ ಪ್ರಮುಖರಾಗ್ತಾರೆ. ಯಾಕೆಂದರೆ, ಅವರಲ್ಲಿ ಸಂವಹನ ಮಾಡುವುದು ಅತ್ಯಂತ ಸುಲಭ. ಸಂದರ್ಭಗಳನ್ನು ಗ್ರಹಿಸಿ ಪ್ರತಿಕ್ರಿಯಿಸುವ ಅವರ ಗುಣವೇ ಇದಕ್ಕೆ ಕಾರಣ. ಅನೇಕ ಸಂದರ್ಭದಲ್ಲಿ ಸಿಟ್ಟು, ಒತ್ತಡಗಳ ನಡುವೆ ನಾನು ಬಹಳ ಕಠಿಣವಾಗಿ ಮಾತನಾಡಿದಾಗಲೂ ಕೂಡಾ ಒಂದು ಕ್ಷಣ ಮೌನವಹಿಸಿ ಬಳಿಕ ನಗುನಗುತ್ತಾ ತಿದ್ದಿಕೊಂಡು ಅದನ್ನು ಸರಿಪಡಿಸಿಕೊಳ್ಳುವ ಗುಣ ಅವರದಾಗಿತ್ತು. ಮಾರನೇ ದಿನ ʻನೀವು ಹೇಳಿದ್ದರಿಂದ ನಾನೊಂದು ಒಳ್ಳೆಯ ಸ್ಟೋರಿ ಕೊಟ್ಟೆʼ ಅಂತ ಹೇಳುವ ಸಹೃದಯಿ ಪತ್ರಕರ್ತ ಅವರಾಗಿದ್ದರು.
ನಮ್ಮ ಕಚೇರಿಯ ಬಾಗಿಲು ತೆರೆದಿರುತ್ತದೆ ಅಂತ ಹೇಳಿದ್ದೆ
ಗುರುಲಿಂಗ ಸ್ವಾಮಿ ಅವರು ಪತ್ರಿಕಾ ಉದ್ಯೋಗದಿಂದ ಮತ್ತೊಮ್ಮೆ ಎಲೆಕ್ಟ್ರಾನಿಕ್ ಮೀಡಿಯಾಗೆ ಸ್ಥಳಾಂತರಗೊಂಡರು. ಬಸವರಾಜ ಬೊಮ್ಮಾಯಿ ಅವರು ಗೃಹ ಮಂತ್ರಿಯಾದಾಗ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಕೆಲಸ ಶುರು ಮಾಡಿದರು. ಬಳಿಕ ಅವರು ಮುಖ್ಯಮಂತ್ರಿಗಳಾದಾಗಲೂ ಗುರುಲಿಂಗಸ್ವಾಮಿ ಅವರೇ ಮಾಧ್ಯಮ ಸಂಯೋಜಕರಾದರು. ಮುಖ್ಯಮಂತ್ರಿ ಕಚೇರಿಯಲ್ಲಿ ಬೆಳಗಿನಿಂದ ಸಂಜೆವರೆಗೆ ಅತ್ಯಂತ ಒತ್ತಡದ ಕೆಲಸವಿದ್ದರೂ ನಗು ನಗುತ್ತಾ ಎಲ್ಲರಿಗೂ ಸ್ವಂದಿಸುವಂಥ ಸ್ವಭಾವ ಗುರುಲಿಂಗ ಸ್ವಾಮಿ ಅವರಿಗೆ ಇತ್ತು. ನೀವು ರಾಜಕೀಯ ನಾಯಕರ ಜತೆಗಿದ್ದರೂ ನಿಮ್ಮ ಪತ್ರಕರ್ತನ ಗುಣವನ್ನು ಬಿಟ್ಟುಕೊಡದೆ ಇರುವುದರಿಂದ ನಿಮಗೆ ಯಾವಾಗ ಸಾಧ್ಯ ಆಗುತ್ತದೋ ಆಗ ವಾಪಸ್ ಬನ್ನಿ. ನಮ್ಮ ಕಚೇರಿ ಸದಾ ಕಾಲ ನಿಮಗಾಗಿ ತೆರೆದಿರುತ್ತದೆ ಅಂತ ನಾನು ಅವರಿಗೆ ಹೇಳಿದ್ದೆ. ಅದಾದ ನಂತರ ಮಾತಿಗೆ ಸಿಕ್ಕಾಗಲೆಲ್ಲ ʻʻನೀವು ಹಾಗೆ ಹೇಳಿದ ಒಂದು ಮಾತು ನಾನು ಇನ್ನಷ್ಟು ನಿಸ್ಪೃಹವಾಗಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡಲು ಧೈರ್ಯವನ್ನು ಕೊಟ್ಟಿದೆ. ನಾನು ಮತ್ತೊಮ್ಮೆ ಪ್ರಧಾನ ವಾಹಿನಿ ಮಾಧ್ಯಮಕ್ಕೆ ಬರುತ್ತೇನೆ. ನಿಮ್ಮ ಜತೆ ಕೆಲಸ ಮಾಡುತ್ತೇನೆʼʼ ಎಂದು ಹತ್ತಾರು ಸಲ ಹೇಳಿದ್ದರು.
ಬಹುದಿನಗಳ ನಂತರ ಕುಟುಂಬದ ಜತೆ ಹೊರಗೆ ಬಂದಿದ್ದೇನೆ
ಕಳೆದ ವಾರ ಯಾವುದೋ ಒಂದು ಕಾರಣಕ್ಕೆ ನಾನು ಅವರು ಭೇಟಿ ಆಗಬೇಕಿತ್ತು. ಸಾಯಂಕಾಲದ ಹೊತ್ತಿಗೆ ಅವರು ಮರೆತುಬಿಟ್ಟಿದ್ದರು. ನಾನು ಕರೆ ಮಾಡಿದಾಗ ಬಹಳ ನಯವಾಗಿ ʻʻಬಹಳ ದಿನಗಳ ನಂತರ ನಾನು ನನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೊರಗಡೆ ಎಲ್ಲೋ ಊಟಕ್ಕೆ ಬಂದಿದ್ದೇನೆ. ಹಾಗಾಗಿ ಕ್ಷಮಿಸಿ ಬಿಡಿ. ನಾಳೆ ನಾನು ನಿಮ್ಮನ್ನು ಭೇಟಿ ಮಾಡ್ತೇನೆʼʼ ಅಂತ ಹೇಳಿದ್ದರು. ಅದು ಅವರ ವಿನಯವಂತಿಕೆ. ಇವತ್ತು ಅವರ ಕುಟುಂಬದ ಪರಿಸ್ಥಿತಿಯನ್ನು ನೆನೆಸಿಕೊಂಡಾಗ ನನಗೆ ಆವತ್ತು ಅವರು ಆಡಿದ ಮಾತು ನೆನಪಾಗುತ್ತದೆ. ಬಹಳ ದಿನಗಳ ನಂತರ ನಾನು ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೊರಗೆ ಬಂದಿದ್ದೇನೆ ಎಂದು ಕೇವಲ ನಾಲ್ಕು ದಿನಗಳ ಹಿಂದಷ್ಟೇ ಹೇಳಿದ್ದರು. ನನಗೆ ಆ ಘಟನೆ ಇನ್ನೂ ಕಣ್ಣಿಗೆ ಕಟ್ಟಿದ ಹಾಗೇ ಇದೆ. ಅವರ ಕುಟುಂಬ ಈ ಆಘಾತವನ್ನು ಹೇಗೆ ಸಹಿಸಿಕೊಳ್ಳುತ್ತದೋ ಗೊತ್ತಿಲ್ಲ. ಸಹಿಸಿಕೊಳ್ಳುವ ಶಕ್ತಿ ಬರಲಿ ಎನ್ನುವುದು ನನ್ನ ಪ್ರಾರ್ಥನೆ.
ಅವರ ಹೃದಯವಂತಿಕೆ ಶಾಶ್ವತ
ಗುರುಲಿಂಗ ಸ್ವಾಮಿ ಅವರು ಒಬ್ಬ ಅಪರೂಪದ ಪತ್ರಕರ್ತ. ಅದಕ್ಕಿಂತ ಹೆಚ್ಚಾಗಿ ಅವರೊಬ್ಬ ಸಹೃದಯಿ ಮನುಷ್ಯ ಎನ್ನುವುದು ಎಲ್ಲರಿಗೂ ಅನುಭವಕ್ಕೆ ಬಂದಿರುವ ಸಂಗತಿ. ಅವರ ಹೃದಯವಂತಿಕೆ ತುಂಬಾ ದೊಡ್ಡದು. ಎಂಥ ಶತ್ರುವನ್ನಾದರೂ, ಎಂಥಾ ಕಠೋರ ಹೃದಯವನ್ನು ಕೂಡಾ ಕರಗಿಸುವಂಥ ಸ್ವಭಾವ ಅವರದಾಗಿತ್ತು. ವೃತ್ತಿ ದೃಷ್ಟಿಯಿಂದ ನಾವು ಯಾವುದೇ ಹುದ್ದೆಯಲ್ಲಿರಲಿ, ಯಾವುದೇ ಜವಾಬ್ದಾರಿಯಲ್ಲಿರಲಿ. ನಮ್ಮ ಮನಸ್ಸಿನಲ್ಲಿರುವಂಥ ಆ ಮನುಷ್ಯತ್ವವನ್ನು, ಸಹೃದಯತೆಯನ್ನು ನಾವು ಕಾದುಕೊಳ್ಳಬೇಕು, ಅದು ಶಾಶ್ವತವಾಗಿ ಉಳಿಯುತ್ತದೆ- ಇದು ನಾವು ಪತ್ರಕರ್ತರು ಗುರುಲಿಂಗ ಸ್ವಾಮಿ ಅವರ ಜೀವನದಿಂದ ಕಲಿಯಬಹುದಾದ ಪಾಠ ಎಂದು ನನಗೆ ಅನಿಸುತ್ತದೆ.
ತುಂಬ ಅನಿರೀಕ್ಷಿತವಾದ, ಅಕಾಲಿಕವಾದ ನಿರ್ಗಮನ ಇದು. ನಮಗೆ ಅರಗಿಸಿಕೊಳ್ಳಲಾಗದಂಥ ಮತ್ತು ಮನಸ್ಸಿಗೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದಂಥ ಸಂಗತಿ. ಗುರುಲಿಂಗ ಸ್ವಾಮಿ ಅವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಮಾತ್ರ ನಾವು ಈ ಕ್ಷಣ ದೇವರಲ್ಲಿ ಕೇಳಿಕೊಳ್ಳಬಹುದು.
ಇದನ್ನೂ ಓದಿ| ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೃದಯಾಘಾತದಿಂದ ನಿಧನ