ಚಿಕ್ಕಮಗಳೂರು: ಲಿಪಿಯೇ ಇಲ್ಲದ ಸಂದರ್ಭದಲ್ಲಿ ಭಾರತದಾದ್ಯಂತ ಮಾಧ್ಯಮ ಕ್ರಾಂತಿ ಆಯಿತು. ಇಂಗ್ಲಿಷ್ ಅನಿವಾರ್ಯ ಎನ್ನುವ ಸಂದರ್ಭದಲ್ಲಿ ದೇಶದಲ್ಲಿ ಸ್ಥಳೀಯ ಭಾಷೆಗಳಲ್ಲೇ ಮಾಧ್ಯಮ ಸೃಷ್ಟಿಯಾಗಿತ್ತು ಎಂದು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್ ಕೋಣೆಮನೆ ಹೇಳಿದರು.
ನಗರದ ಮಧುವನ ಬಡಾವಣೆಯಲ್ಲಿ ಸಮರ್ಪಣಾ ಟ್ರಸ್ಟ್ ಆಯೋಜಿಸಿದ್ದ ಸ್ವರಾಜ್ಯ-75 ಅಮೃತ ಮಹೋತ್ಸವ ಹಾಗೂ ಸಂಗ್ರಾಮ ದರ್ಶನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಪ್ರಸ್ತುತ ಸ್ಥಿತಿಯಲ್ಲಿ ರಾಷ್ಟ್ರ ಮತ್ತು ಮಾಧ್ಯಮಗಳ ಕುರಿತು ಮಾತನಾಡಿದರು.
ಭಾರತದಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಮಾಧ್ಯಮ ಕ್ರಾಂತಿ ಆಯಿತು. ಆಂಗ್ಲ ಭಾಷೆ ಇಲ್ಲದ ಸಂದರ್ಭದಲ್ಲಿ ಸಾಹಿತ್ಯ ಮಾಧ್ಯಮವೇ ಸ್ಥಳೀಯರಲ್ಲಿ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇತ್ತೀಚೆಗೆ ನಾಗರಿಕ ಸಮಾಜವನ್ನು ಸರಿದಾರಿಗೆ ತರಬೇಕಿದ್ದ ಮಾಧ್ಯಮ ಹಲವು ಕಾರಣಗಳಿಂದ ಎಡವುತ್ತಿದೆ. ಇದರ ಬಗ್ಗೆ ಆತ್ಮವಿಮರ್ಶೆ ನಡೆಯಬೇಕಾಗಿದೆ ಎಂದು ಪ್ರತಿಪಾದಿಸಿದರು.
ಇಂದಿನ ಮಕ್ಕಳ ಸ್ಥಿತಿಗತಿ ಏನಾಗಿದೆ ಗೊತ್ತಾ?
ಅಂದು 6ನೇ ತರಗತಿ ಇಲ್ಲವೇ 7ನೇ ತರಗತಿ ಓದುತ್ತಿದ್ದ ಮಕ್ಕಳೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಬಹುತೇಕರು ವಯಸ್ಸನ್ನು ಮೀರಿ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಪ್ರೇಮ ಮೆರೆದಿದ್ದರು. ಆದರೆ, ಪ್ರಸ್ತುತ ಸಮಾಜದಲ್ಲಿ ನಮ್ಮ ಮಕ್ಕಳ ಸ್ಥಿತಿ ಹೇಗಾಗಿದೆ? ಪಿಯುಸಿ ಇಲ್ಲವೇ ಪದವಿ ಪಡೆದುಕೊಂಡ ಮಕ್ಕಳು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಕುರಿತು ತುಂಬ ಗಂಭೀರವಾಗಿ ಆಲೋಚನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಮೊಬೈಲ್‌ನಲ್ಲಿ, ಕಾರ್ಟೂನ್ ನೋಡುವುದರಲ್ಲಿ, ಇಲ್ಲವೇ ನಾವೇ ಕೊಡಿಸಿದ ದುಬಾರಿ ಬೈಕ್‌ನಲ್ಲಿ ಓಡಾಡುವುದರಲ್ಲಿ ನಿರತರಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಪೋಷಕರು ಈ ಬಗ್ಗೆ ಅರಿವು ಮೂಡಿಸಿ ಮಕ್ಕಳನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸ್ವಾತಂತ್ರ್ಯದ ಕಿಚ್ಚು ಹಬ್ಬಿಸಲು ಮಾಧ್ಯಮ ಕ್ರಾಂತಿ
ಸ್ವಾತಂತ್ರ್ಯ ಕ್ರಾಂತಿಯ ಕಿಚ್ಚು ಹೊತ್ತಿಸಲು ಮಹಾರಾಷ್ಟ್ರದಲ್ಲಿ ಬಾಲ ಗಂಗಾಧರ ತಿಲಕರು ಕೇಸರಿ ಪತ್ರಿಕೆಯನ್ನು ಆರಂಭಿಸುತ್ತಾರೆ. ಅಷ್ಟೇ ಅಲ್ಲದೆ ಹಲವಾರು ಪತ್ರಿಕೆಗಳು ಬ್ರಿಟಿಷರ ವಿರುದ್ಧ ಭಾರತೀಯರನ್ನೂ ಒಗ್ಗೂಡಿಸಲು ತಲೆ ಎತ್ತುತ್ತವೆ. ಕೆಲ ಪತ್ರಿಕೆಗಳು ಕೇವಲ ಬರವಣಿಗೆಯ ಮೂಲಕ ಜನರನ್ನು ಹುರಿದುಂಬಿಸಿ ಸಾಮಾಜಿಕ ಕ್ರಾಂತಿ ಮೂಡಿಸಲು ಸಹಕಾರಿ ಆಗುತ್ತವೆ. ಮಹಾತ್ಮ ಗಾಂಧೀಜಿ ಅವರು ಹರಿಜನ ಎಂಬ ಪತ್ರಿಕೆ ಸ್ಥಾಪಿಸುವ ಮೂಲಕ ವರ್ಣಭೇದ ನೀತಿಯ ವಿರುದ್ಧ ಹೋರಾಡಿದರು. ತಿಲಕರು ಕೇಸರಿ ಪತ್ರಿಕೆ ಸ್ಥಾಪಿಸಿ ರಾಷ್ಟ್ರಭಕ್ತಿ ಮೂಡಿಸುವ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದರು. ಆ ಪತ್ರಿಕೆಯ ಉದ್ದೇಶ ಕೇವಲ ರಾಷ್ಟ್ರಭಕ್ತಿ ಮೂಡಿಸುವುದಾಗಿತ್ತು ಎಂದು ಕೋಣೆಮನೆ ನೆನಪಿಸಿಕೊಂಡರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ವಿವಾದ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಹಾರಿಸುವ ವಿಚಾರ ವಿವಾದಕ್ಕೆ ಕಾರಣವಾಗುತ್ತಿದೆ. ವಂದೇ ಮಾತರಂ ಹಾಡುವ ವಿಚಾರವೂ ವಿವಾದದ ವಸ್ತುವಾಗುತ್ತಿದೆ. ಅಂದು ಜವಾಹರ ಲಾಲ್ ನೆಹರು ಅವರು ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಲು ದೇಶದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೊರತಂದರು. ಆದರೆ ಇತ್ತೀಚೆಗೆ ಅದು ಬೇರೆ ಬೇರೆ ಕಾರಣಗಳಿಂದ ವಿವಾದಕ್ಕೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾತಂತ್ರ್ಯದ ನಂತರ ಮಾಧ್ಯಮ ಲೋಕದಲ್ಲಿ ಬದಲಾವಣೆ
ಸ್ವಾತಂತ್ರ್ಯ ಪಡೆದ ನಂತರ ಮಾಧ್ಯಮ ಲೋಕದಲ್ಲಿ ಆದ ಬದಲಾವಣೆಯನ್ನು ಪ್ರತಿಯೊಬ್ಬರೂ ಗಮನಿಸಬೇಕು. ʻʻಸ್ವಾತಂತ್ರ್ಯ ಸಿಕ್ಕಿದ ನಂತರ ಬ್ರಿಟಿಷರ ಅವಲಂಬನೆ ಅಂತ್ಯವಾಗಬಹುದು. ಆಳುವವರ ಚರ್ಮ ಬದಲಾಗಬಹುದು. ಆದರೆ ಆಳುವವರ ಮನಸ್ಥಿತಿ ಬದಲಾಗುವುದಿಲ್ಲʼʼ ಎನ್ನುವ ಮಾತು ಹೇಳಿ ಹೋಗಿದ್ದರು. ಇತ್ತೀಚೆಗೆ ಎಲ್ಲ ವಿಚಾರಗಳನ್ನು ವಿವಾದಗಳಾಗಿ ನೋಡುತ್ತಿರುವುದನ್ನು ಗಮನಿಸಿದರೆ ಅವರ ಮಾತನ್ನು ನಾವು ಸತ್ಯವಾಗಿಸುತ್ತಿದ್ದೇವೆ ಅನಿಸುತ್ತಿದೆ. ಈ ಮನಸ್ಥಿತಿ ಕೂಡಲೇ ಬದಲಾಗುವ ಮೂಲಕ ನೂತನ ಕ್ರಾಂತಿಗೆ ಸಮಾಜ ತೆರೆದುಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ
ಸಮರ್ಪಣಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಅಜ್ಜಂಪುರದ ಏಕೋ ರಾಮಸ್ವಾಮಿ, ಗೌರು ಓಂಕಾರಯ್ಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಸ್ವಾತಂತ್ರ್ಯ ಹೋರಾಟದ ಅನುಭವಗಳನ್ನು ಹಂಚಿಕೊಂಡರು. ಇಂದಿನ ಸ್ಥಿತಿ ಹಾಗೂ ಸ್ವಾತಂತ್ರ್ಯ ಪೂರ್ವದ ಹೋರಾಟದ ಸ್ಥಿತಿಗತಿಗಳ ಮೆಲುಕು ಹಾಕಿದರು. ಇದೇ ವೇಳೆ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ನರೇಂದ್ರ ಪೈ, ಕ್ಷೇತ್ರೀಯ ಸಂಚಾಲಕ ಪ್ರಮುಖ್ ಶ್ರೀಧರ ಸ್ವಾಮಿ, ಟ್ರಸ್ಟ್ ಸದಸ್ಯೆ ಪವಿತ್ರಾ ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ | ಸವಿಸ್ತಾರ ಅಂಕಣ | ಒಂದೇ ʼಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?