Site icon Vistara News

Harish Poonja: ಪೊಲೀಸರಿಗೆ ಧಮ್ಕಿ ಪ್ರಕರಣ; ಶಾಸಕ ಹರೀಶ್‌ ಪೂಂಜಾ, 40 ಮಂದಿ ವಿರುದ್ಧ ಚಾರ್ಜ್‌ಶೀಟ್‌

Harish Poonja

ಮಂಗಳೂರು: ಪೋಲಿಸರಿಗೆ ಧಮ್ಕಿ ಪ್ರಕರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ 40 ಮಂದಿ ವಿರುದ್ಧ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಶಾಸಕ ಹರೀಶ್‌ ಪೂಂಜಾ (Harish Poonja) ಜತೆ ಪೊಲೀಸ್ ಠಾಣೆಗೆ ಹೋಗಿದ್ದವರ ಹೆಸರನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರಿಗೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ.

ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಮೇ 22ರಂದು ವಿಚಾರಣೆಗೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಹಾಜರಾಗಿದ್ದರು. ಅದಕ್ಕೂ ಮುನ್ನಾ ಅವರ ಬಂಧನಕ್ಕೆ ಬೆಳ್ತಂಗಡಿ ಪೊಲೀಸರು ಮುಂದಾದ ವೇಳೆ ಬಿಜೆಪಿ ಕಾರ್ಯಕರ್ತರು, ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರ ಶಾಸಕರನ್ನು ಪೊಲೀಸರು ಬಂಧಿಸದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿ ಅಲ್ಲಿಂದ ತೆರಳಿದ್ದರು.

ಏನಿದು ಪ್ರಕರಣ?

ಬೆಳ್ತಂಗಡಿಯ ಮೆಲಂತಬೆಟ್ಟುವಿನ ಕಲ್ಲು ಕ್ವಾರಿ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಗುರುವಾಯನಕೆರೆಯ ಬಿಜೆಪಿಯ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬುವವರನ್ನು ಬಂಧನ ಮಾಡಲಾಗಿತ್ತು. ಇದನ್ನು ಖಂಡಿಸಿ ರಾತ್ರೋರಾತ್ರಿ ಪೊಲೀಸ್ ಠಾಣೆ ಎದುರು ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿ, ಆಕ್ರೋಶ ಹೊರಹಾಕಿದ್ದರು.

ಪ್ರತಿಭಟನೆ ವೇಳೆ ‘ಪೊಲೀಸ್ ಠಾಣೆ ನಿಮ್ಮ‌ ಅಪ್ಪಂದಾʼ ಅಂತ ಬೆಳ್ತಂಗಡಿ ಪಿಎಸ್‌ಐ ಮುರುಳಿಧರ್ ನಾಯ್ಕ್‌ಗೆ ಶಾಸಕ ಹರೀಶ್‌ ಪೂಂಜಾ ಧಮ್ಕಿ ಹಾಕಿದ್ದರು. ಮನೆಯಲ್ಲಿದ್ದವರನ್ನು ಯಾವುದೇ ದಾಖಲೆಗಳಿಲ್ಲದೆ ಹೆಂಗಸರು, ಮಕ್ಕಳೆದುರು ಬಂಧನ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಅಮಾಯಕನ ಬಂಧನವಾಗಿದ್ದು, ಕೂಡಲೇ ಆತನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದರು. ಹೀಗಾಗಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮೇ 29ಕ್ಕೆ ಮುಂದೂಡಿಕೆ

ಭವಾನಿ ರೇವಣ್ಣ

ಬೆಂಗಳೂರು: ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮೇ 29ರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ. ಹಾಸನ ಅಶ್ಲೀಲ ವಿಡಿಯೊ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿ ಕೆ.ಆರ್.ನಗರ ಸಂತ್ರಸ್ಥ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದರಿಂದ ಭವಾನಿ ರೇವಣ್ಣ ಅವರಿಗೂ ಬಂಧನ ಭೀತಿ ಎದುರಾಗಿದೆ. ಹೀಗಾಗಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ನಾಳೆಗೆ ವಿಚಾರಣೆ ಮುಂದೂಡಿದೆ.

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಸೋಮವಾರ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಭವಾನಿ ರೇವಣ್ಣ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿ ಎಸ್‌ಪಿಪಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಧೀಶರು ನೋಟೀಸ್ ನೀಡಿದ್ದರು. ಭವಾನಿ ರೇವಣ್ಣ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಮತ್ತೊಂದೆಡೆ ಆಕ್ಷೇಪಣೆ ಸಲ್ಲಿಸಲು ಎಸ್ಐಟಿ ಕಾಲಾವಕಾಶ ಕೋರಿದ್ದರಿಂದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

ಇದನ್ನೂ ಓದಿ | Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಜಾಮೀನು ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಈ ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಅರ್ಹವಾಗಿದೆ. ಅಕ್ಷೇಪಣೆ ಸಲ್ಲಿಸುವವರೆಗೂ ಬಂಧನದಿಂದ ರಕ್ಷಣೆ ನೀಡಬೇಕು. ಇವತ್ತು ಬಂಧನ ಮಾಡಿದರೆ ಏನು ಮಾಡಲು ಆಗುತ್ತೆ. ಹೀಗಾಗಿ ನನ್ನ ಕಕ್ಷಿದಾರರಿಗೆ ಕಾನೂನು ರಕ್ಷಣೆ ಕೊಡಬೇಕು ಎಂದು ಭವಾನಿ ಪರ ವಕೀಲರು ಮನವಿ ಮಾಡಿದ್ದಾರೆ. ಇನ್ನು ಪ್ರಕರಣದಲ್ಲಿ ದಿನೇ ದಿನೇ ಆರೋಪಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಕೆಎಂಎಫ್ ಮಾಜಿ ಅಧ್ಯಕ್ಷರನ್ನು ಈ ಪ್ರಕರಣದಲ್ಲಿ 7ನೇ ಆರೋಪಿಯನ್ನಾಗಿ‌ ಸೇರಿಸಿದ್ದಾರೆ ಎಂದು ತಿಳಿಸಿದ್ದಾರೆ. ವಾದ-ಪ್ರತಿ ವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.

Exit mobile version