ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜಿನ (Nethrajyothi College Udupi) ಮಹಿಳಾ ಟಾಯ್ಲೆಟ್‌ನಲ್ಲಿ (Womens toilet) ಮೊಬೈಲ್ ಇಟ್ಟು (Harrassment Case) ಅಲ್ಲಿಗೆ ಬರುವ ವಿದ್ಯಾರ್ಥಿನಿಯರ ಟಾಯ್ಲೆಟ್ (Ladies toilet) ಬಳಕೆಯ ದೃಶ್ಯಗಳನ್ನು ಸೆರೆ ಹಿಡಿದ ಆರೋಪ ಎದುರಿಸುತ್ತಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜುಲೈ 27ರಂದು ರಾಜ್ಯಾದ್ಯಂತ ಹೋರಾಟ (Statewide protest on July 27) ಮಾಡುವುದಾಗಿ ಬಿಜೆಪಿ (BJP Protest) ಪ್ರಕಟಿಸಿದೆ.
ಮಂಗಳವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ (BJP Leaders Press meet) ನಡೆಸಿದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ (Tejaswini Gowda), ಮೇಲ್ಮನೆ ಸದಸ್ಯರಾದ ಎನ್. ರವಿಕುಮಾರ್ (N Ravikumar), ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದುಂ (Bharati mugdum) ಅವರು ಇದನ್ನು ಪ್ರಕಟಿಸಿದರು.
ಮುಸ್ಲಿಂ ಯುವತಿಯರ ಕೃತ್ಯ ಆತಂಕಕಾರಿ ಎಂದ ತೇಜಸ್ವಿನಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿನಿ ಗೌಡ, ʻʻನಾಡು ಬೆಚ್ಚಿ ಬೀಳುವ ಸನ್ನಿವೇಶದಲ್ಲಿ ನಾವಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಂತಹ ವಾತಾವರಣವಿದೆ. ಈ ಹಿಂದೆ ಭಯೋತ್ಪಾದಕರು ಕಾಲೇಜ್ ಕ್ಯಾಂಪಸ್‌ಗಳನ್ನು ಕೇಂದ್ರ ಮಾಡಿಕೊಂಡಿದ್ದರು. ಈಗಲೂ ಅದೇ ಪರಿಸ್ಥಿತಿ ಮರುಸೃಷ್ಟಿಯಾದಂತಿದೆ. ಜುಲೈ 20ರಂದು ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮೂವರು ಮುಸ್ಲಿಂ ಯುವತಿಯರು ಮಹಿಳಾ ಟಾಯ್ಲೆಟ್‌ನಲ್ಲಿ ಗೌಪ್ಯ ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಿದ್ದಾರೆ. ಅವರು ಹಿಂದು ಯುವತಿಯ ಟಾಯ್ಲೆಟ್ ಬಳಕೆಯ ವಿಡಿಯೋ ರೆಕಾರ್ಡ್ ಮಾಡಿದ್ದರುʼʼ ಎಂದು ಹೇಳಿದರು.
ʻʻಈ ರೀತಿ ವಿಡಿಯೊ ಮಾಡಿದ ಮೂವರು ಯುವತಿಯರನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ. ಅದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಯುವತಿಯರು ವಿಡಿಯೊವನ್ನು ಗ್ರೂಪ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಈಗ ಅನೇಕ ವಿದ್ಯಾರ್ಥಿನಿಯರು ತಮಗೂ ಹೀಗೇ ಅಗಿದೆ ಎನ್ನುತ್ತಿದ್ದಾರೆ. ಸಹಪಾಠಿಗಳೇ ಹೀಗೆ ಮಾಡುವ ಭಯಾನಕ ವಾತಾವರಣವಿದೆʼʼ ಎಂದು ತೇಜಸ್ವಿನಿ ಹೇಳಿದರು.
ತನಿಖೆ ಮಾಡಿ ಎಂದರೆ ಫೇಕ್ ನ್ಯೂಸ್ ಎಂದು ರಶ್ಮಿಗೆ ಬೆದರಿಕೆ
ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಾಗ ಹಿಂದು ಮಾನವ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಾಮಂತ್ ಅವರು ಈ ಬಗ್ಗೆ ಟ್ವೀಟ್ ಮಾಡಿದರೆ, ಪೊಲೀಸರು ಅವರ ಮನೆಗೆ ಹೋಗಿ ಅವರ ಪೋಷಕರನ್ನು ಹೆದರಿಸುತ್ತಿದ್ದಾರೆ. ಅವರೇ ಫೇಕ್ ನ್ಯೂಸ್ ಮಾಡಿದ್ದಾರೆ ಎಂದು ರಶ್ಮಿಯನ್ನು ಹೆದರಿಸುತ್ತಿದ್ದಾರೆ ಎಂದು ತೇಜಸ್ವಿನಿ ಹೇಳಿದರು.
ಇದೊಂದು ಆಕಸ್ಮಿಕ ಘಟನೆಯಲ್ಲ. ಸಂಘಟಿತ ಕೃತ್ಯ. ಮಂಡ್ಯದಲ್ಲಿ ಮಸ್ಕಾನ್ ಎಂಬ ಯುವತಿ ಕಾಲೇಜು ಆವರಣದಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಕೂಡಲೇ ಅವಳಿಗೆ ಅಲ್ ಕೈದಾದಿಂದ ಬೆಂಬಲ ಬಂತು. ಹಾಗಿದ್ದರೆ ಅವರ ನೆಟ್ವರ್ಕ್ ಎಷ್ಟು ಬಲವಾಗಿದೆ ನೋಡಿ. ಕೇರಳ ಫೈಲ್ಸ್ ಸಿನಿಮಾದಲ್ಲೂ ನಾವು ಭಯಾನಕ ಕಥೆಗಳನ್ನು ಕೇಳಿದ್ದೇವೆ. ಈಗ ಇದನ್ನು ತನಿಖೆ ಮಾಡಿ ಎಂದು ಕೇಳಿದರೆ, ಪ್ರಕರಣವನ್ನು ಬೆಳಕಿಗೆ ತಂದ ರಶ್ಮಿ ಸಾಮಂತ್ ಅವರಿಗೇ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆಪಾದಿಸಿದ ಅವರು, ಹೀಗಾದರೆ ಧರ್ಮಕ್ಕೊಂದು ಕಾಲೇಜ್ ಮಾಡಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
ʻʻಕಾಂಗ್ರೆಸ್ ಸರ್ಕಾರ ಫೇಕ್ ನ್ಯೂಸ್ ಚೆಕ್ ಮಾಡಲು ಏಜೆನ್ಸಿ ನೇಮಿಸಿಕೊಂಡಿದೆ. ಪ್ರತೀಪ್ ಸಿನ್ಹಾ, ಮೊಹಮ್ಮದ್ ಜುಬೇರ್ ನಡೆಸುವ ಆಲ್ಟ್ ನ್ಯೂಸ್ ಅವರು ಇದರಲ್ಲಿದ್ದಾರೆ. ಅವರೇ ಈಗ ಫೇಕ್ ನ್ಯೂಸ್ ಹಬ್ಬಿಸುತ್ತಿದ್ದಾರೆʼʼ ಎಂದು ಹೇಳಿದ ಅವರು, ʻʻʻಇದ್ಯಾವುದೂ ಕಣ್ತಪ್ಪಿನಿಂದ ಮಾಡಲಾಗಿಲ್ಲ. ಇದರ ಹಿಂದ ದೊಡ್ಡ ಜಾಲವಿದೆʼʼ ಎಂದರು.
ʻʻತಪ್ಪು ಮಾಡಿದ ವಿದ್ಯಾರ್ಥಿನಿಯರನ್ನು ಈಗ ರಕ್ಷಣೆ ಮಾಡಲಾಗುತ್ತಿದೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕುʼʼ ಎಂದು ತೇಜಸ್ವಿನಿ ಆಗ್ರಹಿಸಿದರು.
ತಪ್ಪು ಮಾಡಿದ ಹೆಣ್ಮಕ್ಕಳನ್ನು ಗಲ್ಲಿಗೇರಿಸಿ ಎಂದ ತೇಜಸ್ವಿನಿ
ʻʻಈಗಾಗಕೇ ಮಣಿಪುರದ ಘಟನೆ ದೇಶದಲ್ಲಿ ಚರ್ಚೆ ಆಗುತ್ತಿದೆ. ಆದರೆ, ಮುಖವನ್ನೇ ತೋರಿಸದ ಮುಸ್ಲಿಂ ಹೆಣ್ಣು ಮಕ್ಕಳು, ಹಿಂದು ಹೆಣ್ಣುಮಕ್ಕಳ ವಿಡಿಯೋ ಮಾಡಬಹುದಾ? ಈ ಕೆಲಸವನ್ನು ಹೆಣ್ಣುಮಕ್ಕಳೇ ಮಾಡಿದ್ದಾರೆ ಎನ್ನುವುದು ಮತ್ತಷ್ಟು ಆಘಾತಕಾರಿ. ಈ ಮೂವರು ಹೆಣ್ಣು ಮಕ್ಕಳು ತಪ್ಪು ಮಾಡಿದ್ದರೂ ಗಲ್ಲು ಶಿಕ್ಷೆ ವಿಧಿಸಬೇಕು. ಕಾನೂನಿನಲ್ಲಿ ಈ ಬಗ್ಗೆ ಅವಕಾಶ ಇಲ್ಲದಿದ್ದರೆ ಕಾನೂನು ಬದಲಾವಣೆ ಮಾಡಬೇಕುʼʼ ಎಂದು ತೇಜಸ್ವಿನಿ ಆಕ್ರೋಶದಿಂದ ಹೇಳಿದರು.
ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದ ಭಾರತಿ ಮುಗ್ದುಂ
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಸೇರಿ ಅನೇಕ ಯೋಜನೆಗಳನ್ನು ಸರ್ಕಾರ ಜಾರಿ ಮಾಡುತ್ತಿದೆ ಆದರೆ, ಮಹಿಳೆಯರ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಮುಗ್ದುಂ ಹೇಳಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದರು.
ಚಿತ್ರೀಕರಣಕ್ಕೆ ಒಳಗಾದ ಯುವತಿ ಭಯದಲ್ಲಿದ್ದಾಳೆ: ಎನ್ ರವಿಕುಮಾರ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರು, ʻʻಈಗ ಮೂವರು ಮುಸ್ಲಿಂ ಯುವತಿಯರು ಹಿಂದು ಯುವತಿಯ ವಿಡಿಯೋ ಮಾಡಿದ್ದಾರೆ. ಆದರೆ ಇದೇ ಉಲ್ಟಾ ಆಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು?ʼʼ ಎಂದು ಪ್ರಶ್ನಿಸಿದರು.
ʻʻಪ್ರಕರಣ ನಡೆದು ಐದು ದಿನಗಳಾಗಿವೆ. ವಿದ್ಯಾರ್ಥಿನಿಯರನ್ನು ಕಾಲೇಜಿಂದ ಸಸ್ಪೆಂಡ್ ಮಾಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಆದರೆ ತನಿಖೆಗೆ ಆಗ್ರಹಿಸಿದ ರಶ್ಮಿ ಸಾಮಂತ್ ಅವರನ್ನು ಬೆದರಿಸುತ್ತಿದೆ. ಈ ಸರ್ಕಾರಕ್ಕೆ ಮತಿಭ್ರಮಣೆಯಾಗಿದೆʼʼ ಎಂದು ರವಿಕುಮಾರ್ ಹೇಳಿದರು. ʻʻಈಗ ವಿಡಿಯೋ ಚಿತ್ರೀಕರಣಗೊಂಡ ವಿದ್ಯಾರ್ಥಿನಿ ಭಯಗ್ರಸ್ಥಳಾಗಿದ್ದಾಳೆ. ಆಕೆ ಕಾಲೇಜಿಗೂ ಹೋಗುತ್ತಿಲ್ಲʼʼ ಎಂದು ವಿವರಿಸಿದರು.
ʻʻಮುಸ್ಲಿಂ ಯುವತಿಯರು ಸರ್ಕಾರದ ಯೂನಿಫಾರಂ ಹಾಕುವುದಿಲ್ಲ ಎಂದು ಹಿಜಾಬ್ ಹೋರಾಟ ಮಾಡಿದರು. ತಮ್ಮ ಮುಖವನ್ನು ಯಾರೂ ನೋಡಬಾರದು ಎಂದು ಹೋರಾಟ ಮಾಡಿದರು. ಮುಸ್ಲಿಂ ವಿದ್ಯಾರ್ಥಿನಿಯರು ಯಾರಿಗೂ ಮುಖವನ್ನೂ ತೋರಿಸಬಾರದು ಎನ್ನುವ ಸರ್ಕಾರ, ಹಿಂದು ಯುವತಿಯ ವಿಡಿಯೋ ಚಿತ್ರೀಕರಣದ ಬಗ್ಗೆ ಏನು ಹೇಳುತ್ತದೆ? ಹಿಂದುಗಳಿಗೆ ಒಂದು ನ್ಯಾಯ, ಮುಸ್ಲಿಮರಿಗೆ ಇನ್ನೊಂದು ನ್ಯಾಯನಾʼʼ ಎಂದು ರವಿಕುಮಾರ್ ಪ್ರಶ್ನಿಸಿದರು.
ʻʻಮೂವರು ವಿದ್ಯಾರ್ಥಿನಿಯರ ವಿರುದ್ಧ ಕಾನೂನು ಕ್ರಮ ಆಗಬೇಕು. ಅವರು ಈ ವಿಡಿಯೊವನ್ನು ಯಾರ್ಯಾರಿಗೆ ಶೇರ್ ಮಾಡಿದ್ದಾರೆ ಎನ್ನುವುದು ತಿಳಿಯಬೇಕುʼʼ ಎಂದು ಆಗ್ರಹಿಸಿದ ರವಿಕುಮಾರ್ ಅವರು, ಜುಲೈ 27ರಂದು ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಮಹಿಳಾ ಮೋರ್ಚಾದಿಂದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದೆ ಎಂದರು. ʻಮೂವರನ್ನು ಕೂಡಲೇ ಅರೆಸ್ಟ್ ಮಾಡಬೇಕು. ರಶ್ಮಿ ಸಾಮಂತ್ ಅವರಿಗೆ ರಕ್ಷಣೆ ನೀಡಬೇಕುʼʼ ಎಂದು ಆಗ್ರಹಿಸಿದರು.
ತನಿಖೆಯನ್ನೇ ಮಾಡದೆ ವಿಡಿಯೋ ಶೇರ್ ಆಗಿಲ್ಲ ಎಂದು ಹೇಗೆ ಹೇಳುತ್ತೀರಿ?
ಮುಸ್ಲಿಂ ಯುವತಿಯರು ಕ್ಯಾಮೆರಾ ಇಟ್ಟಿರುವ ಬಗ್ಗೆ ಸಾಕ್ಷಿ ಇಲ್ಲ ಎಂಬ ಉಡುಪಿ ಎಸ್‌ಪಿ ಹೇಳಿಕೆಯನ್ನು ಖಂಡಿಸಿದ ಎನ್. ರವಿ ಕುಮಾರ್ ಅವರು, ಪೊಲೀಸರು ಹೀಗೆ ಪ್ರಕರಣ ಮುಚ್ಚಿ ಹಾಕಲು ಹೋಗಬಾರದು. ಪೊಲೀಸರು ಐಪಿಎಸ್ ಮಾಡಿರುವುದು ನ್ಯಾಯ ಬೆಳಕಿಗೆ ತರಲು. ಪ್ರಕರಣ ಮುಚ್ವಿ ಹಾಕುವ ಕೆಲಸ ಮಾಡಬೇಡಿ. ಸರ್ಕಾರ ಏನು ಹೇಳುತ್ತದೆಯೋ ಅದನ್ನು ಪೊಲೀಸರು ಹೇಳುತ್ತಾರೆ. ತನಿಖೆಯನ್ನೇ ಮಾಡದೆ, ವಿಡಿಯೋ ಶೇರ್ ಆಗಿಲ್ಲ ಎನ್ನುವುದು ತಪ್ಪು. ತನಿಖೆ ಆಗುವ ಮುನ್ನವೇ ಪೊಲೀಸರು ಹೇಗೆ ಹೇಳಿಕೆ ನೀಡುತ್ತಾರೆʼʼ ಎಂದು ಪ್ರಶ್ನಿಸಿದರು.
ʻʻಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಿ. ಪ್ರಕರಣದ ಹಿಂದೆ ಯಾವ ಮತೀಯ ಶಕ್ತಿಗಳಿವೆ ಅಂತ ಪತ್ತೆ ಮಾಡಲಿʼʼ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹ ಮಾಡಿದರು.
ಇದನ್ನೂ ಓದಿ: Harrassment Case : ಉಡುಪಿ ಹೆಣ್ಮಕ್ಕಳ ಟಾಯ್ಲೆಟಲ್ಲಿ ಚಿತ್ರೀಕರಣ; ಪ್ರಶ್ನಿಸಿದ ಹಿಂದು ಯುವತಿಗೆ ಪೊಲೀಸರ ಕಿರುಕುಳ