Site icon Vistara News

Harrassment Case : ಉಡುಪಿ ಹೆಣ್ಮಕ್ಕಳ ಟಾಯ್ಲೆಟಲ್ಲಿ ಚಿತ್ರೀಕರಣ; ಪ್ರಶ್ನಿಸಿದ ಹಿಂದು ಯುವತಿಗೆ ಪೊಲೀಸರ ಕಿರುಕುಳ

Rashmi samant

ಉಡುಪಿ/ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ (Nethrajyothi College udupi) ಮೂವರು ಮುಸ್ಲಿಂ ವಿದ್ಯಾರ್ಥಿನಿಯರು (Three Muslim students) ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ಇತರ ಹೆಣ್ಮಕ್ಕಳು ಶೌಚಾಲಯ ಬಳಸುವುದನ್ನು ಚಿತ್ರೀಕರಿಸಿಕೊಂಡ (mobile shooting at Ladies toilet) ಪ್ರಕರಣ ಇದೀಗ ಹೊಸ ತಿರುವನ್ನು ಪಡೆದುಕೊಂಡಿದೆ. ಕಾಲೇಜಿನಲ್ಲಿ ನಡೆದ ಈ ಘಟನೆಯನ್ನು ವಿದ್ಯಾರ್ಥಿನಿಯರ ಅಮಾನತಿನ ಮೂಲಕ ಮುಕ್ತಾಯಗೊಳಿಸಲಾಗಿದೆ. ಈ ನಡುವೆ, ಮುಸ್ಲಿಂ ಯುವತಿಯರ ಈ ಕೃತ್ಯದ ಹಿಂದೆ ದೊಡ್ಡದೊಂದು ಜಾಲವಿದೆ, ಚಿತ್ರೀಕರಿಸಿದ ದೃಶ್ಯಗಳನ್ನು ಅವರು ತಮ್ಮ ಸಮುದಾಯದ ಹುಡುಗರಿಗೆ ಕಳುಹಿಸಿದ್ದರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ, ತನಿಖೆಯನ್ನೂ ನಡೆಸುತ್ತಿಲ್ಲ ಎಂದು ಆಪಾದಿಸಿದ ರಶ್ಮಿ ಸಾವಂತ್‌ (Rashmi samant) ಎಂಬ ಯುವತಿಯೊಬ್ಬರು ಟ್ವೀಟ್‌ ಮಾಡಿದ್ದರು. ಈಗ ಉಡುಪಿ ಪೊಲೀಸರು ಆಕೆಯ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆಪಾದನೆ ಭಾರಿ ಚರ್ಚೆಗೆ ಕಾರಣವಾಗಿದೆ.

ಉಡುಪಿಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ಶೂಟ್ ಮಾಡುತ್ತಿದ್ದ ಈ ವಿದ್ಯಾರ್ಥಿನಿಯರು ಶೂಟ್ ಮಾಡಿದ್ದ ವಿಡಿಯೊವನ್ನು ತಮ್ಮ ಕೋಮಿನ ಯುವಕನಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ. ಆ ಯುವಕ ವಿದ್ಯಾರ್ಥಿನಿಯರ ವಿಡಿಯೊವನ್ನು ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದ ಎಂಬ ಆರೋಪವಿತ್ತು. ಇದು ವಿದ್ಯಾರ್ಥಿನಿಯರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿ ಬಳಿಕ ಆಡಳಿತ ಮಂಡಳಿಯನ್ನು ತಲುಪಿತ್ತು. ಆಡಳಿತ ಮಂಡಳಿ ವಿಚಾರಣೆ ನಡೆಸಿ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿತ್ತು.

ಟ್ವಿಟರ್‌ನಲ್ಲಿ ಪ್ರಶ್ನಿಸಿದ ರಶ್ಮಿ ಸಾವಂತ್‌

ಈ ಮಧ್ಯೆ ರಶ್ಮಿ ಸಾಮಂತ್‌ ಎಂಬವರು ಈ ಘಟನೆಯನ್ನು ಉಲ್ಲೇಖಿಸಿ ಇದರ ಬಗ್ಗೆ ಯಾಕೆ ತನಿಖೆ ನಡೆಯುತ್ತಿಲ್ಲ. ಕೇವಲ ಅಮಾನತು ಮಾಡಿ ಅವರನ್ನು ಬಿಟ್ಟು ಬಿಟ್ಟಿದ್ದೇಕೆ? ಈ ಬಗ್ಗೆ ಯಾರೂ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ರಶ್ಮಿ ಸಾಮಂತ್‌ ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದರು.

ನಾನು ಉಡುಪಿಯವಳು, ಉಡುಪಿಯ ಕಾಲೇಜೊಂದರಲ್ಲಿ ಮೂವರು ಮುಸ್ಲಿಂ ಯುವತಿಯರು ಅಮಾಯಕ ಹಿಂದು ಹುಡುಗಿಯರು ಟಾಯ್ಲೆಟ್‌ ಬಳಸುವುದನ್ನು ಅವರಿಗೆ ಗೊತ್ತಿಲ್ಲದಂತೆ ಚಿತ್ರೀಕರಿಸಿಕೊಂಡಿದ್ದಾರೆ. ಅದರ ವಿಡಿಯೊ ಮತ್ತು ಫೋಟೊಗಳನ್ನು ದುಷ್ಟ ಕೂಟದ ಸಂಚುಕೋರರು ತಮ್ಮ ಸಮುದಾಯದ ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ರಶ್ಮಿ ಸಾಮಂತ್‌. ನಿಮಗೆ ಸ್ವಲ್ಪವಾದರೂ ಆತ್ಮಸಾಕ್ಷಿ ಅನ್ನೋದು ಇದ್ದರೆ ಉಡುಪಿಯಲ್ಲಿ ಹಿಂದು ಹುಡುಗಿಯರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿ. ಅದರಿಂದಾಗಿಯಾದರೂ ಇವರೆಲ್ಲ ಮತ್ತೆ ಹಿಂದು ಹುಡುಗರಿಗೆ ತೊಂದರೆ ಕೊಡದಂತಾಗಲಿ ಎಂದು ರಶ್ಮಿ ಸಾಮಂತ್‌ ಬರೆದಿದ್ದಾರೆ. ರಶ್ಮಿ ಅವರು ಟ್ವೀಟ್‌ ಮಾಡಿದ್ದಲ್ಲದೆ ಶೋಭಾ ಕರಂದ್ಲಾಜೆಯವರೂ ಸೇರಿದಂತೆ ಅನೇಕ ಹಿರಿಯ ನಾಯಕರ ಜತೆಗೆ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸಂತ್ರಸ್ತರ ರಕ್ಷಣೆ ಬದಲು ಟ್ವೀಟ್‌ ಮಾಡಿದವರಿಗೆ ಕಿರುಕುಳ

ರಶ್ಮಿ ಸಾಮಂತ್‌ ಅವರು ಒಂದು ಟ್ವೀಟ್‌ ಮೂಲಕ ಬಹುತೇಕ ಮುಚ್ಚಿ ಹೋದಂತಿದ್ದ ಪ್ರಕರಣಕ್ಕೆ ಮರುಜೀವ ನೀಡಿದ್ದಾರೆ. ಆದರೆ, ಅಚ್ಚರಿ ಎಂದರೆ ಪೊಲೀಸರು ಈ ಪ್ರಕರಣದಲ್ಲಿ ಅಪರಾಧ ಮಾಡಿದವರನ್ನು ಸರಿಯಾಗಿ ವಿಚಾರಣೆ ಮಾಡುವ ಬದಲು ಟ್ವೀಟ್‌ ಮಾಡಿದ ರಶ್ಮಿ ಸಾಮಂತ್‌ ಅವರ ಮನೆಗೆ ಹೋಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ರಶ್ಮಿ ಅವರು ಮೂಲತಃ ಉಡುಪಿಯವರು. 25 ವರ್ಷದ ರಶ್ಮಿ ಅವರು ಆಕ್ಸ್‌ಫರ್ಡ್‌ ವಿವಿಯ ಪದವೀಧರೆಯಾಗಿದ್ದು, ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯೂ ಆಗಿದ್ದರು. ಅವರು ಈಗ ರಾಷ್ಟ್ರೀಯವಾದಿಯಾಗಿ ಗುರುತಿಸಿಕೊಂಡಿದ್ದು ಹಿಂದು ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರದ ಹಲವು ನಾಯಕರ ಜತೆ ಅವರ ಒಡನಾಟ ಇರುವ ಚಿತ್ರಗಳು ಕಾಣಿಸುತ್ತಿವೆ. ಉಡುಪಿಯ ಘಟನೆಯ ಬಗ್ಗೆ ತಿಳಿದ ಆಕೆ ಜುಲೈ 24ರಂದು ಟ್ವೀಟ್‌ ಮಾಡಿದ್ದರು. ಹೀಗೆ ಟ್ವೀಟ್‌ ಮಾಡಿದ ದಿನವೇ ಅವರ ಮನೆಗೆ ಪೊಲೀಸರು ಲಗ್ಗೆ ಇಟ್ಟಿದ್ದರು.

ರಾತ್ರೋರಾತ್ರಿ ಮನೆಗೆ ಹೋಗಿ ಕಿರುಕುಳ

ರಶ್ಮಿ ಸಾಮಂತ್‌ ಅವರ ಟ್ವೀಟ್‌ನ್ನು ಗಮನಿಸಿದ ಉಡುಪಿ ಪೊಲೀಸರು ಜುಲೈ 24ರ ರಾತ್ರಿಯೇ ಉಡುಪಿಯಲ್ಲಿರುವ ಅವರ ಮನೆಗೆ ಹೋಗಿದ್ದಾರೆ. ನಿಜವೆಂದರೆ, ರಶ್ಮಿ ಅವರು ಉಡುಪಿ ನಿವಾಸಿಯೇ ಆಗಿದ್ದರೂ ಅವರು ಉಡುಪಿಯಲ್ಲಿ ಇರುವುದು ಕಡಿಮೆ. ಅವರು ಪ್ರಸಕ್ತ ಉತ್ತರ ಭಾರತ ಪ್ರವಾಸದಲ್ಲಿದ್ದಾರೆ ಎನ್ನಲಾಗಿದೆ. ಮಣಿಪಾಲ ಪೊಲೀಸರು ತಾನಿಲ್ಲದ ಹೊತ್ತಿನಲ್ಲಿ ಮನೆಗೆ ಹೋಗಿ ತಂದೆ ತಾಯಿಗೆ ಕಿರುಕುಳ ನೀಡಿದ್ದಾರೆ ಎಂದು ಆಪಾದಿಸಲಾಗಿದೆ.

ರಶ್ಮಿ ಮನೆಯಲ್ಲಿ ಇಲ್ಲದಿರುವಾಗ ಭೇಟಿ ನೀಡಿದ ಪೊಲೀಸರು ಪೋಷಕರ ವಿಚಾರಣೆ ಮಾಡಿದ್ದಾರೆ. ರಶ್ಮಿ ಎಲ್ಲಿದ್ದಾರೆ ಎಂದು ತಿಳಿಸಲು ಒತ್ತಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದೀಗ ಈ ವಿಷಯ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಲವು ಬಿಜೆಪಿ ನಾಯಕರು ರಶ್ಮಿ ಪರವಾಗಿ ನಿಂತಿದ್ದು, ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಹಿಂದು ಯುವತಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂಷಿಸಿದ್ದಾರೆ. ಇದರ ಜತೆಗೆ ರಾಷ್ಟ್ರೀಯವಾದಿ ಚಿಂತಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ವ್ಯಾಖ್ಯಾನ ಮಾಡಲಾಗುತ್ತಿದೆ. ಈ ಬಗ್ಗೆ ರಶ್ಮಿ ಅವರ ವಕೀಲರಾದ ಆದಿತ್ಯ ಶ್ರೀನಿವಾಸನ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರಿಂದ ಖಂಡನೆ, ತುರ್ತು ಕ್ರಮಕ್ಕೆ ಆಗ್ರಹ

ಹಿಂದು ಮಾನವ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಅವರ ಮನೆಗೆ ಪೊಲೀಸರು ಭೇಟಿ ನೀಡಿ ಬೆದರಿಸಿದ ಪ್ರಕರಣ ಈಗ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಎನ್‌. ರವಿ ಕುಮಾರ್‌ ಸೇರಿದಂತೆ ಹಲವು ನಾಯಕರು ರಶ್ಮಿ ಅವರಿಗೆ ಬೆದರಿಕೆ ಹಾಕಿದ್ದನ್ನು ಖಂಡಿಸಿದ್ದಾರೆ.

ʻʻರಾತ್ರಿ ರಶ್ಮಿಯವರ ಮನೆಗೆ ಪೊಲೀಸರನ್ನು ಭಯಪಡಿಸಲು ಕಳಿಸಿದ್ರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಹೇಳಿದರೂ ಪೊಲೀಸ್ ಕಿರುಕುಳವಾ? @PoliceUdupi what’s happening? @DgpKarnataka @HithendrarR ನಿಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ಕ್ರಮ ಕೈಗೊಳ್ಳಿ, ಅವರಿಗೆ ರಾಜಕೀಯ ಮಾಡಬೇಕಿದ್ರೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲುವುದಕ್ಕೆ ಹೇಳಿʼʼ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಟ್ವೀಟ್‌ ಮಾಡಿದ್ದಾರೆ.

ಸುಮೋಟೊ ದೂರು ದಾಖಲಿಸಿ ತನಿಖೆಗೆ ಉಡುಪಿ ಶಾಸಕ ಯಶ್ಪಾಲ್‌ ಆಗ್ರಹ

ಈ ನಡುವೆ ಟಾಯ್ಲೆಟ್‌ನಲ್ಲಿ ವಿಡಿಯೋ ಮಾಡಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ʻʻಪ್ರಕರಣ ನಡೆದಾಗ ನಾನು ಅಧಿವೇಶನದಲ್ಲಿದ್ದೆ. ಇದೀಗ ಎಲ್ಲ ವಿಚಾರಗಳನ್ನು ಗಮನಿಸಿದ್ದೇನೆ. ತಪ್ಪಿತಸ್ಥ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಜರುಗಿಸಬೇಕು. ಈ ಮೂರು ಹುಡುಗಿಯರ ವರ್ತನೆಯಿಂದ ಉಡುಪಿ ಜಿಲ್ಲೆ ತಲೆತಗ್ಗಿಸುವಂತಾಗಿದೆ. ಇದರಿಂದ ಜಿಲ್ಲೆಯ ಜನತೆಗೆ ಅಪಮಾನವಾಗಿದೆ. ಈ ರೀತಿಯ ಹುಡುಗಾಟಿಕೆ ಮಾಡುವುದು ಸರಿಯಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂಬ ಬಗ್ಗೆ ನನಗೆ ಸಂಶಯವಿದೆʼʼ ಎಂದ ಹೇಳಿದ್ದಾರೆ.

ʻʻಟಾಯ್ಲೆಟ್ ನಲ್ಲಿ ವಿಡಿಯೊ ಕ್ಯಾಮೆರಾ ಇಟ್ಟಿರುವುದು ಸರಿಯಲ್ಲ. ಇದರಲ್ಲಿ ಬ್ಲಾಕ್‌ಮೇಲ್‌ ಮಾಡುವ ಷಡ್ಯಂತ್ರ ಇರಬಹುದು. ಮೂರು ಯುವತಿಯರ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ. ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳ ಗಮನಕ್ಕೂ ಗಮನಕ್ಕೂ ತರುತ್ತೇನೆʼʼ ಎಂದು ಯಶ್‌ಪಾಲ್‌ ಸುವರ್ಣ ಹೇಳಿದ್ದಾರೆ.

ʻʻಮೊಬೈಲ್ ದಾಖಲೆ ಕಲೆ ಹಾಕಿ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಹೇಳುತ್ತೇನೆ. ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಇದೆ. ವಿಳಂಬ ಮಾಡಿದರೆ ನ್ಯಾಯಕ್ಕಾಗಿ ಹೋರಾಡುತ್ತೇನೆ. ಕಾಲೇಜಿಗೆ ಭೇಟಿ ನೀಡಿ ಮಾತನಾಡುತ್ತೇನೆʼʼ ಎಂದಿರುವ ಅವರು, ವಿಡಿಯೋ ಕ್ಲಿಪಿಂಗ್ ಇದಿಯೋ ಇಲ್ಲವೋ ಗೊತ್ತಿಲ್ಲ ಆದರೆ ಸೂಕ್ತ ಕ್ರಮ ಜರುಗಿಸಬೇಕು ಎಂದಿದ್ದಾರೆ. ʻʻಮುಸ್ಲಿಂ ವಿದ್ಯಾರ್ಥಿನಿಯರ ನಡೆ ಸಂಶಯ ಹುಟ್ಟಿಸುತ್ತಿದೆ. ಜಿಹಾದಿ ಸಂಘಟನೆಗಳ ಕೈವಾಡ ಸಂಶಯ ಇದೆʼʼ ಎಂದಿದ್ದಾರೆ.

ಈ ಬಗ್ಗೆ ಧ್ವನಿ ಎತ್ತಿದ ರಶ್ಮಿ ಸಾಮಂತ್ ಅವರ ಮನೆಗೆ ಹೋಗಿ ಪೊಲೀಸರು ಕಿರುಕುಳ ನೀಡಿದ್ದು ಸಹಿಸಲು ಆಗದುʼʼ ಎಂದು ಅವರು ಎಚ್ಚರಿಸಿದರು.

ರಶ್ಮಿ ಸಾಮಂತ್‌ ಮನೆಗೆ ಹೋಗಿದ್ದರಲ್ಲಿ ದುರುದ್ದೇಶ ಇಲ್ಲ ಎಂದ ಎಸ್‌ಪಿ

ಮೂವರು ಮುಸ್ಲಿಂ ವಿದ್ಯಾರ್ಥಿನೀಯರಿಂದ ಹಿಂದೂ ಯುವತಿಯರ ಟಾಯ್ಲೆಟ್‌ ಬಳಕೆ ದೃಶ್ಯಗಳ ಚಿತ್ರೀಕರಣ ಮತ್ತು ರಶ್ಮಿ ಅವರ ಮನೆಗೆ ಪೊಲೀಸರ ಭೇಟಿಗೆ ಸಂಬಂಧಿಸಿ ಉಡುಪಿ ಎಸ್ ಪಿ ಅಕ್ಷಯ್ ಮಚ್ಚೀಂದ್ರ ತಮ್ಮ ನಿಲುವನ್ನು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻʻಕಳೆದ ವಾರ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜು ವಿಚಾರ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ವಿಚಾರದ ಜೊತೆ ಬೇರೆ ಬೇರೆ ಉದ್ದೇಶದಿಂದ ಮಾಹಿತಿಗಳು ಶೇರ್ ಆಗುತ್ತಿದೆ. ಹಿಡನ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಬ್ಲ್ಯಾಕ್ ಮೇಲ್ ಬಗ್ಗೆ, ವೀಡಿಯೋ ಹರಿದಾಡಿದ ಬಗ್ಗೆ ನಾವು ಗಮನ ಇಟ್ಟಿದ್ದೇವೆ. ಬೇರೆ ಕಡೆಯ ವಿಡಿಯೋ ಶೇರ್ ಆಗುತ್ತಿದೆ, ವಾಯ್ಸ್ ಎಡಿಟ್ ಮಾಡಲಾಗಿದೆ. ಸತ್ಯಾಸತ್ಯತೆ ಗೊತ್ತಿಲ್ಲದೆ ಶೇರ್ ಮಾಡಿದರೆ ತಪ್ಪಾಗುತ್ತದೆʼʼ ಎಂದು ಅವರು ಹೇಳಿದ್ದಾರೆ.

ʻʻವೈರಲ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣ fb , ವಾಟ್ಸಾಪ್ ಮೇಲೆ ನಿಗಾ ಇರಿಸಲಾಗಿದೆʼʼ ಎಂದರು.

ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಅವರ ಅಕೌಂಟ್‌ ಚೆಕ್‌ ಮಾಡಿದ್ದೇವೆ. ಇದೇ ವಿಚಾರದಲ್ಲಿ ಮನೆಯವರ ಬಳಿ ಮಾತನಾಡಿದ್ದೇವೆ. ಯಾವುದೇ ದುರುದ್ದೇಶದಿಂದ ಮಾಹಿತಿ ಪಡೆದುಕೊಂಡದ್ದಲ್ಲ ಎಂದು ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಹಿತಾಸಕ್ತಿಯಿಂದ ಸುಮೋಟೋ ತೆಗೆದುಕೊಳ್ಳಲು ಕ್ಲೂ ಸಿಗುತ್ತಿಲ್ಲ. ಯುವತಿಯರ ಮೊಬೈಲ್ ನಲ್ಲಿ ಯಾವುದೇ ಫೋಟೋ ವೀಡಿಯೋ, ಮಾಹಿತಿ ಸಿಗುತ್ತಿಲ್ಲ. ಕಾಲೇಜ್ ಹಂತದಲ್ಲಿ ವಿಚಾರಣೆ ಮಾಡಿದ್ದಾರೆ. ಅವರ ನಿಯಮ ಪ್ರಕಾರ ವಿಚಾರಿಸಿದ್ದಾರೆ. ನಾವು ಗೆಳತಿಯರು ಫನ್ ಗೋಸ್ಕರ ಇದೆಲ್ಲಾ ನಡೆದಿದೆ ಎಂದು ಕೈಬರಹದಲ್ಲಿ ಕೊಟ್ಟಿದ್ದಾರೆ ಎಂದಿರುವ ಎಸ್‌ಪಿ ಅಕ್ಷಯ್‌ ಅವರು, ಬೇಡದ ವಿಚಾರ ಹರಿಯಬಿಟ್ಟು ಜನರ ಮನಸ್ಸಲ್ಲಿ ಗೊಂದಲ ಸೃಷ್ಟಿಸುವ ಪೋಸ್ಟ್ ಹಾಕಬೇಡಿ. ದಾಖಲೆ ಇದ್ದರೆ ಹಂಚಿಕೊಳ್ಳಿ ಪೊಲೀಸ್ ತನಿಖೆ ಗೆ ಸಹಕರಿಸಿ. ತಪ್ಪಾದ, ಸುಳ್ಳು ಮಾಹಿತಿ ಫೋಟೊ ವಿಡಿಯೊ ಹಂಚಿಕೊಳ್ಳಬೇಡಿ ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Harrassment case : ಕಾಲೇಜಿನ ಲೇಡಿಸ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರು!

ಉಡುಪಿ/ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ (Nethrajyothi College udupi) ಮೂವರು ಮುಸ್ಲಿಂ ವಿದ್ಯಾರ್ಥಿನಿಯರು (Three Muslim students) ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ಇತರ ಹೆಣ್ಮಕ್ಕಳು ಶೌಚಾಲಯ ಬಳಸುವುದನ್ನು ಚಿತ್ರೀಕರಿಸಿಕೊಂಡ (mobile shooting at Ladies toilet) ಪ್ರಕರಣ ಇದೀಗ ಹೊಸ ತಿರುವನ್ನು ಪಡೆದುಕೊಂಡಿದೆ. ಕಾಲೇಜಿನಲ್ಲಿ ನಡೆದ ಈ ಘಟನೆಯನ್ನು ವಿದ್ಯಾರ್ಥಿನಿಯರ ಅಮಾನತಿನ ಮೂಲಕ ಮುಕ್ತಾಯಗೊಳಿಸಲಾಗಿದೆ. ಈ ನಡುವೆ, ಮುಸ್ಲಿಂ ಯುವತಿಯರ ಈ ಕೃತ್ಯದ ಹಿಂದೆ ದೊಡ್ಡದೊಂದು ಜಾಲವಿದೆ, ಚಿತ್ರೀಕರಿಸಿದ ದೃಶ್ಯಗಳನ್ನು ಅವರು ತಮ್ಮ ಸಮುದಾಯದ ಹುಡುಗರಿಗೆ ಕಳುಹಿಸಿದ್ದರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ, ತನಿಖೆಯನ್ನೂ ನಡೆಸುತ್ತಿಲ್ಲ ಎಂದು ಆಪಾದಿಸಿದ ರಶ್ಮಿ ಸಾವಂತ್‌ (Rashmi samant) ಎಂಬ ಯುವತಿಯೊಬ್ಬರು ಟ್ವೀಟ್‌ ಮಾಡಿದ್ದರು. ಈಗ ಉಡುಪಿ ಪೊಲೀಸರು ಆಕೆಯ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆಪಾದನೆ ಭಾರಿ ಚರ್ಚೆಗೆ ಕಾರಣವಾಗಿದೆ.

Exit mobile version